ಪ್ರಾಮಾಣಿಕ ರಾಜಕಾರಣಿಗಳಲ್ಲಿ ದೇಶಮುಖ ಪ್ರಮುಖರು

| Published : Aug 06 2025, 01:30 AM IST

ಪ್ರಾಮಾಣಿಕ ರಾಜಕಾರಣಿಗಳಲ್ಲಿ ದೇಶಮುಖ ಪ್ರಮುಖರು
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ನಾಲತವಾಡ ರಾಜ್ಯದಲ್ಲಿ ಸಾಕಷ್ಟು ರಾಜಕಾರಣಿಗಳನ್ನು ಕಂಡಿದ್ದೇವೆ. ಬಹಳಷ್ಟು ಜನರಿಗೆ ಅವರ ಹೆಸರು ಸಹ ನೆನಪಿಗೆ ಬರವುದಿಲ್ಲ, ಅಂತಹದ್ದರಲ್ಲಿ ಮೃತಪಟ್ಟ 35 ವರ್ಷ ನಂತರವೂ ಅವರನ್ನು ನೆನಪು ಮಾಡಿಕೊಳ್ಳುತ್ತಾರೆ ಎಂದರೆ ಅದು ಅವರ ಪ್ರಾಮಾಣಿಕ ರಾಜಕಾರಣಕ್ಕೆ ನೀಡುವ ಬೆಲೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ನಾಲತವಾಡ

ರಾಜ್ಯದಲ್ಲಿ ಸಾಕಷ್ಟು ರಾಜಕಾರಣಿಗಳನ್ನು ಕಂಡಿದ್ದೇವೆ. ಬಹಳಷ್ಟು ಜನರಿಗೆ ಅವರ ಹೆಸರು ಸಹ ನೆನಪಿಗೆ ಬರವುದಿಲ್ಲ, ಅಂತಹದ್ದರಲ್ಲಿ ಮೃತಪಟ್ಟ 35 ವರ್ಷ ನಂತರವೂ ಅವರನ್ನು ನೆನಪು ಮಾಡಿಕೊಳ್ಳುತ್ತಾರೆ ಎಂದರೆ ಅದು ಅವರ ಪ್ರಾಮಾಣಿಕ ರಾಜಕಾರಣಕ್ಕೆ ನೀಡುವ ಬೆಲೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ವೀರೇಶ್ವರ ವಿದ್ಯಾ ಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡ ಮಾಜಿ ಸಚಿವ ದಿ.ಜೆ.ಎಸ್.ದೇಶಮುಖ ಅವರ 35ನೇ ಹಾಗೂ ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ ಅವರ 7ನೇ ಪುಣ್ಯಸ್ಮರಣೋತ್ಸವದಲ್ಲಿ ಅವರು ಮಾತನಾಡಿದರು. ಪ್ರಾಮಾಣಿಕ ರಾಜಕಾರಣಿಗಳ ಪಟ್ಟಿಯಲ್ಲಿ ದೇಶಮುಖ ಅವರದ್ದು ಪ್ರಮುಖ ಸ್ಥಾನವಿದೆ. ಅವರ ಮಾತು ಕಡಿಮೆ ಕೆಲಸ ಹೆಚ್ಚಿತ್ತು. ಆದರೆ ಇಂದಿನ ರಾಜಕಾರಣದ ಸ್ಥಿತಿ ಭಿನ್ನವಾಗಿದೆ, ಆದ್ದರಿಂದ ದೇಶಮುಖ ಮನೆತನ ಮತ್ತೆ ರಾಜಕಿಯಕ್ಕೆ ಬರಬೇಕು ಎಂದು ಜನರು ಅಪೇಕ್ಷೆ ಪಡುತ್ತಿದ್ದಾರೆ. ಎಂದು ಹೇಳಿದರು.

ದೊಡ್ಡ ದೊಡ್ಡ ಭಾಷಣ ಮಾಡಿದರೆ ಆರಿಸಿ ಬರುತ್ತಾರೆ ಎನ್ನುವುದಿಲ್ಲ. ಒಳ್ಳೆಯ ರಾಜಕಾರಣಿಗಳನ್ನು ಜನ ಯಾವತ್ತು ಕೈಬಿಡುವದಿಲ್ಲ ಎಂಬುದಕ್ಕೆ ಮುದ್ದೇಬಿಹಾಳವೇ ಸಾಕ್ಷಿ. ದೇಶಮುಖರಂತಹ ರಾಜಕಾರಣ ಮುದ್ದೇಬಿಹಾಳಕ್ಕೆ ಅವಶ್ಯವಾಗಿದೆ. ಅವರ ಮನೆತನದವರು ರಾಜಕೀಯಕ್ಕೆ ಬರಬೇಕು ಎಂದರು.

ಗುರಮಠಕಲ್ ಶಾಸಕ ಶರಣಗೌಡ ಕಂದಕೂರ ಮಾತನಾಡಿ, ದಿ.ಜೆ.ಎಸ್.ದೇಶಮುಖ ಬಗ್ಗೆ ಸಾಕಷ್ಟು ಜನರಿಗೆ ಅವರ ಬಗ್ಗೆ ಕೇಳಿದೆ ಅವರು ಹೇಳಿದ ಮಾತುಗಳು ಇನ್ನು ನೆನಪಲ್ಲಿವೆ. ಯಾಕಂದರೆ ದೇಶಮುಖರು ಮಾಡಿದ ಕೆಲಸ, ತ್ಯಾಗ, ಸಮಾಜಕ್ಕೆ ಕೊಟ್ಟ ಕೊಡುಗೆ ಎಷ್ಟು ಚರ್ಚಿಸಿದರು ಸಾಲದು. ದೇಶಮುಖರನ್ನು ಆಧುನಿಕ ಬಸವಣ್ಣ ಎಂದು ಕರೆದರೂ ತಪ್ಪಾಗಲ್ಲ. ಸತ್ಯ ಸಿದ್ಧಾಂತಗಳಿಗೆ ಬದ್ಧರಾಗಿ ನಾಡಿನ ಸೇವೆಗೆ ತೊಡಗಿದರು. ಇಂತವರ ಕುಟುಂಬ ಇವತ್ತು ರಾಜಕೀಯದಲ್ಲಿ ಇರಬೇಕು ಅನ್ನೋದು ಎಲ್ಲಾ ಅಭಿಮಾನಿಗಳ ಒತ್ತಾಸೆಯಾಗಿದೆ ಎಂದು ಹೇಳಿದರು.

ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ.ಎಚ್.ಪಟೀಲ ಮಾತನಾಡಿ, ಹಿಂದಿನ ಪ್ರಾಮಾಣಿಕ ರಾಜಕಾರಣದ ಸಿದ್ದಾಂತವನ್ನು ದೇಶಮುಖರ ಮನೆತನದಲ್ಲಿ ಮುಂದುವರಿಸಲು ನಾವು ಬದ್ಧರಾಗಿದ್ದೇವೆ. ಪ್ರಾಮಾಣಿಕ ರಾಜಕಾರಣವನ್ನು ಮೌಲ್ಯಮಾಪನ ಮಾಡುವ ನಿಟ್ಟಿನಲ್ಲಿ. ಭವಿಷ್ಯದ ಭಾರತದ ರಾಜಕೀಯವನ್ನು ಕಲ್ಪನೆ ಮಾಡಿ ಕಟ್ಟುವ ಕೆಲಸ ರಾಜಕಾರಣಿಗಳ ಮೇಲಿದೆ. ಆದರೆ ಇತ್ತೀಚಿನ ಪರಿಸ್ಥಿತಿಯಲ್ಲಿ ಹಣದ ಹಿಂದೆ ನಡೆದುಕೊಳ್ಳುತ್ತಿರುವ ರಾಜಕೀಯ ಪರಿಸರ, ಕೃಷಿ, ಶಿಕ್ಷಣ ಮತ್ತು ಸಾಮಾಜಿಕ ಸಂಬಂಧಗಳನ್ನು ಹಾಳು ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾನಿಧ್ಯ ವಹಿಸಿದ್ದ ಕುಂಟೋಜಿಯ ಚನ್ನವೀರ ಶ್ರೀಗಳು ಆರ್ಶಿವಚನ ನೀಡಿದರು, ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಮಾತನಾಡಿದರು, ಎಮ್.ಎಸ್.ಪಾಟೀಲ ಸ್ವಾಗತಿಸಿದರು, ಡಾ.ಡಿ.ಆರ್.ಮಳಖೇಡ ಪ್ರಸ್ತಾವಿಕವಾಗಿ ಮಾತನಾಡಿದರು, ಮಹಾನಂದ ಅಮ್ಮಾಜಿಗೋಳ ಹಾಗೂ ಬಸವರಾಜ ಹಾದಿಮನಿ ನಿರೂಪಿಸಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವೀರೇಶ್ವರ ವಿದ್ಯಾ ಸಂಸ್ಥೆ ಹಾಗೂ ಸಿಂಡಿಕೇಟ್ ಬ್ಯಾಂಕ್‌ನಿಂದ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಈ ವೇಳೆ ಸಾವಿತ್ರಿ ಶರಣಮ್ಮ, ಅಶೋಕ ತಡಸದ, ಎಮ್.ಬಿ.ನಾವದಗಿ, ಸತೀಶ ಓಸ್ವಾಲ, ದ್ಯಾಮನಗೌಡ ಪಾಟೀಲ, ದಾನಪ್ಪ ನಾಗಠಾಣ, ಗುರಲಿಂಗಪ್ಪ ಅಂಗಡಿ, ಸುರೇಶ ಹಿರೇಮಠ, ಶಿವನಗೌಡ ಬಿರಾದಾರ, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸಂಸ್ಥೆಯ ಕಾರ್ಯದರ್ಶಿ ಎಮ್.ಬಿ.ಅಂಗಡಿ ಹಾಗೂ ಇನ್ನಿತರರು ಇದ್ದರು.

------

ಕೋಟ್‌

ಹಿಂದಿನ ರಾಜಕಾರಣಿಗಳು ಪ್ರತಿ ಸಲ ಚುನಾವಣೆಯಲ್ಲಿ ಜಮೀನು ಮಾರುತ್ತಿದ್ದರು. ಈಗ ರಾಜಕೀಯಕ್ಕೆ ಬಂದರೆ ಸಾಕು ಜಮೀನಿನ ಮೇಲೆ ಜಮೀನು ಖರೀದಿ ಮಾಡುವ ಸ್ಥಿತಿ ಇದೆ. ಜಿಲ್ಲೆಯಲ್ಲಿ ಚುನಾವಣೆಗೆ ಅತಿ ಕಡಿಮೆ ಖರ್ಚು ಮಾಡುವವನು ನಾನೇ, ನಾನು ಬೈದು ಬೈದು ಆರಿಸಿ ಬರುತ್ತೇನೆ, ನನಗೆ ಚುನಾವಣೆಯಲ್ಲಿ ಸೋಲಿಸಲು ನಮ್ಮವರೆ ಸೂಟಕೇಸ್ ಕಳಿಸುತ್ತಾರೆ. ಆದರೂ, ಜನರು ನನ್ನನ್ನು ಕೈಬಿಡಲ್ಲ, ಯತ್ನಾಳರನ್ನು ಮುಂದಿನ ಚುನಾವಣೆಯಲ್ಲಿ ನೋಡುತ್ತೇವೆ ಎಂದು ಕೆಲವರು ಹೇಳುತ್ತಾರೆ, ಯತ್ನಾಳರನ್ನು ಎಂದು ನೋಡುವುದು ಆಗುವುದಿಲ್ಲ.

ಬಸನಗೌಡ ಪಾಟೀಲ ಯತ್ನಾಳ, ಶಾಸಕ