ಸಮುದಾಯ ಆರೋಗ್ಯ ಅಧಿಕಾರಿ (ಸಿಎಚ್‌ಒ)ಗಳು ಬೆಂಗಳೂರಿಲ್ಲಿ ನಡೆಸಿರುವ ಮುಷ್ಕರದಲ್ಲಿ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ (ಪಿಎಚ್‌ಸಿಒ)ಗಳು, ಆರೋಗ್ಯ ನಿರೀಕ್ಷಣಾಧಿಕಾರಿ (ಎಚ್ಐಒ)ಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ ಎಂದು ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಸಿ.ಪರಶುರಾಮ ಅಣ್ಣಾಪುರ ಆಕ್ಷೇಪಿಸಿದ್ದಾರೆ.

- 8 ದಿನದಲ್ಲಿ ಕ್ಷಮೆ ಕೇಳದಿದ್ದರೆ ರಾಜ್ಯವ್ಯಾಪಿ ಹೋರಾಟ: ರಾಜ್ಯಾಧ್ಯಕ್ಷ ಪರಶುರಾಮ ಎಚ್ಚರಿಕೆ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸಮುದಾಯ ಆರೋಗ್ಯ ಅಧಿಕಾರಿ (ಸಿಎಚ್‌ಒ)ಗಳು ಬೆಂಗಳೂರಿಲ್ಲಿ ನಡೆಸಿರುವ ಮುಷ್ಕರದಲ್ಲಿ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ (ಪಿಎಚ್‌ಸಿಒ)ಗಳು, ಆರೋಗ್ಯ ನಿರೀಕ್ಷಣಾಧಿಕಾರಿ (ಎಚ್ಐಒ)ಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ ಎಂದು ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಸಿ.ಪರಶುರಾಮ ಅಣ್ಣಾಪುರ ಆಕ್ಷೇಪಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಚ್‌ಒ ಅಧಿಕಾರಿಗಳ ಸಂಘದ ರಾಜ್ಯ ಗೌರವಾಧ್ಯಕ್ಷರು, ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, 8 ದಿನಗಳಲ್ಲಿ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಬೀದಿಗಿಳಿದು ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು.

ಆರೋಗ್ಯ ಇಲಾಖೆ ಆರಂಭದಿಂದಲೂ ಕೆಲಸ ಮಾಡುತ್ತಿರುವ ಪಿಎಚ್‌ಸಿಒ, ಎಚ್‌ಐಒಗಳ ಬಗ್ಗೆಯೇ ಅತ್ಯಂತ ಹಗುರವಾಗಿ, ಅವಹೇಳನಕಾರಿಯಾಗಿ ಮಾತನಾಡಿರುದುವು ಒಳ್ಳೆಯ ಬೆಳವಣಿಗೆಯಲ್ಲ. ಪಿಎಚ್‌ಸಿಒ ಮತ್ತು ಎಚ್‌ಐಒಗಳ ಅಗತ್ಯವೇ ಇಲ್ಲ. ಹಾಗಾಗಿ, ಕೆಲಸದಿಂದ ತೆಗೆದು ಹಾಕಬೇಕೆಂಬ ಹೇಳಿಕೆ ಅಕ್ಷಮ್ಯ. ಕೆಲಸದಿಂದ ತೆಗೆದು ಹಾಕುವಂತೆ ಹೇಳಿಕೆ ನೀಡಲು ಆ ಸಂಘದ ಗೌರವಾಧ್ಯಕ್ಷರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಕಿಡಿಕಾರಿದರು.

ಇಡೀ ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಪಿಎಚ್‌ಸಿಒ, ಎಚ್‌ಐಒಗಳು ಕಾಯಂ ಆಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ಜಿಲ್ಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರೇ ಕಾಯಂ ನೌಕರರನ್ನು ಕೆಲಸದಿಂದ ತೆಗೆದು ಹಾಕುವಂತೆ ಹೇಳಿರುವುದು ನಿಜಕ್ಕೂ ವಿಪರ್ಯಾಸ ಮತ್ತು ಸಭ್ಯತೆ ಮೀರಿದ ಮಾತುಗಳಾಗಿವೆ. ಇಂತಹದ್ದನ್ನು ತಮ್ಮ ಸಂಘವು ತೀವ್ರವಾಗಿ ಖಂಡಿಸುವ ಜೊತೆಗೆ ಈ ಹೇಳಿಕೆ ನೀಡಿದವರು ಬಹಿರಂಗ ಕ್ಷಮೆ ಕೇಳಲೆಂದು ತಾಕೀತು ಮಾಡುತ್ತದೆ ಎಂದು ಅವರು ಹೇಳಿದರು.

ಸಿಡುಬು, ದಡಾರ, ಗಳಗಂಡ, ಕುಷ್ಠರೋಗ, ಕೊರೋನಾ, ಪೊಲಿಯೋ ನಿರ್ಮೂಲನೆ ಸೇರಿದಂತೆ ಅನೇಕ ಮಹತ್ವದ ಆರೋಗ್ಯ ತುರ್ತು ಸಂದರ್ಭಗಳಲ್ಲಿ ಕೆಲಸ ಮಾಡಿಕೊಂಡು ಬಂದ ಪಿಎಚ್‌ಸಿಒ, ಎಚ್‌ಐಒಗಳು ಆರೋಗ್ಯ ಇಲಾಖೆಯ ಬೆನ್ನೆಲುಬಾಗಿದ್ದಾರೆ. ಪಿಎಚ್‌ಸಿಒ-ಎಚ್‌ಐಒಗಳಿಗೆ ಸೂಕ್ತ ತರಬೇತಿ ನೀಡಿದಲ್ಲಿ ಸಿಎಚ್‌ಒಗಳಿಗಿಂತ ಉತ್ತಮವಾಗಿ ಕೆಲಸ ಮಾಡಬಲ್ಲರು. ಬೇಕಿದ್ದರೆ ಸಿಎಚ್‌ಒಗಳನ್ನೇ ಕೆಲಸದಿಂದ ತೆಗೆದು ಹಾಕಬೇಕಾಗುತ್ತದೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಬಿಎಸ್ಸಿ ನರ್ಸಿಂಗ್ ಪೂರೈಸಿ, ವೈದ್ಯರ ಮಾದರಿಯಲ್ಲಿ ಸಮವಸ್ತ್ರದೊಂದಿಗೆ ಕೆಲಸ ಮಾಡಿದ ಮಾತ್ರಕ್ಕೆ ಸಹೋದ್ಯೋಗಿಗಳ ಅಗತ್ಯವೇ ಇಲ್ಲವೆಂಬಂತೆ ಮಾತನಾಡಿರುವುದು ಪಿಎಚ್‌ಸಿಒ ಮತ್ತು ಎಚ್‌ಐಒಗಳಿಗೆ ತುಂಬಾ ನೋವು ಹಾಗೂ ಆಘಾತ ಉಂಟುಮಾಡಿದೆ. ಇನ್ನು 8 ದಿನಗಳಲ್ಲಿ ಆ ಸಂಘದ ಗೌರವಾಧ್ಯಕ್ಷರು ಬಹಿರಂಗ ಕ್ಷಮೆ ಕೋರದಿದ್ದರೆ ಎಲ್ಲೆಡೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ವಿ.ಮಹಂತೇಶ, ಕಾರ್ಯಾಧ್ಯಕ್ಷ ಕೆ.ಎನ್.ರಾಜಾರಾಮ, ಎಂ.ತಿಪ್ಪೇಸ್ವಾಮಿ, ಕೆ.ಎನ್. ಸಣ್ಣನಾಗಪ್ಪ, ಬಿ.ಎನ್.ಶಶಿಧರ, ರಮೇಶ್ ಇತರರು ಇದ್ದರು.

- - -

-6ಕೆಡಿವಿಜಿ7:

ದಾವಣಗೆರೆಯಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಸಿ.ಪರಶುರಾಮ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.