ಸಾರಾಂಶ
ಯೆನೆಪೋಯ, ಕೆ.ಎಸ್. ಹೆಗ್ಡೆ ಆಸ್ಪತ್ರೆ ಹೊರತಪಡಿಸಿ ಕಣಚೂರು ಆಸ್ಪತ್ರೆಗಳಿಗೆ ಹೊರಜಿಲ್ಲೆ ಹಾಗೂ ಕೇರಳ ಭಾಗದಿಂದ ಬರುವ ರೋಗಿಗಳು ವೈದ್ಯರಿಲ್ಲದೆ ಪರದಾಡಬೇಕಾಯಿತು.
ಕನ್ನಡಪ್ರಭ ವಾರ್ತೆ ಉಳ್ಳಾಲ
ಕೊಲ್ಕತ್ತಾದ ಆರ್.ಜಿ. ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆದ ಹಿಂಸಾಚಾರ ಹಾಗೂ ಎಂಡಿಎಸ್ ವಿದ್ಯಾರ್ಥಿನಿಯ ಅತ್ಯಾಚಾರ, ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ದೇರಳಕಟ್ಟೆ ಭಾಗದಲ್ಲಿರುವ ನಾಲ್ಕು ವೈದ್ಯಕೀಯ ಕಾಲೇಜುಗಳು ಶನಿವಾರ ಹೊರರೋಗಿಗಳ ವಿಭಾಗಗಳನ್ನು ಸ್ಥಗಿತಗೊಳಿಸಿ, ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿವೆ.ದೇರಳಕಟ್ಟೆಯಲ್ಲಿರುವ ಯೆನೆಪೋಯ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜು, ನರಿಂಗಾನದ ಯೆನೆಪೋಯ ಆಯುರ್ವೇದ ಕಾಲೇಜು, ಕೆ.ಎಸ್. ಹೆಗ್ಡೆ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜು, ಫಾದರ್ ಮುಲ್ಲರ್ ಹೋಮಿಯೋಪತಿ ಆಸ್ಪತ್ರೆ ಹಾಗೂ ಕಣಚೂರು ಆರೋಗ್ಯ ವಿಜ್ಞಾನಗಳ ಸಂಸ್ಥೆಗಳಲ್ಲಿ ಶನಿವಾರ ಬೆಳಗ್ಗಿನಿಂದ ಸಂಜೆಯವರೆಗೆ ಹೊರರೋಗಿ ವಿಭಾಗಗಳನ್ನು ಸ್ಥಗಿತಗೊಳಿಸಿತು. ನಾಲ್ಕು ಆಸ್ಪತ್ರೆಗಳಿಂದ ಸುಮಾರು ೧,೦೦೦ ಮಂದಿ ವೈದ್ಯರು, ವೈದ್ಯ ವಿದ್ಯಾರ್ಥಿಗಳು ಮಂಗಳೂರಿನ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಓ) ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ರೋಗಿಗಳ ಪರದಾಟ: ಯೆನೆಪೋಯ, ಕೆ.ಎಸ್. ಹೆಗ್ಡೆ ಆಸ್ಪತ್ರೆ ಹೊರತಪಡಿಸಿ ಕಣಚೂರು ಆಸ್ಪತ್ರೆಗಳಿಗೆ ಹೊರಜಿಲ್ಲೆ ಹಾಗೂ ಕೇರಳ ಭಾಗದಿಂದ ಬರುವ ರೋಗಿಗಳು ವೈದ್ಯರಿಲ್ಲದೆ ಪರದಾಡಬೇಕಾಯಿತು. ಮಾಹಿತಿಯ ಕೊರತೆಯಿಂದ ಆಸ್ಪತ್ರೆಗಳಿಗೆ ಬೆಳ್ಳಂಬೆಳಿಗ್ಗೆ ರೋಗಿಗಳು ಆಗಮಿಸಿದ್ದರು. ಆದರೆ ಹೊರರೋಗಿ ವಿಭಾಗಗಳು ಬೆಳಗ್ಗಿನಿಂದ ಸಂಜೆಯವರೆಗೆ ಸ್ಥಗಿತಗೊಂಡಿದ್ದು, ತುರ್ತು ನಿಗಾ ಘಟಕಗಳು ಮಾತ್ರ ಕಾರ್ಯನಿರ್ವಹಿಸಿದವು.ಮೌನ ಮೆರವಣಿಗೆ : ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ, ದಂತ ವೈದ್ಯಕೀಯ, ಪ್ಯಾರಾಮೆಡಿಕಲ್, ನರ್ಸಿಂಗ್ ವಿಭಾಗದ ಸುಮಾರು ೫೦೦ ಕ್ಕಿಂತ ಅಧಿಕ ವಿದ್ಯಾರ್ಥಿಗಳು ಹಾಗೂ ವೈದ್ಯರು ಆಸ್ಪತ್ರೆ ಆವರಣದಲ್ಲಿ ಮೌನ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ವೈದ್ಯಕೀಯ ಕಾಲೇಜುಗಳ ಡೀನ್ ಡಾ. ಜಯಪ್ರಕಾಶ್ ಶೆಟ್ಟಿ, ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಫಾರೆನ್ಸಿಕ್ ವಿಭಾಗ ಮುಖ್ಯಸ್ಥ ಡಾ. ಮಹಾಬಲೇಶ್ ಶೆಟ್ಟಿ, ವೈದ್ಯಕೀಯ ಅಧೀಕ್ಷಕಿ ಡಾ. ಸುಮಲತಾ ಆರ್. ಶೆಟ್ಟಿ, ಪ್ರೊ. ಸೂರಜ್ ಶೆಟ್ಟಿ, ಪಿಆರ್ ಓ ಹೇಮಂತ್ ಶೆಟ್ಟಿ ಇತರರು ಉಪಸ್ಥಿತರಿದ್ದರು.