ಹತಾಶೆಯಿಂದ ‘ಮೋದಿ ಸಮಾಧಿ’ ಹೇಳಿಕೆ: ಸಿದ್ದು

| Published : May 12 2024, 01:18 AM IST / Updated: May 12 2024, 11:14 AM IST

ಹತಾಶೆಯಿಂದ ‘ಮೋದಿ ಸಮಾಧಿ’ ಹೇಳಿಕೆ: ಸಿದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಯಾರನ್ನೂ ರಾಜಕೀಯವಾಗಿ ಸಮಾಧಿ ಮಾಡಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ಸೋಲುವ ಭಯದಿಂದ ಹತಾಶೆಯಿಂದ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.

 ಮೈಸೂರು :  ಯಾರನ್ನೂ ರಾಜಕೀಯವಾಗಿ ಸಮಾಧಿ ಮಾಡಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ಸೋಲುವ ಭಯದಿಂದ ಹತಾಶೆಯಿಂದ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.

ವಿಪಕ್ಷಗಳು ನನ್ನನ್ನು ಸಮಾಧಿ ಮಾಡಲು ಮುಂದಾಗಿವೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಮೈಸೂರಿನಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ಮೋದಿ ಅವರು 10 ವರ್ಷ ಬಡವರ ಪರ ಕೆಲಸ ಮಾಡಿಲ್ಲ, ಕೊಟ್ಟ ಭರವಸೆ ಈಡೇರಿಸಿಲ್ಲ. ದೇಶದ ಪ್ರಧಾನ ಮಂತ್ರಿಯನ್ನು ಸೋಲಿಸಬೇಕು ಎಂಬುದು ವಿರೋಧ ಪಕ್ಷಗಳ ಬಯಕೆ ಎಂದು ಹೇಳಿದರು.

ಪ್ರಧಾನಿಗೆ ಸೋಲುವ ಭಯದಿಂದ, ಹತಾಶೆಯಿಂದ ಮಾತನಾಡುತ್ತಿದ್ದಾರೆ. ಪ್ರಧಾನಿ ಸುಳ್ಳಿನ ಸರದಾರ ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ಬಣ್ಣ ದೇಶದ ಜನರ ಮುಂದೆ ಬಯಲಾಗಿದ್ದು, ಹತಾಶೆಯಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ. ಇವರ ಭಾವನಾತ್ಮಕ ಮಾತುಗಳು ಜನರಿಗೆ ಗೊತ್ತಿದೆ. ಮೇಲಕ್ಕೆ ಏರಿದವರು ಕೆಳಗೆ ಇಳಿಯಲೇಬೇಕು ಎಂದು ಕುಟುಕಿದರು.

ಸಾಲಮನ್ನಾ ಮಾಡಬೇಕು ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಾಲಮನ್ನಾ ಮಾಡಿ ಎಂದು ಹಿಂದೆ ಕೇಳಿದಾಗ ಯಡಿಯೂರಪ್ಪ ಏನು ಹೇಳಿದ್ದರು ಗೊತ್ತಾ? ನಮ್ಮ ಬಳಿ ಪ್ರಿಂಟಿಂಗ್ ಮಿಷನ್ ಇದಿಯಾ ಎಂದು ಕೇಳಿರಲಿಲ್ಲವಾ? ಈಗ ಸಾಲಮನ್ನಾ ಮಾಡಿ ಎಂದು ಕೇಳುವ ನೈತಿಕತೆ ಇವರಿಗಿದಿಯಾ? ಎಂದು ಕಿಡಿಕಾರಿದರು.ಶ್ರೀನಿವಾಸಪ್ರಸಾದ್ ಹೋರಾಟದ ಬದುಕು ಆದರ್ಶವಾಗಬೇಕು: ಸಿಎಂ

ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರ ಹೋರಾಟದ ಬದುಕು ಆದರ್ಶವಾಗಬೇಕು. ಅವರ ಗುಣಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಅವರು ತಾವು ನಂಬಿದ ವಿಚಾರಗಳಿಗೆ ಬದ್ಧರಾಗಿದ್ದು ಜೀವನ ಸಾರ್ಥಕಪಡಿಸಿಕೊಂಡರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಶನಿವಾರ ಆಯೋಜಿಸಿದ್ದ ಚಾಮರಾಜನಗರ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ, ಸ್ವಾಭಿಮಾನಿಗೆ ಸಾವಿರದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಶ್ರೀನಿವಾಸಪ್ರಸಾದ್ ಅವರು ತಮ್ಮ ಜೀವನದ ಉದ್ದಕ್ಕೂ ಬಡವರ ಪರ ಧ್ವನಿಯಾಗಿ, ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಬಂದಾಗ ಸಿಡಿದೇಳುತ್ತಿದ್ದರು. ಅವರು ನಮಗೆ ನೆನಪಿನಲ್ಲಿ ಉಳಿಯಬೇಕಾದ ವ್ಯಕ್ತಿ ಎಂದರು.

ಹಿರಿಯ ರಾಜಕೀಯ ತಲೆಮಾರಿನ ಕೊಂಡಿ ಕಳಚಿ ಹೋಯಿತು. ಅವರು ಅತ್ಯಂತ ಶ್ರೇಷ್ಠ ವ್ಯಕ್ತಿಯಾಗಿದ್ದರು. ಸಂಸದರಾಗಿ ಆರು ಬಾರಿ ಆಯ್ಕೆಯಾಗಿದ್ದರು. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಸಚಿವರಾಗಿದ್ದರು. ರಾಜಕೀಯದಲ್ಲಿ ಸ್ವಾಭಿಮಾನ ಮುಖ್ಯ ಎಂಬುದನ್ನು ತೋರಿಸಿಕೊಟ್ಟರು. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಮಾತನಾಡುತ್ತಿದ್ದರು. ಯಾರೂ ರೈತರು, ದಲಿತರು, ಹಿಂದುಳಿದವರು ಇರುತ್ತಾರೋ ಅವರಿಗೆ ಸ್ವಾಭಿಮಾನ ಇರಲೇಬೇಕು ಎಂದರು.

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಪ್ರಸಾದ್ ನುಡಿದಂತೆ ನಡೆದು ಬಂದವರು. ಸೈದ್ಧಾಂತಿಕವಾಗಿ ಗಟ್ಟಿಯಾದ ನಿಲುವು ಹೊಂದಿದ್ದರು. ಸಮಾಜದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ, ಅಸ್ಪ್ರಶ್ಯತೆ ಆಚರಣೆ ವಿಚಾರದ ವಿರುದ್ಧ ನೇರವಾಗಿ ಮಾತನಾಡುತ್ತಿದ್ದರು ಎಂದರು. ಶಾಸಕರಾದ ಜಿ.ಟಿ. ದೇವೇಗೌಡ, ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ ಸಿಂಹ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.