ಸಾರಾಂಶ
ದೇರಳಕಟ್ಟೆಯ ನಿಟ್ಟೆ ಗ್ರೌಂಡ್ಸ್ ನಲ್ಲಿ ಬುಧವಾರ ದಕ್ಷಿಣ ಭಾರತ ಅಂತರ್ ಕಾಲೇಜು ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ನಿಟ್ಟೆ ಫಿಸಿಯೋ ಪ್ರೀಮಿಯರ್ ಲೀಗ್ -2025 ರ ಉದ್ಘಾಟನೆ ನೆರವೇರಿತು.
ಕನ್ನಡಪ್ರಭ ವಾರ್ತೆ ಉಳ್ಳಾಲ
ಕ್ರೀಡಾಳುಗಳಿಗೆ ಆರೋಗ್ಯದ ಸಲಹೆ ನೀಡುತ್ತಾ ಸದಾ ಸ್ಫೂರ್ತಿಯಾಗಿ ಬೆನ್ನಿಗೆ ನಿಲ್ಲುವವರು ಫಿಸಿಯೋಥೆರಪಿಗಳು, ಆಟಗಾರರ ಸಂಧಿಗ್ಧ ಸ್ಥಿತಿಗಳಲ್ಲಿ ಮರಳಿ ಕ್ರೀಡಾ ಕ್ಷೇತ್ರಕ್ಕೆ ಹೋಗುವಂತಹ ಜೀವನ ನೀಡುವ ಫಿಸಿಯೋಥೆರಪಿಗಳ ಸೇವೆ ಸದಾ ಸ್ಮರಣೀಯ ಎಂದು ಇಂಡಿಯಾ ಎ ಟೀಮ್ ಕ್ರಿಕೆಟ್ ಆಟಗಾರ ವಿದ್ವತ್ ಕಾವೇರಪ್ಪ ಅಭಿಪ್ರಾಯಪಟ್ಟಿದ್ದಾರೆ.ದೇರಳಕಟ್ಟೆಯ ನಿಟ್ಟೆ ಗ್ರೌಂಡ್ಸ್ ನಲ್ಲಿ ಬುಧವಾರ ಜರಗಿದ ದಕ್ಷಿಣ ಭಾರತ ಅಂತರ್ ಕಾಲೇಜು ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ನಿಟ್ಟೆ ಫಿಸಿಯೋ ಪ್ರೀಮಿಯರ್ ಲೀಗ್ -2025 ರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ ಉಪಕುಲಾಧಿಪತಿ ಡಾ.ಶಾಂತಾರಾಮ ಶೆಟ್ಟಿ, 16 ತಂಡಗಳ ನಡುವೆ ಕ್ರೀಡೆ ನಡೆಯಲಿದ್ದು, ಪರಸ್ಪರ ಇನ್ನೊಬ್ಬರನ್ನು ಅರಿತುಕೊಳ್ಳಲು ಕ್ರೀಡೆ ಸಹಕಾರಿ. ಕ್ರಿಕೆಟ್ ಆಟಕ್ಕೆ ಅದರದ್ದೇ ಆದ ಗೌರವವಿದೆ. ಭಾರತ ತಂಡ ಅದಕ್ಕೆ ತಕ್ಕುದಾದ ಮನ್ನಣೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಡೆಯುತ್ತಾ ಬಂದಿದೆ. ವಿದ್ವತ್ ಕಾವೇರಪ್ಪ ಅವರ ಅಸ್ಥಿ ಬಿರುಕಿನ ಕಾರಣದಿಂದ ಪ್ರಸಕ್ತ ವರ್ಷದ ಐಪಿಎಲ್ ನಲ್ಲಿ ಆಟವಾಡಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಆಟವಾಡುವ ಆಟಗಾರನಾಗಲಿ ಎಂದು ಶುಭಹಾರೈಸಿದರು.ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.ಕುಲಪತಿ ಡಾ. ಎಂ.ಎಸ್ ಮೂಡಿತ್ತಾಯ, ನಿಟ್ಟೆ ವಿವಿ ಸಹಕುಲಾಧಿಪತಿ ಡಾ.ಎಂ.ಶಾಂತರಾಮ ಶೆಟ್ಟಿ , ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕರುಣಾಕರ್ ಶೆಟ್ಟಿ, ಕ್ಷೇಮ ಡೀನ್ ಡಾ. ಸಂದೀಪ್ ರೈ, ಎ.ಬಿ ಶೆಟ್ಟಿ ದಂತ ವಿದ್ಯಾಲಯದ ಡೀನ್ ಡಾ. ಮಿತಾ ಹೆಗ್ಡೆ, ಸಂಘಟನಾ ಕರ‍್ಯದರ್ಶಿ ಪುಷ್ಪರಾಜ್ ಕುಲಾಲ್ ಇದ್ದರು.
ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಡಾ.ಧನೇಶ್ ಕುಮಾರ್ ಕೆ.ಯು ಸ್ವಾಗತಿಸಿದರು. ಸಮೀನಾ ಮನ್ನಾ ನಿರೂಪಿಸಿದರು. ಪ್ರೊ.ರಾಕೇಶ್ ಕೃಷ್ಣ ವಂದಿಸಿದರು.