ಶಿರಸಿಯಲ್ಲಿ ನಿರ್ವಹಣೆಯಿಲ್ಲದೇ ಅವಸಾನ ಕಂಡ ಮಾರ್ಗಸೂಚಕ ಫಲಕಗಳು

| Published : Dec 19 2024, 12:31 AM IST

ಸಾರಾಂಶ

ಶಿರಸಿಯ ಎಲ್ಲ ೩೧ ವಾರ್ಡ್‌ಗಳಲ್ಲಿ ಒಟ್ಟು ೬೦೦ ಫಲಕಗಳನ್ನು ಅಳವಡಿಸಲಾಗಿದೆ. ನಾಮಫಲಕ ಅಳವಡಿಕೆ ಕಾಮಗಾರಿ ನಡೆದು ನಾಲ್ಕೈದು ವರ್ಷಗಳು ಕಳೆದಿವೆ. ಆದರೆ ಬಹುತೇಕ ಕಡೆ ನಾಮಫಲಕಗಳು ತುಕ್ಕು ಹಿಡಿದ ಸ್ಥಿತಿಗೆ ತಲುಪಿವೆ.

ಪ್ರವೀಣ ಹೆಗಡೆ ಕರ್ಜಗಿಶಿರಸಿ: ನಗರ ವ್ಯಾಪ್ತಿಯಲ್ಲಿ ನಗರಸಭೆಯಿಂದ ಲಕ್ಷಾಂತರ ರು. ವೆಚ್ಚ ಮಾಡಿ ಅಳವಡಿಸಲಾದ ಮಾರ್ಗಸೂಚಕ ಮತ್ತು ಸ್ಥಳದ ಹೆಸರಿರುವ ನಾಮಫಲಕಗಳು ನಿರ್ವಹಣೆಯಿಲ್ಲದೇ ಹಾಳಾಗುತ್ತಿದ್ದು, ಕೆಲ ವಾರ್ಡ್‌ಗಳಲ್ಲಿರುವ ನಾಮಫಲಕಗಳು ಉದುರಿಬಿದ್ದರೂ ಸರಿಪಡಿಸಲು ನಗರಸಭೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ನಗರದ ೩೧ ವಾರ್ಡ್ ವ್ಯಾಪ್ತಿಯಲ್ಲಿ ೨೦೨೦ರಲ್ಲಿ ಅನುಷ್ಠಾನಗೊಂಡ ನಗರೋತ್ಥಾನ ಯೋಜನೆಯಡಿ ಅಂದಾಜು ₹೫೦ ಲಕ್ಷ ವೆಚ್ಚದಲ್ಲಿ ನಾಮಫಲಕ ಅಳವಡಿಕೆ ಮಾಡಲಾಗಿದೆ. ಎಲ್ಲ ೩೧ ವಾರ್ಡ್‌ಗಳಲ್ಲಿ ಒಟ್ಟು ೬೦೦ ಫಲಕಗಳನ್ನು ಅಳವಡಿಸಲಾಗಿದೆ. ನಾಮಫಲಕ ಅಳವಡಿಕೆ ಕಾಮಗಾರಿ ನಡೆದು ನಾಲ್ಕೈದು ವರ್ಷಗಳು ಕಳೆದಿವೆ. ಆದರೆ ಬಹುತೇಕ ಕಡೆ ನಾಮಫಲಕಗಳು ತುಕ್ಕು ಹಿಡಿದ ಸ್ಥಿತಿಗೆ ತಲುಪಿವೆ.

ಕೆಲವೆಡೆ ನಾಮಫಲಕಗಳೇ ಮಾಯವಾದರೆ, ಇನ್ನೂ ಕೆಲವೆಡೆ ಪಾಚಿ ಹಿಡಿದು ಸಂಪೂರ್ಣ ಹೆಸರು ಮಸುಕಾಗಿವೆ. ರಸ್ತೆ, ಕಾಲುವೆ, ಪೈಪ್‌ಲೈನ್ ಮತ್ತಿತರ ಕಾಮಗಾರಿ ನಡೆದ ವೇಳೆ ನಾಮಫಲಕಗಳಿಗೆ ಹಾನಿಯಾಗಿ ಕೆಳಕ್ಕುರುಳಿವೆ. ಇದಕ್ಕೆಲ್ಲ ಸರಿಯಾದ ನಿರ್ವಹಣೆ ಇಲ್ಲದಿರುವುದು ಪ್ರಮುಖ ಕಾರಣವಾಗಿದೆ. ಜನರು ನೀಡಿದ ತೆರಿಗೆ ಹಣವನ್ನು ಬಳಸಿಕೊಂಡು ಈ ನಾಮಫಲಕ ಹಾಕಲಾಗಿತ್ತು. ಕೆಲ ವಾರ್ಡ್‌ಗಳಲ್ಲಿ ಸರಿಯಿದ್ದು, ಹಲವೆಡೆ ಪ್ರಯೋಜನಕ್ಕೆ ಬರದಂತಾಗಿದೆ.

ಗುತ್ತಿಗೆದಾರರ ನಿರ್ವಹಣೆ ಅವಧಿ ಮುಗಿದರೆ ನಗರಸಭೆಯಿಂದಲಾದರೂ ಕಡ್ಡಾಯ ನಿರ್ವಹಣೆ ಆಗಬೇಕು. ಅದಿಲ್ಲದೆ ನಾಮಫಲಕಗಳಲ್ಲಿನ ಅಕ್ಷರ ಕಾಣದಿದ್ದರೆ ಹಣ ವ್ಯಯಿಸಿ ಫಲಕ ಹಾಕಿರುವುದಾದರೂ ಏಕೆ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.ಈ ಹಿಂದೆ ನಗರಸಭೆ ಸದಸ್ಯರ ಸಭೆ ಕರೆದು, ಆಯಾ ವಾರ್ಡ್‌ನ ವೃತ್ತಗಳು, ಓಣಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಫಲಕ ಅಳವಡಿಸಲಾಗಿದೆ. ನಗರೋತ್ಥಾನ ಕಾಮಗಾರಿಗೆ ಮೀಸಲಿಟ್ಟ ಹಣವನ್ನು ನಾಮಫಲಕಗಳ ಅಳವಡಿಕೆಗೆ ವಿಶೇಷ ಠರಾವು ಮಾಡಿ ಬಳಸಿಕೊಳ್ಳಲಾಗಿತ್ತು.

ಆರಂಭದ ವರ್ಷಗಳಲ್ಲಿ ಇದರಿಂದ ಜನರಿಗೆ ಸಾಕಷ್ಟು ಅನುಕೂಲವಾಗಿತ್ತು. ಆದರೆ ಇತ್ತೀಚೆಗೆ ನಾಮಫಲಕಗಳಿದ್ದರೂ ಅದರಲ್ಲಿನ ಹೆಸರು ಕಾಣದ ಸ್ಥಿತಿಯಿದೆ. ಹಲವೆಡೆ ಬಿದ್ದು ಹೋಗಿವೆ. ಇವುಗಳನ್ನು ನಿರ್ವಹಿಸಬೇಕಾದ ಅಧಿಕಾರಿಗಳು ಇದರ ಬಗ್ಗೆ ಕ್ರಮವಹಿಸುತ್ತಿಲ್ಲ ಎನ್ನುತ್ತಾರೆ ನಗರಸಭೆ ಸದಸ್ಯರು.ನಿರ್ವಹಣೆಗೂ ನೀಡಲಿ ಅನುದಾನ

ಶಿರಸಿ ನಗರಸಭೆಯು ಹೊಸ ಹೊಸ ಯೋಜನೆಯನ್ನು ಜಾರಿಗೊಳಿಸುತ್ತದೆ. ಆನಂತರ ಆ ಯೋಜನೆ ನಿರ್ವಹಣೆಗೆ ಜವಾಬ್ದಾರಿ ಕೈಗೊಳ್ಳುವುದಿಲ್ಲ. ಬಹುತೇಕ ಯೋಜನೆಗಳು ನಿರ್ವಹಣೆಯಿಲ್ಲದೇ ಹಾಳು ಸುರಿಯುತ್ತವೆ. ಯೋಜನೆ ಅನುಷ್ಠಾನದ ಜತೆ ಪ್ರತಿವರ್ಷವೂ ನಿರ್ವಹಣೆ ಮಾಡಲು ಅನುದಾನ ಕಾಯ್ದಿರಿಸಬೇಕು. ಆದರೆ ಮಾತ್ರ ಎಲ್ಲವೂ ಸುಸ್ಥಿತಿಯಲ್ಲಿರಲು ಸಾಧ್ಯ. ಬಹುತೇಕ ಕಡೆ ಅಳವಡಿಸಿದ್ದ ನಾಮಫಲಕಗಳು ಹಾಳಾಗುತ್ತಿವೆ. ಅದನ್ನು ಸರಿಯಾಗಿ ನಿರ್ವಹಣೆ ಮಾಡಲು ಆದ್ಯತೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಶೀಘ್ರ ಆರಂಭ: ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೈಪ್ ಜೋಡಣೆ ಕಾರ್ಯ ನಡೆಯುತ್ತಿದ್ದು, ಅದು ಮುಗಿದ ವಾರ್ಡ್‌ಗಳ ನಾಮಫಲಕಗಳನ್ನು ಸ್ವಚ್ಛಗೊಳಿಸುವ ಕೆಲಸ ಶೀಘ್ರ ಆರಂಭಿಸಲಾಗುತ್ತದೆ ಎಂದು ಶಿರಸಿ ನಗರಸಭೆ ಪೌರಾಯುಕ್ತ ಕಾಂತರಾಜು ತಿಳಿಸಿದರು.