ಸಾರಾಂಶ
- ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಈ ಬಾರಿ ಲೋಕಸಭಾ ಚುನಾವಣೆ ಹಾಗೂ ನೈರುತ್ಯ ವಿಧಾನ ಪರಿಷತ್ ಈ ಎರಡೂ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಅವಿರತ ಶ್ರಮ ಹಾಕಿದ್ದರೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸೋಲಾಗಿದ್ದು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಕೆ.ಪಿ. ಅಂಶುಮಂತ್ ಹೇಳಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳಲ್ಲಿನ ಮತದಾರರ ತೀರ್ಪನ್ನು ಅತ್ಯಂತ ಗೌರವದಿಂದ ಸ್ವೀಕರಿಸುತ್ತೇವೆ ಎಂದರು. ಕಾಂಗ್ರೆಸ್ ಜತೆ ಕೈ ಜೋಡಿಸಿದ ಇಂಡಿಯಾ ಮಿತ್ರ ಪಕ್ಷಗಳು, ಪ್ರಗತಿಪರ, ದಲಿತ, ರೈತ ಸಂಘಟನೆಗಳು ನಮಗೆ ಬೆಂಬಲ ನೀಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಜನಾದೇಶದ ಅಡಿ ನೂತನ ಸರಕಾರ ರಚನೆಯಾಗಿದೆ ಎಂದು ಹೇಳಿದರು.
ಅದೇ ರೀತಿ ಇಂಡಿಯಾ ರಚನಾತ್ಮಕವಾದ ಪ್ರತಿಪಕ್ಷದ ಸ್ಥಾನದಲ್ಲಿ ಕೂರಲಿದೆ. ಪ್ರತಿ ಪಕ್ಷದಲ್ಲಿದ್ದುಕೊಂಡು ಜವಾಬ್ದಾರಿಯುತ ಸ್ಥಾನವನ್ನು ಇಂಡಿಯಾ ಕೂಟ ನಿರ್ವಹಿಸಲಿದೆ ಎಂದು ಹೇಳಿದ ಅವರು, ನಮ್ಮ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಸರಳ, ಸಜ್ಜನಿಕೆಯ ವ್ಯಕ್ತಿ. ಜನಸಾಮಾನ್ಯರ ಸಮಸ್ಯೆಗಳಿಗೆ ದನಿಯಾಗಿದ್ದವರು ಎಂದು ಹೇಳಿದರು.ಅಂತವರಿಗೆ ಏಕೆ ಸೋಲಾಯಿತು ಎಂಬ ಬಗ್ಗೆ ಆತ್ಮಾವಲೋಕನ ಸಭೆಯಲ್ಲಿ ಚರ್ಚಿಸಲಿದ್ದೇವೆ. ಆಗಿರುವ ತಪ್ಪುಗಳನ್ನು ಮುಂದೆ ಸರಿಪಡಿಸಿಕೊಂಡು ಹೋಗಲಿದ್ದೇವೆ ಎಂದ ಅವರು, ಕೋಟಾ ಶ್ರೀನಿವಾಸ ಪೂಜಾರಿ ಸಂಸದರಾಗಿ ಆಯ್ಕೆಯಾಗಿದ್ದಕ್ಕೆ ಅಭಿನಂದಿಸುತ್ತೇನೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿ ಜನರ ಧ್ವನಿಯಾಗಲಿ ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ರಫ್ತು ಮತ್ತು ಕೃಷಿ ಸಂಸ್ಕರಣೆ ಮಂಡಳಿ ಅಧ್ಯಕ್ಷ ಬಿ.ಎಚ್.ಹರೀಶ್, ಮುಖಂಡರಾದ ಮಲ್ಲೇಶಸ್ವಾಮಿ, ಜಾವಿದ್ ಅಹ್ಮದ್, ರಘು, ತನೋಜ್‌ನಾಯ್ಡು ಇದ್ದರು.ಪೋಟೋ ಫೈಲ್ ನೇಮ್ 10 ಕೆಸಿಕೆಎಂ 4