ಸಾರಾಂಶ
ಮಾರುತಿ ಶಿಡ್ಲಾಪುರ
ಹಾನಗಲ್ಲ: ಜಾನುವಾರುಗಳ ಸಂಖ್ಯೆ ಗಣನೀಯವಾಗಿ ಇಳಿಮುಖ, ಪಶು ಚಿಕಿತ್ಸಾಲಯಗಳಿಗೆ 71 ಸಿಬ್ಬಂದಿ ಕೊರತೆ ನಡುವೆಯೂ ಹಾನಗಲ್ಲ ತಾಲೂಕು ಹಾಲು ಉತ್ಪಾದನೆಯಲ್ಲಿ ಗಣನೀಯ ಸಾಧನೆ ಮಾಡಿದೆ. ದಿನಕ್ಕೆ 35 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ.2018ರ ಜಾನುವಾರು ಗಣತಿ ಅನುಸಾರ 56,736 ಜಾನುವಾರುಗಳು ಹಾನಗಲ್ಲ ತಾಲೂಕಿನಲ್ಲಿವೆ. ಆದರೆ ಪ್ರಸಕ್ತ ಸಾಲಿಗೆ ಶೇ. 20ಕ್ಕೂ ಅಧಿಕ ಜಾನುವಾರುಗಳ ಸಂಖ್ಯೆ ಕಡಿಮೆಯಾಗಿವೆ. ಶೇ. 90ರಷ್ಟು ಕೃಷಿಯನ್ನೇ ಅವಲಂಬಿಸಿದ ಹಾನಗಲ್ಲ ತಾಲೂಕಿನ ಬಹುತೇಕ ಕೃಷಿಕರ ಮನೆಗಳಲ್ಲಿ ಜಾನುವಾರುಗಳೇ ಇಲ್ಲ. ಕೃಷಿಗಾಗಿ ಜಾನುವಾರುಗಳನ್ನು ತೊಡಗಿಸುವುದು ಕೂಡ ಗಣನೀಯವಾಗಿ ಇಳಿಕೆಯಾಗಿ, ಯಂತ್ರಗಳ ಬಳಕೆ ಹೆಚ್ಚಾಗಿದೆ. ಜಾನುವಾರುಗಳನ್ನು ಜೋಪಾನ ಮಾಡುವುದು, ಅದರಿಂದ ಬರಬಹುದಾದ ಆದಾಯದ ಕೊರತೆಯಿಂದಾಗಿ ಜಾನುವಾರುಗಳನ್ನು ಸಾಕುವುದಕ್ಕೆ ಹಿನ್ನಡೆಯಾಗುತ್ತಿದೆ. ನಗರೀಕರಣ ಹಾಗೂ ಕಾರ್ಮಿಕರ ಕೊರತೆಯೂ ಬಹುತೇಕ ಕಾಡುತ್ತಿದೆ. ಆದರೆ ಹಾಲಿಗಾಗಿ ಮಾತ್ರ ಅಭಿವೃದ್ಧಿಪಡಿಸಿದ ತಳಿಗಳನ್ನು ಸಾಕಿ ಹಾಲು ಉತ್ಪಾದಿಸಿ ಹಾಲು ಮಾರಾಟಕ್ಕೆ ಮಾತ್ರ ಆದ್ಯತೆ ಕಂಡುಬರುತ್ತಿದೆ.
84 ಹಾಲು ಉತ್ಪಾದಕ ಸಹಕಾರ ಸಂಘಗಳಿವೆ. 2500 ಹಾಲು ಉತ್ಪಾದಕ ಕೃಷಿಕರಿದ್ದಾರೆ. ಈ ಸಂಘಗಳ ಮೂಲಕ 21 ಸಾವಿರ ಲೀಟರ್ ಹಾಲು ಸಂಗ್ರಹಿಸಿ ಹೊರಗೆ ಕಳುಹಿಸಿಕೊಡಲಾಗುತ್ತಿದೆ. ಇದಲ್ಲದೆ ಖಾಸಗಿಯಾಗಿ ಮನೆಗಳಿಗೆ, ಪಟ್ಟಣದ ಚಹಾ ಅಂಗಡಿಗಳಿಗೆ ಅಂದಾಜು 10 ಸಾವಿರ ಲೀಟರ್ ಹಾಲು ಬಳಕೆಯಾಗುತ್ತದೆ. 4 ಸಾವಿರ ಲೀಟರ್‌ನಷ್ಟು ಮನೆ ಬಳಕೆಗೆ ಹಾಲು ಬಳಕೆಯಾಗುತ್ತದೆ.ಆಕಳು, ಎತ್ತು, ಎಮ್ಮೆಗಳಲ್ಲದೆ 23 ಸಾವಿರ ಟಗರು ಹಾಗೂ ಕುರಿಗಳು, 17 ಸಾವಿರ ಹೋತ, ಆಡುಗಳನ್ನು ಸ್ಥಳೀಯರು ಸಾಕುತ್ತಿದ್ದಾರೆ. ಇದರೊಂದಿಗೆ ಬೇಸಿಗೆ ಅವಧಿಯಲ್ಲಿ ಕುರಿಗಾಹಿಗಳು ಆಗಮಿಸಿ ಅವರೊಂದಿಗೆ 1 ಲಕ್ಷ ಕುರಿಗಳು ತಾಲೂಕಿಗೆ ಬರುತ್ತವೆ. ಇವೆಲ್ಲ ರೈತರ ಜಮೀನುಗಳಲ್ಲಿ ಬೀಡು ಬಿಡುತ್ತವೆ.
ತಾಲೂಕಿನಲ್ಲಿ 3 ಪಶು ಆಸ್ಪತ್ರೆ, 19 ಪಶು ಚಿಕಿತ್ಸಾಲಯಗಳು, 1 ಪಶು ಚಿಕಿತ್ಸಾ ಕೇಂದ್ರ, 1 ಸಂಚಾರಿ ಪಶು ಚಿಕಿತ್ಸಾಲಯವಿದೆ. ಈ ಎಲ್ಲ ಅಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಲು ವೈದ್ಯರನ್ನೂ ಸೇರಿ 88 ಮಂಜೂರಿ ಹುದ್ದೆಗಳಿವೆ. ಈಗಿರುವ ಚಿಕಿತ್ಸಾ ಒತ್ತಡಕ್ಕೆ ಈ ಸಂಖ್ಯೆ ಹೆಚ್ಚಾಗಬೇಕು. ಆದರೆ ಕಾರ್ಯ ನಿರ್ವಹಿಸುವ ಸಿಬ್ಬಂದಿ ಮಾತ್ರ ಕೇವಲ 17 ಮಾತ್ರ.ಇಲ್ಲಿ ಒಂದು ವರ್ಷದಲ್ಲಿ 49 ಸಾವಿರ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಜಾನುವಾರುಗಳಿಗೆ ಕಾಲು ಬಾಯಿ, ಗಳಲೆ ಬೇನೆ, ಚಪ್ಪೆ ಬೇನೆ, ರೆಬಿಸ್, ಚರ್ಮಗಂಟು ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಸಣ್ಣ ಪ್ರಾಣಿಗಳಿಗೆ ಗಳಲೆ, ಕರುಳುಬೇನೆ, ಕುರಿ ಸಿಡುಬು, ರೆಬಿಸ್, ನೀಲಿ ನಾಲಿಗೆ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದೇ ಇಲಾಖೆಯಿಂದ ಜಾನುವಾರುಗಳಿಗೆ ವಿಮಾ ಸೌಲಭ್ಯ, ಮೇವಿನ ಕಿಟ್ ವಿತರಣೆ, ಕಿಸಾನ್ ಕಾರ್ಡ್ ವಿತರಣೆ, ಕೃತಕ ಗರ್ಭಧಾರಣೆ, ಆಕಸ್ಮಿಕವಾಗಿ ಮೃತಪಟ್ಟ ಜಾನುವಾರುಗಳ ಮಾಲೀಕರಿಗೆ ಪರಿಹಾರಧನ ಹಂಚಿಕೆ, ಕ್ಷೀರಧಾರೆ ಯೋಜನೆಯಡಿ ಪ್ರೋತ್ಸಾಹಧನ ವಿತರಣೆ, ಅನುಗ್ರಹ ಯೋಜನೆಯಡಿ ಪರಿಹಾರ ಸೇರಿದಂತೆ ವಿವಿಧ ಯೋಜನೆಗಳು ಜಾರಿಯಲ್ಲಿವೆ.ಕಳೆದ ಒಂದು ವರ್ಷದಲ್ಲಿ ಶೇ. 50ರ ಸಹಾಯಧನದಲ್ಲಿ 25 ಜನರಿಗೆ ಮೇವು ಕತ್ತರಿಸುವ ಯಂತ್ರ ನೀಡಲಾಗಿದೆ. ಮೇವು ಅಭಿರುಚಿ ಯೋಜನೆಯಲ್ಲಿ 7,272 ಮಿನಿ ಕಿಟ್‌ಗಳನ್ನು ವಿತರಿಸಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 849 ಫಲಾನುಭವಿಗಳಿಗೆ ಬಡ್ಡಿ ಸಹಾಯಧನದಡಿ ಸಾಲಕ್ಕೆ ಅನುವು ನೀಡಲಾಗಿದೆ. ಇದೆಲ್ಲದರ ನಡುವೆ ಕೊಟ್ಟಿಗೆ ಮ್ಯಾಟಗಳಿಗಾಗಿ ಹೈನುಗಾರರಿಂದ ಬಹು ದೊಡ್ಡ ಬೇಡಿಕೆ ಇದೆ. ತಾಲೂಕಿನಲ್ಲಿ ಒಂದು ವರ್ಷದಲ್ಲಿ 5 ಜಾನುವಾರು ಆರೋಗ್ಯ ಕ್ಯಾಂಪ್‌ಗಳನ್ನು ಮಾಡಲಾಗಿದೆ.
ಉತ್ತಮ ಬೆಳವಣಿಗೆ: ಇದು ಕೃಷಿ ಅವಲಂಬಿತ ತಾಲೂಕಾಗಿರುವುದರಿಂದ ಜಾನುವಾರುಗಳ ಬಳಕೆ ಹೆಚ್ಚಾಗಿದೆ. ಸಿಬ್ಬಂದಿ ಕೊರತೆ ಈಗಲೇ ಬಹುವಾಗಿ ಕಾಡುತ್ತಿದೆ. ಇತ್ತೀಚೆಗೆ ಜಾನುವಾರುಗಳ ಸಂಖ್ಯೆಯೂ ಇಳಿಮುಖವಾಗುತ್ತಿರುವುದು ಗಮನಕ್ಕೆ ಬಂದಿದೆ. ಹಾಲು ಉತ್ಪಾದನೆಯಲ್ಲಿ ಉತ್ತಮ ಬೆಳವಣಿಗೆ ಇದೆ ಎಂದು ಹಾನಗಲ್ಲ ಪಶು ವೈದ್ಯಾಧಿಕಾರಿ ಡಾ. ಗಿರೀಶ ರಡ್ಡೇರ ಹೇಳಿದರು.