ರೈತ ಸಂಪರ್ಕ ಕೇಂದ್ರಕ್ಕೆ ಉಪ ಲೋಕಾಯುಕ್ತರ ಭೇಟಿ

| Published : Feb 13 2025, 12:47 AM IST

ಸಾರಾಂಶ

ಹಾವೇರಿ ನಗರದ ರೈತ ಸಂಪರ್ಕ ಕೇಂದ್ರಕ್ಕೆ ಬುಧವಾರ ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಅವರು ಭೇಟಿ ನೀಡಿ, ರೈತರ ಯೋಜನೆಗಳ ಕುರಿತು ಮಾಹಿತಿ ಪಡೆದುಕೊಂಡರು.

ಹಾವೇರಿ: ನಗರದ ರೈತ ಸಂಪರ್ಕ ಕೇಂದ್ರಕ್ಕೆ ಬುಧವಾರ ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಅವರು ಭೇಟಿ ನೀಡಿ, ರೈತರ ಯೋಜನೆಗಳ ಕುರಿತು ಮಾಹಿತಿ ಪಡೆದುಕೊಂಡರು.

ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆ, ಬೇಸಿಗೆಯಲ್ಲಿ ರಿಯಾಯಿತಿ ದರದಲ್ಲಿ ಕೃಷಿ ಉತ್ಪನ್ನಗಳ ಉಪಕರಣ ನೀಡುವುದು, ಹನಿ ನೀರಾವರಿ ಉಪಕರಣ ಒದಗಿಸುವುದು, ಟ್ರ್ಯಾಕ್ಟರ್ ಉಪಕರಣ ವಿತರಣೆ, ರಸ ಗೊಬ್ಬರಗಳ ವಿತರಣೆ ಮಾಡಲಾಗುತ್ತದೆ ಎಂದು ಉಪ ಲೋಕಾಯುಕ್ತರಿಗೆ ಮಾಹಿತಿ ನೀಡಿದರು. ಈಗ ಸದ್ಯಕ್ಕೆ ರೈತರಿಗೆ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಡಲಾಗುತ್ತದೆ. ಅದರ ಜೊತೆ ತಾಡಪಲ್ ನೀಡಲಾಗುವುದು. ಇಲ್ಲಿ ರೈತರ ಹೆಸರಿಗೆ ಶೇ. 75ರಷ್ಟು ಬಿಲ್ ಮಾಡಲಾಗುವುದು. ಕೃಷಿ ಹೊಂಡ ಪೂರ್ಣವಾದ ಮೇಲೆ ಬಾಕಿ ಉಳಿದ ಶೇ. 25ರಷ್ಟು ಬಿಲ್ ಪಾವತಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಯೋಜನೆಗಳ ಆಯ್ಕೆಗೆ ರೈತರನ್ನು ಎಫ್‌ಐಡಿ ಮೂಲಕ ವಯಸ್ಸಿನ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಗುಜರಾತ್ ಹಾಗೂ ಮಹಾರಾಷ್ಟ್ರದಿಂದ ಖರೀದಿಸಿದ ಟ್ರ್ಯಾಕ್ಟರ್ ಹೇಗೆ ಉಪಕರಣ ನೀಡಿದಿರಿ, ಇದು ಸಾಧ್ಯವೇ? ಈ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ಉಪ ಲೋಕಾಯುಕ್ತರು ಕೃಷಿ ಉಪಕರಣಗಳ ಸಂಗ್ರಹಣೆ ಕೊಠಡಿಗೆ ತೆರಳಿ ಸಂಗ್ರಹಿಸಿದ ಉಪಕರಣಗಳನ್ನು ಪರಿಶೀಲಿಸಿದರು. ಹೊರಗುತ್ತಿಗೆ ನೌಕರ ಫಕ್ಕೀರಪ್ಪ ಹಾಗೂ ವಿರೇಶ ಎಂಬುವರಿಂದ 6 ಖಾತೆಗಳಿಂದ ವಿವಿಧ ಜನರಿಗೆ ಫೋನ್‌ ಪೇ ಮೂಲಕ ಹಣ ವರ್ಗಾವಣೆ ಮಾಡಿದ್ದು, ಮೇಲ್ನೋಟಕ್ಕೆ ಹೊರಗುತ್ತಿಗೆ ನೌಕರರಿಂದ ಅವ್ಯವಹಾರ ಆಗುತ್ತಿರುವುದು ಕಂಡು ಬರುತ್ತಿದೆ. ಇವರ ಒಂದು ವರ್ಷದ ಬ್ಯಾಕ್ ಖಾತೆಯ ಸ್ಟೇಟ್‌ಮೆಂಟ್ ಹಾಗೂ ವರದಿಯನ್ನು ಗುರುವಾರದೊಳಗೆ ಸಲ್ಲಿಸಲು ಕೃಷಿ ಇಲಾಖೆ ಡಿಡಿ ಮಲ್ಲಿಕಾರ್ಜುನ ಅವರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.ಕಂದಾಯ ಅಧಿಕಾರಿ ಬ್ಯಾಂಕ್ ವಹಿವಾಟು ಮಾಹಿತಿಗೆ ಸೂಚನೆ

ಹಾವೇರಿ: ಇಲ್ಲಿಯ ನಗರಸಭೆ ಕಂದಾಯ ಅಧಿಕಾರಿ ದುಗ್ಗೇಶ ಅವರು ಹಲವರಿಗೆ ಫೋನ್‌ಪೇ ಮೂಲಕ ಹಣ ವರ್ಗಾವಣೆ ಮಾಡಿರುವುದು ಕಂಡುಬಂದಿದ್ದು, ಸಂಬಂಧಿಸಿದ ನೌಕರರ ಮೂರು ವರ್ಷದ ಬ್ಯಾಂಕ್ ಖಾತೆ ದಾಖಲೆ ಪಡೆದು ಮಾಹಿತಿಯೊಂದಿಗೆ ವರದಿ ಸಲ್ಲಿಸುವಂತೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಸೂಚಿಸಿದರು.

ನಗರಸಭೆಗೆ ಬುಧವಾರ ಅವರು ಭೇಟಿ ನೀಡಿ ವಿವಿಧ ಕಡತಗಳನ್ನು ಪರಿಶೀಲಿಸಿದರು. ನಗರಸಭೆಯಿಂದ ಬಾಕಿ ಉಳಿದ ಖಾತಾಗಳೆಷ್ಟು ಹಾಗೂ ಸರ್ವೇ ಇಲ್ಲದೆ, ಕೃಷಿ ಭೂಮಿಯನ್ನು ಎನ್‌ಎ ಇಲ್ಲದ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಹೇಗೆ ಅನುಮತಿ ನೀಡಿದ್ದೀರಿ, ಎಷ್ಟು ಕಾನೂನುಬಾಹಿರ ಕಟ್ಟಡಗಳಿಗೆ ಅನುಮತಿ ನೀಡಿದ್ದೀರಿ, ಎರಡು ಅಂತಸ್ತು ಮನೆ ನಿರ್ಮಾಣ ಮಾಡಲು ಎಷ್ಟು ಡೈವಷನ್ ಪ್ರಕರಣಗಳಿವೆ, ಈ ವರೆಗೆ ಎಷ್ಟು ಟ್ರೇಡ್ ಲೈಸನ್ಸ್ ಕೊಟ್ಟಿದ್ದೀರಿ ಹಾಗೂ ಎಷ್ಟು ಕಾನೂನು ಬಾಹಿರ ವ್ಯಾಪಾರಗಳು ನಡೆಯುತ್ತಿವೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು. ಸಂಬಂಧಿಸಿದವರಿಗೆ ನೋಟಿಸ್ ನೀಡಿ ವರದಿ ಪಡೆದು ಸಲ್ಲಿಸುವಂತೆ ನಗರಸಭೆ ಪೌರಾಯುಕ್ತ ಚನ್ನಪ್ಪ ಅವರಿಗೆ ಸೂಚಿಸಿದರು.