9 ತಿಂಗಳಲ್ಲಿ ದೇಶಪಾಂಡೆ ಮಾಡಿದ ಸಾಧನೆ ಶೂನ್ಯ

| Published : Feb 11 2024, 01:45 AM IST / Updated: Feb 11 2024, 03:59 PM IST

ಸಾರಾಂಶ

ಶಾಸಕ ದೇಶಪಾಂಡೆ ಅವರು ಹಿರಿಯರಾಗಿದ್ದು, ಅವರಿಗೆ ಠೀಕಿಸಲು ಹೋಗುವುದಿಲ್ಲ. ಚುನಾವಣೆಯಾಗಿ 9 ತಿಂಗಳಾಗುತ್ತಾ ಬಂದಿದ್ದರೂ ಹಳಿಯಾಳ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಕಾಣುತ್ತಿಲ್ಲ.

ಹಳಿಯಾಳ:ಕೆಲಸ ಕೇಳಿ ಸಹಾಯ ಯಾಚಿಸಿ ತಮ್ಮ ಬಳಿ ಬಂದ ಮತದಾರರನ್ನು ಬೈಯುವುದನ್ನು ಒಂದನ್ನು ಬಿಟ್ಟರೇ ಶಾಸಕ ಆರ್‌.ವಿ. ದೇಶಪಾಂಡೆ ಕಳೆದ ಒಂಬತ್ತು ತಿಂಗಳಲ್ಲಿ ಕ್ಷೇತ್ರಕ್ಕೆ ಮಾಡಿದ ಅಭಿವೃದ್ಧಿಯಾಗಲಿ, ಸಾಧನೆಯಾಗಲಿ ಶೂನ್ಯವಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ, ಮಾಜಿ ಶಾಸಕ ಸುನೀಲ ಹೆಗಡೆ ಕಟುವಾಗಿ ಠೀಕಿಸಿದ್ದಾರೆ.

ಶನಿವಾರ ಕಾಂಗ್ರೆಸ್ ಶಾಸಕರೇ ಮತದಾರರಿಗೆ ಉತ್ತರಿಸಿ ಅಭಿಯಾನ ಹಿನ್ನಲೆಯಲ್ಲಿ ಕೈಗೊಂಡ ಪ್ರತಿಭಟನೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 

ಹಿರಿಯರಾದ ದೇಶಪಾಂಡೆ ಅವರು ಮತದಾರರಿಗೆ ಮೊದಲು ಬೈಯುವುದನ್ನು ನಿಲ್ಲಿಸಿ ಕ್ಷೇತ್ರದ ಅಭಿವೃದ್ಧಿಯತ್ತ ಗಮನಹರಿಸಲಿ ಎಂದಿ ಸಲಹೆ ನೀಡಿದರು.

ಇವರಿಗೆ ಅಧಿಕಾರ ಬೇಕು: ಚುನಾವಣೆಯಾಗಿ 9 ತಿಂಗಳಾದರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕಾಣುತ್ತಿಲ್ಲ. ಕ್ಯಾಬಿನೆಟ್ ಮಂತ್ರಿ ಸ್ಥಾನ ಪಡೆಯಲು ಎರಡು ತಿಂಗಳು ಪರದಾಡಿದರು. 

ತದನಂತರ ಎರಡು ತಿಂಗಳು ಮಂತ್ರಿ ಹುದ್ದೆ ಸಿಗಲಿಲ್ಲ ಎಂದು ಗೋಳಾಡಿದರು. ಹೀಗೆ ನಾಲ್ಕು ತಿಂಗಳು ಕಳೆದ ಅವರು ಈಗ ಆಡಳಿತ ಸುಧಾರಣಾ ಆಯೋಗದ ಹುದ್ದೆ ಪಡೆದಿದ್ದು, ಇದರಿಂದ ಹಳಿಯಾಳ ಕ್ಷೇತ್ರಕ್ಕೆ ಏನೂ ಪ್ರಯೋಜನ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಅವರದೇ ಕ್ಷೇತ್ರದಲ್ಲಿ ಆಡಳಿತ ಹದಗೆಟ್ಟಿದೆ, ಯಾವುದೇ ಸರ್ಕಾರಿ ಕಚೇರಿಗಳಿಗೆ ಹೋಗಿ ಅಲ್ಲಿ ಸಿಬ್ಬಂದಿಗಳ ಅಧಿಕಾರಿಗಳ ಕೊರತೆ ಇದೆ. ಜನಸಾಮಾನ್ಯರ ಕೆಲಸಗಳು ಯಾವುದೇ ಕಚೇರಿಗಳಲ್ಲಿ ಸರಳವಾಗಿ ನಡೆಯುತ್ತಿಲ್ಲ, ಇವರ ಕ್ಷೇತ್ರದಲ್ಲಿಯೇ ಈ ರೀತಿಯಾದರೆ ರಾಜ್ಯದ ಆಡಳಿತ ಸುಧಾರಣೆ ಯಾವಾಗ ಮಾಡಬಲ್ಲರು. ಸರ್ಕಾರಕ್ಕೆ ಯಾವ ಸಲಹೆ ನೀಡಬಲ್ಲರು ಎಂದು ಲೇವಡಿ ಮಾಡಿದರು.

ಕಾಳಿನದಿ ನೀರಾವರಿ ಯಾವಾಗ:ತಾಲೂಕಿನ ಕೆರೆ ತುಂಬಿಸುವ ಕಾಳಿನದಿ ನೀರಾವರಿ ಯೋಜನೆ ಮಾಡುತ್ತೇನೆಂದು ಹೇಳಿ ಎರಡೂ ಚುನಾವಣೆ ಮಾಡಿದ ದೇಶಪಾಂಡೆ ಈ ವರೆಗೂ ಈ ಯೋಜನೆ ಮುಕ್ತಾಯಗೊಳಿಸುವ ಇರಾದೆಯಲ್ಲಿ ಇಲ್ಲ. 

ಬಹುಗ್ರಾಮ ಯೋಜನೆಯಂತೂ ಪರಿಸ್ಥಿತಿಯು ಆಯೋಮಯವಾಗಿದೆ. ಹೀಗೆ ಮತದಾರರಿಗೆ ಅಭಿವೃದ್ಧಿ ಯೋಜನೆಯ ನೆವದಲ್ಲಿ ಕಾಡಿಸುವುದು ಅವರ ಸಹನೆ, ತಾಳ್ಮೆಯನ್ನು ಪರೀಕ್ಷಿಸುವುದು ಸರಿಯಲ್ಲ ಎಂದರು.

ತಾರತಮ್ಯ ಮಾಡುತ್ತಿಲ್ಲವೇ ?
ಕೇಂದ್ರ ಸಕಾ್ರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ದೆಹಲಿ ವರೆಗೂ ಪ್ರತಿಭಟನೆ ಮಾಡಲು ತೆರಳಿದ ಶಾಸಕ ದೇಶಪಾಂಡೆ ಅವರು ತಮ್ಮ ಹಳಿಯಾಳ ಕ್ಷೇತ್ರದಲ್ಲಿ ತಾರತಮ್ಯ ರಾಜಕಾರಣ ಮಾಡುತ್ತಿಲ್ಲವೇ. 

ಹಳಿಯಾಳ ತಾಲೂಕಿನ 20, ದಾಂಡೇಲಿಯ 4 ಮತ್ತು ಜೋಯಿಡಾ ತಾಲೂಕಿಕ 15 ಗ್ರಾಪಂಗಳಲ್ಲಿ ಬಿಜೆಪಿ ಆಡಳಿತವಿರುವ ಗ್ರಾಪಂಗಳಿಗೆ ಅನುದಾನವಾಗಲಿ, ಆಶ್ರಯ ಮನೆಗಳನ್ನಾಗಲಿ ಮಂಜೂರು ಮಾಡುವಾಗ ಇವರು ತಾರತಮ್ಯ ಮಾಡಲಿಲ್ಲವೇ. 

ಬಿಜೆಪಿಗೆ ಲೀಡ್ ನೀಡಿದ ಗ್ರಾಮಗಳ, ವಾರ್ಡಗಳ ಮತದಾರರನ್ನು ಇವರು ಸತಾಯಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.