ಸಾರಾಂಶ
ಸೇನಾನಿಗಳ ಅವಹೇಳನ ಮಾಡಿದ ವ್ಯಕ್ತಿ ಪತ್ತೆಗಾಗಿ ಆರ್.ವಿ.ಗಂಗಾಧರಪ್ಪ, ಡಿಎಸ್‌ಪಿ, ಸೋಮವಾರಪೇಟೆ ಉಪವಿಭಾಗ, ರಾಜೇಶ್.ಕೆ, ಸಿಪಿಐ, ಕುಶಾಲನಗರ ವೃತ್ತ, ಚಂದ್ರಶೇಖರ್ ಎಚ್.ವಿ, ಪಿಎಸ್‌ಐ, ಸುಂಟಿಕೊಪ್ಪ ಪೊಲೀಸ್ ಠಾಣೆ ಹಾಗೂ ಅಪರಾಧ ಪತ್ತೆ ಸಿಬ್ಬಂದಿ ಮತ್ತು ತಾಂತ್ರಿಕ ಸಿಬ್ಬಂದಿ ಒಳಗೊಂಡಂತೆ ವಿಶೇಷ ತನಿಖಾ ತಂಡ ರಚಿಸಿ ತನಿಖೆ ಕೈಗೊಳ್ಳಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಸಪ್ತ ಸಾಗರ (ಕಡಲು) ಎಂಬ ವಾಟ್ಸ್ ಆಪ್ ಗ್ರೂಪ್‌ನಲ್ಲಿ ವ್ಯಕ್ತಿಯೊಬ್ಬರ ಮೊಬೈಲ್ ಸಂಖ್ಯೆಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಅವಾಚ್ಯವಾಗಿ ನಿಂಧಿಸಿರುವುದು ಪೊಲೀಸರ ಗಮನಕ್ಕೆ ಬಂದಿದ್ದು, ಈ ಕುರಿತು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ತಿಳಿಸಿದ್ದಾರೆ.ಇಡೀ ದೇಶ ಗೌರವ ನೀಡುವ ನಾಯಕರನ್ನು ಅವಾಚ್ಯವಾಗಿ ಬೈದಿರುವ ಕುರಿತು ಗ್ರೂಪ್‌ನ ಅಡ್ಮಿನ್ ವಿಚಾರಣೆ ನಡೆಸಿ ಮಾಹಿತಿ ಪಡೆಯಾಲಾಗಿರುತ್ತದೆ ಹಾಗೂ ಗ್ರೂಪ್‌ನಲ್ಲಿ ಯಾವುದೇ ರೀತಿಯ ಅವಹೇಳನಕಾರಿ, ಅವಾಚ್ಯವಾಗಿ ನಿಂದಿಸಿ ಸಂದೇಶಗಳನ್ನು ರವಾನಿಸದಂತೆ ಗ್ರೂಪ್‌ನಲ್ಲಿರುವ ಎಲ್ಲರಿಗೂ ಸೂಕ್ತ ತಿಳಿವಳಿಕೆ ನೀಡುವಂತೆ ಮತ್ತು ಈ ರೀತಿಯ ಸಂದೇಶಗಳನ್ನು ಹಂಚಿಕೊಂಡವರ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಗ್ರೂಪ್ ಅಡ್ಮಿನ್‌ಗೆ ಸೂಚನೆ ನೀಡಲಾಗಿರುತ್ತದೆ.
ಸಂದೇಶ ರವಾನಿಸಿದ್ದ ವ್ಯಕ್ತಿ ಪತ್ತೆಗಾಗಿ ಆರ್.ವಿ.ಗಂಗಾಧರಪ್ಪ, ಡಿಎಸ್‌ಪಿ, ಸೋಮವಾರಪೇಟೆ ಉಪವಿಭಾಗ, ರಾಜೇಶ್.ಕೆ, ಸಿಪಿಐ, ಕುಶಾಲನಗರ ವೃತ್ತ, ಚಂದ್ರಶೇಖರ್ ಎಚ್.ವಿ, ಪಿಎಸ್‌ಐ, ಸುಂಟಿಕೊಪ್ಪ ಪೊಲೀಸ್ ಠಾಣೆ ಹಾಗೂ ಅಪರಾಧ ಪತ್ತೆ ಸಿಬ್ಬಂದಿ ಮತ್ತು ತಾಂತ್ರಿಕ ಸಿಬ್ಬಂದಿ ಒಳಗೊಂಡಂತೆ ವಿಶೇಷ ತನಿಖಾ ತಂಡ ರಚಿಸಿ ತನಿಖೆ ಕೈಗೊಳ್ಳಲಾಗುತ್ತಿದೆ.ಆರೋಪಿಯನ್ನು ಶೀಘ್ರವಾಗಿ ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮಾಹಿತಿ ನೀಡಿದ್ದಾರೆ.
ವಿಶೇಷ ಸೂಚನೆ: ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಯಾವುದೇ ರೀತಿಯ ಸಂದೇಶ/ಭಾವಚಿತ್ರ/ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಸತ್ಯ-ಪರಿಶೀಲಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಕೋರಿದೆ ಹಾಗೂ ಕೊಡಗು ಜಿಲ್ಲಾ ಪೊಲೀಸ್ ಸಾಮಾಜಿಕ ಜಾಲತಾಣಗಳ ಮೇಲೆ ಸಂಪೂರ್ಣ ನಿಗಾವಹಿಸಿದ್ದು, ಕೋಮು ಸೌಹಾರ್ದತೆ ಕದಡುವ ದುರುದ್ದೇಶದಿಂದ ಸುಳ್ಳು ಸುದ್ದಿಯ ಪೋಸ್ಟ್‌ಗಳನ್ನು ಹರಿಬಿಟ್ಟು ಅಪಪ್ರಚಾರ ಮಾಡುವ , ಆತಂಕ ಸೃಷ್ಟಿಸುವ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಯಾವುದೇ ರೀತಿ ಅಕ್ರಮ ಚಟುವಟಿಕೆಗಳ ಕುರಿತು ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಎಸ್ಪಿ ಮನವಿ ಮಾಡಿದ್ದಾರೆ.