ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ಈ ಮೂರ ಜನ ಶಿಕ್ಷಕರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಕರ್ತವ್ಯಲೋಪದ ಆಧಾರದ ಮೇಲೆ ಮಧುಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್.ಹನುಮಂತರಾಯಪ್ಪ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.ಹಳೇಇಟಕಲೋಟಿ ಗ್ರಾಮದ ಸರ್ವೇ ನಂ.48ರಲ್ಲಿ 3.ಎಕರೆ 33 ಗುಂಟೆ ಜಮೀನಿನ ಭೂ ಮಂಜೂರಾತಿ ವಿಚಾರದಲ್ಲಿ ದಾಖಲಾತಿಗಳನ್ನು ತಿದ್ದಿ ನಕಲಿ ಸಾಗುವಳಿ ಪಡೆದ ಪ್ರಕರಣದ ಹಿನ್ನಲೆಯಲ್ಲಿ ಶಿಕ್ಷಕನ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಉಪವಿಭಾಗಾಧಿಕಾರಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಲಾ ಸಹ ಶಿಕ್ಷಕ ವೆಂಕಟಪ್ಪರನ್ನು ಅಮಾನತುಗೊಳಿಸಲಾಗಿದೆ.
ಕೊಡಿಗೇನಹಳ್ಳಿ ಹೋಬಳಿ ದೊಡ್ಡದಾಳವಾಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎ.ಆರ್.ಸಂಜೀವಮೂರ್ತಿ ಶಾಲೆಯಲ್ಲಿ ಮಕ್ಕಳಿಗೆ ಅಸುರಕ್ಷತೆಯ ಸ್ಪರ್ಶ ಮಾಡುತ್ತಾರೆ ಎಂದು ಮಕ್ಕಳ ಸಹಾಯವಾಣಿ -1098ಕ್ಕೆ ಕರೆ ಮಾಡಿದ್ದು. ಮಕ್ಕಳ ಸಹಾಯವಾಣಿಯ ಕಚೇರಿ ಸಿಬ್ಬಂದಿ ಸಂಬಂಧಪಟ್ಟ ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆ ಸಮಾಲೋಚಿಸಿದಾಗ ಶಿಕ್ಷಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಹೆಣ್ಣುಮಕ್ಕಳನ್ನು ಶೌಚಾಲಯಕ್ಕೆ ಬಿಡದೇ ಸತಾಯಿಸುವುದು. ಪಾಠ ಪ್ರವಚನಗಳನ್ನು ಸಕಾಲಕ್ಕೆ ಮುಗಿಸದೇ ಮಕ್ಕಳಿಗೆ ಅಸುರಕ್ಷತೆಯ ಸ್ಪರ್ಶ ಮಾಡಿರುವ ಕುರಿತು ಸಮಾಲೋಚನೆಯಲ್ಲಿ ಮಕ್ಕಳು ಶಿಕ್ಷಕರ ವಿರುದ್ಧ ಆರೋಪಿಸಿದ್ದರ ಪರಿಣಾಮ ಈ ಶಿಕ್ಷಕರನ್ನು ಅಮಾನತು ಮಾಡಲಾಗಿದೆ.ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲಾ ಮುಖ್ಯ ಶಿಕ್ಷಕಿ ಎಚ್.ಎಸ್.ಅನುಪಮಾ ಪಿಎಂಶ್ರೀ ಯೋಜನೆಯ ಅನುದಾನವನ್ನು ಸಮರ್ಪಕವಾಗಿ ಬಳಸಿಲ್ಲ, ಶಾಲಾ ಅನುದಾನ ದುರ್ಬಳೆಯಾಗಿದ್ದು, 2023ರ ಸೆ.12 ರಂದು ತಪಾಸಣೆಯಲ್ಲಿ 25.000 ರುಗಳನ್ನು ಶಾಲೆಯ ಆಯಾ ಗೌರಿಬಾಯಿ ಹೆಸರಿನಲ್ಲಿ ಚೆಕ್ ನೀಡಿ ಒಂದೇ ಸಲ ನಗದು ಪಡೆದಿದ್ದು, 2023-24ನೇ ಸಾಲಿನಲ್ಲಿ ಪಿಎಂಶ್ರೀ ಅನುದಾನದಲ್ಲಿ 6.30 ಲಕ್ಷ ಬಿಡುಗಡೆಯಾಗಿದ್ದು ಈ ಪೈಕಿ ಮಾರ್ಚಿ 2024ರ ಅಂತ್ಯಕ್ಕೆ 76.313 ರು ಖರ್ಚಾಗಿರುತ್ತದೆ. ಈ ಹಣದಲ್ಲಿ 18.750 ರು.ಗಳಿಗೆ ಸಮರ್ಪಕ ದಾಖಲೆಗಳಿಲ್ಲ, ಪಿಎಂಶ್ರೀ ಅನುದಾನದಲ್ಲಿ ಡಿಜಿಟಲ್ ಗ್ರಂಥಾಲಯಕ್ಕೆ 2,93,877 ರುಗಳನ್ನು ಖರ್ಚು ಮಾಡಿದ್ದು ಇದಕ್ಕೆ ಸರಿಯಾದ ಬಿಲ್ ಇಲ್ಲ, ಇದಕ್ಕೆ ಆದಾಯ ತೆರಿಗೆ ಕಟಾವು ಮಾಡಿಲ್ಲ ಇನ್ನು ಹಲವು ಕರ್ತವ್ಯ ಲೋಪಗಳನ್ನು ಗುರುತಿಸಿ ಮುಖ್ಯ ಶಿಕ್ಷಕಿ ಅನುಪಮಾ ಅವರನ್ನು ಅಮಾನತು ಮಾಡಲಾಗಿದೆ ಎಂದು ಬಿಇಒ ಹನುಮಂತರಾಯಪ್ಪ ತಿಳಿಸಿದ್ದಾರೆ.