ಸಾರಾಂಶ
ರವಿ ಕಾಂಬಳೆ
ಕನ್ನಡಪ್ರಭ ವಾರ್ತೆ ಹುಕ್ಕೇರಿಇಲ್ಲಿನ ಪುರಸಭೆ ಆಡಳಿತದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತವಿದ್ದರೂ ಸದಸ್ಯರಲ್ಲಿನ ಭಿನ್ನಾಭಿಪ್ರಾಯಗಳಿಂದಾಗಿ ಅಂತಿಮ ಗಳಿಗೆಯಲ್ಲಿ ವ್ಯತ್ಯಾಸವಾಗುವ ಭೀತಿ ಕಾಡತೊಡಗಿದ್ದು ಅಧಿಕಾರ ಎಂಬುದು ಕೈ ಪಡೆಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.ಹುಕ್ಕೇರಿ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಕಾಂಗ್ರೆಸ್‌ಗೆ ಅಧಿಕಾರಕ್ಕೇರುವ ಎಲ್ಲ ಅವಕಾಶಗಳಿದ್ದರೂ ಒಳ ಕದನ ಶುರುವಾಗಿದೆ. ಹಾಗಾಗಿ ಈ ಸಲದ ಚುನಾವಣೆಯಲ್ಲಿ ಕೈ ಪಾಳಯ ತನ್ನ ಎಲ್ಲ ಸದಸ್ಯರಿಗೆ ವಿಫ್ ಜಾರಿಗೊಳಿಸಿ ಪ್ರವಾಸ ಭಾಗ್ಯ ಕಲ್ಪಿಸುವ ಸಾಧ್ಯತೆ ಹೆಚ್ಚಿದೆ.ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಪಕ್ಷದ ನಿರ್ಧಾರಕ್ಕಿಂತ ಸದಸ್ಯರೇ ಪ್ರಬಲರು ಎನ್ನಲಾಗಿದೆ. ಒಳ ರಾಜಕೀಯ ಬಡಿದಾಟ ಜೋರಾಗಿದ್ದು ಚುನಾವಣೆ ದಿನ ಯಾರು ಯಾರ ಪರ ಕೈ ಎತ್ತುತ್ತಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿ ಎಲ್ಲರನ್ನು ಕಾಡುತ್ತಿದೆ. ಪರಿಸ್ಥಿತಿ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.ಪುರಸಭೆ ಆಡಳಿತ ಮಂಡಳಿ ರಚನೆಗೆ ಸೆ. 9 ಅಥವಾ 10 ರಂದು ಚುನಾವಣೆ ದಿನಾಂಕ ನಿಗದಿಯಾಗುವ ಸಾಧ್ಯತೆ ಹೆಚ್ಚಿದೆ. ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 23 ವಾರ್ಡ್‌ಗಳಿವೆ. ಕಾಂಗ್ರೆಸ್ 12, ಬಿಜೆಪಿ 8, ಪಕ್ಷೇತರರು 3 ಜನ ಸೇರಿ ಒಟ್ಟು 23 ಸದಸ್ಯರಿದ್ದಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗದ್ದುಗೆ ಏರಲು 12 ಸದಸ್ಯರ ಸಂಖ್ಯಾಬಲ ಬೇಕಿದೆ.ಶಾಸಕ ಮತ್ತು ಸಂಸದರ ಮತಗಳೂ ಗಣನೆಗೆ ಬರಲಿದ್ದು ಕಾಂಗ್ರೆಸ್‌ಗೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ಒಂದು ಮತದ ಬೆಂಬಲದೊಂದಿಗೆ 13 ಮತಗಳ ದೊರೆತಂತಾಗುತ್ತದೆ. ಹೀಗಾಗಿ ಕಾಂಗ್ರೆಸ್ ಸಲೀಸಾಗಿ ಅಧಿಕಾರ ಪಡೆದುಕೊಳ್ಳುವ ಸಾಧ್ಯತೆಗಳಿವೆ ಎಂಬುದನ್ನು ಸದ್ಯದ ಚಿತ್ರಣ ಸ್ಪಷ್ಟಪಡಿಸುತ್ತದೆ. ಆದರೆ, 5 ಕ್ಕೂ ಹೆಚ್ಚು ಜನ ಕಾಂಗ್ರೆಸ್ ಪಕ್ಷದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಅಂತಿಮ ಗಳಿಗೆಯಲ್ಲಿ ಕೈ ಕೊಡಬಹುದು ಎಂಬ ಭೀತಿಯಲ್ಲಿ ಮುಂಜಾಗೃತೆಯಿಂದ ಕಾಂಗ್ರೆಸ್ ಮುಖಂಡರು ತನ್ನೆಲ್ಲಾ ಸದಸ್ಯರಿಗೆ ವಿಫ್ ಅಸ್ತ್ರ ಪ್ರಯೋಗಿಸಲಿದೆ ಎನ್ನಲಾಗಿದೆ.ಇನ್ನು ಈ ಎಲ್ಲ ಬೆಳವಣಿಗೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ವಿವಿಧ ತಂತ್ರ ಹೂಡಿ ತನ್ನ ಹಾದಿ ಸುಗಮ ಮಾಡಿಕೊಳ್ಳಲು ಯತ್ನಿಸುತ್ತಿರುವುದು ಕಂಡು ಬರುತ್ತಿದೆ. ಕಾಂಗ್ರೆಸ್‌ನ ಭಿನ್ನಾಭಿಪ್ರಾಯದ ಲಾಭ ಪಡೆಯುವ ಮೂಲಕ ಕಮಲ ಪಡೆ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಹವಣಿಸುತ್ತಿದೆ.ಕಾಂಗ್ರೆಸ್ ಲೆಕ್ಕಾಚಾರ:
ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನದ ಹುದ್ದೆಗೆ ನಿಷ್ಠಾವಂತ ಕಾರ್ಯಕರ್ತ ಮತ್ತು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅತೀ ಹೆಚ್ಚಿನ ಲೀಡ್ ಕೊಡಿಸಿದ 13ನೇ ವಾರ್ಡ್‌ನ ಇಮ್ರಾನ್ ಮೋಮಿನ್ ಹೆಸರು ಮುಂಚೂಣಿಯಲ್ಲಿದೆ. ಇದೇ ವೇಳೆ ಸದಾಶಿವ ಕರೆಪ್ಪಗೋಳ, ಡಾ.ಸರ್ಫರಾಜ ಮಕಾನದಾರ, ಚಂದು ಮುತ್ನಾಳೆ ಅವರೂ ಸಹ ಅಧ್ಯಕ್ಷ ಗದ್ದುಗೆ ಏರಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಸಂಗೀತಾ ಹುಕ್ಕೇರಿ, ಫರೀದಾ ಮುಲ್ಲಾ, ಜ್ಯೋತಿ ಬಡಿಗೇರ, ರುಕ್ಮೀಣಿ ಹಳಿಜೋಳ ಹೆಸರು ಕೇಳಿ ಬರುತ್ತಿವೆ. ಪಕ್ಷದ ನಿಷ್ಠಾವಂತ ಸದಸ್ಯರಿಗೆ ಅವಕಾಶ ಕಲ್ಪಿಸುವ ಚಿಂತನೆ ಕಾಂಗ್ರೆಸ್ ಮುಖಂಡರು ನಡೆಸಿದ್ದಾರೆ.ಈ ಎಲ್ಲ ಬೆಳವಣಿಗೆಗಳು ಕುತೂಹಲ ಕೆರಳಿಸಿದ್ದು ಎಲ್ಲವೂ ಸುಸೂತ್ರವಾಗಿ ನಡೆದು ಕಾಂಗ್ರೆಸ್ ಅಭ್ಯರ್ಥಿಯೇ ಅಧ್ಯಕ್ಷರಾಗುತ್ತಾರೋ ಅಥವಾ ಬಂಡಾಯ ಸ್ಪರ್ಧೆ ಮೂಲಕ ಚುನಾವಣೆ ರಣಕಣ ರಂಗೇರಿಸುತ್ತಾರೋ ಎಂಬುದನ್ನು ಕಾದುನೋಡಬೇಕಿದೆ.ನಮ್ಮ ಸದಸ್ಯರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಪಕ್ಷದ ಸದಸ್ಯರಿಗೆ ವಿಫ್ ಜಾರಿಗೊಳಿಸುವ ಮೂಲಕ ಹುಕ್ಕೇರಿ ಪುರಸಭೆಯಲ್ಲಿ ಕಾಂಗ್ರೆಸ್ ಆಡಳಿತ ನಡೆಸುವುದು ನಿಶ್ಚಿತ. ಬಿಜೆಪಿ ಕನಸು ನನಸಾಗಲು ಬೀಡುವುದಿಲ್ಲ.-ವಿಜಯ ರವದಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು.
;Resize=(128,128))
;Resize=(128,128))