ಬೆಲೆ ಏರಿಕೆಯಾದ್ರೂ ಗೌರಿ-ಗಣೇಶ ವ್ಯಾಪಾರ ಜೋರು

| Published : Aug 26 2025, 01:03 AM IST

ಸಾರಾಂಶ

ದೊಡ್ಡ ಹಬ್ಬಗಳಲ್ಲಿ ಒಂದಾದ ಗೌರಿ-ಗಣೇಶ ಹಬ್ಬಕ್ಕಾಗಿ ಗೌರಿ-ಗಣೇಶ ವಿಗ್ರಹಗಳು, ಹೂವು, ಬಾಳೆಹಣ್ಣು, ಅಲಂಕಾರಿಕ ವಸ್ತುಗಳು ಸೇರಿದಂತೆ ಪೂಜಾ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದರೂ ಮಂಗಳವಾರದ ಗೌರಿ ಬುಧವಾರದ ಗಣೇಶ ಹಬ್ಬಕ್ಕೆ ಜನರು ವಸ್ತುಗಳನ್ನು ಖರೀದಿಸುತ್ತಿರುವುದು ಮಾರುಕಟ್ಟೆಯಲ್ಲಿ ಕಂಡುಬಂತು

ಕನ್ನಡಪ್ರಭ ವಾರ್ತೆ ಚಾಮರಾಜನಗರದೊಡ್ಡ ಹಬ್ಬಗಳಲ್ಲಿ ಒಂದಾದ ಗೌರಿ-ಗಣೇಶ ಹಬ್ಬಕ್ಕಾಗಿ ಗೌರಿ-ಗಣೇಶ ವಿಗ್ರಹಗಳು, ಹೂವು, ಬಾಳೆಹಣ್ಣು, ಅಲಂಕಾರಿಕ ವಸ್ತುಗಳು ಸೇರಿದಂತೆ ಪೂಜಾ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದರೂ ಮಂಗಳವಾರದ ಗೌರಿ ಬುಧವಾರದ ಗಣೇಶ ಹಬ್ಬಕ್ಕೆ ಜನರು ವಸ್ತುಗಳನ್ನು ಖರೀದಿಸುತ್ತಿರುವುದು ಮಾರುಕಟ್ಟೆಯಲ್ಲಿ ಕಂಡುಬಂತು.ಬೆಲೆ ಏರಿಕೆಯ ನಡುವೆಯೂ ಈ ಬಾರಿ ಗೌರಿ ಗಣಪತಿ ವ್ಯಾಪಾರ ಬಲು ಜೋರಾಗಿದ್ದು, ಮಾರುಕಟ್ಟೆಯಲ್ಲಿ ವಿವಿಧ ರೀತಿಯ ವಿವಿಧ ಭಂಗಿಯ ಗೌರಿ- ಗಣಪತಿಕೊಳ್ಳಲು ಜನರು ಆಗಮಿಸುತ್ತಿದ್ದರು, ಗಣಪತಿ ಮಾರಾಟದ ಮಳಿಗೆಗಳು ಈ ವರ್ಷ ಹೆಚ್ಚಾಗಿದ್ದವು. ಅಗತ್ಯ ವಸ್ತಗಳ ಬೆಲೆ, ಹೂ, ಹಣ್ಣು ಪೂಜಾ ಸಾಮಾಗ್ರಿಗಳ ಬೆಲೆ ಹೆಚ್ಚಾದರು, ಜನರು ಲೆಕ್ಕಿಸದೇ ಖರೀದಿಯಲ್ಲಿ ತೊಡಗಿದ್ದರು. ಇದ್ದುದರಲ್ಲಿ ತರಕಾರಿಗಳ ಬೆಲೆ ಸಾಮಾನ್ಯವಾಗಿತ್ತು.

ನಗರದಲ್ಲಿ ಸೋಮವಾರವೇ ಅಂಗಡಿ ಬೀದಿಗಳಲ್ಲಿ ವ್ಯಾಪಾರದ ಭರಾಟೆ ಜೋರಾಗಿಯೇ ಇತ್ತು, ಅದರಲ್ಲೂ ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಚಾಮರಾಜೇಶ್ವರ ದೇವಸ್ಥಾನದ ಪಕ್ಕದಲ್ಲಿ ತೆರೆದಿರುವ ಗೌರಿ-ಗಣಪತಿ ಮಾರಾಟ ಮಳಿಗೆಗಳಲ್ಲಿ ವ್ಯಾಪಾರ ಬಲು ಜೋರಾಗಿತ್ತು, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳ ಯುವಕರು ತಮ್ಮ ಬಡಾವಣೆ ಮತ್ತು ಗ್ರಾಮಗಳಲ್ಲಿ ಗಣಪತಿ ಪ್ರತಿಷ್ಠಾಪಿಸಲು, ದೊಡ್ಡ ದೊಡ್ಡ ಗಣಪತಿ ವಿಗ್ರಹಗಳನ್ನು ಖರೀದಿ ಮಾಡಿ ಆಟೋಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಸೋಮವಾರ ಬೆಳಗ್ಗೆಯಿಂದಲೇ ವಸ್ತುಗಳನ್ನು ಖರೀದಿಸಲು ನಗರದ ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿಯ ದಿನಸಿ ಅಂಗಡಿಗಳು, ಬಟ್ಟೆ ಅಂಗಡಿಗಳು, ಹಳೆ ಖಾಸಗಿ ಬಸ್ ನಿಲ್ದಾಣದ ಅಂಗಡಿಗಳು, ಚಾಮರಾಜೇಶ್ವರ ದೇವಸ್ಥಾನದ ಪಕ್ಕದಲ್ಲಿ ತೆರೆದಿರುವ ಗೌರಿ-ಗಣಪತಿ ಮಾರಾಟ ಮಳಿಗೆಗಳಿಗೆ ಜನರು ಮುಗಿಬಿದ್ದರು. ಮನೆಯಲ್ಲಿ ಬಳಕೆ ತೆಗೆಯಲು ಹೊಸ ಮಡಿಕೆ, ಕುಡಿಕೆ, ಬಾಗಿನಕ್ಕೆ ಬಿದಿರು ಮೊರೆಗಳ ಖರೀದಿಯು ಜೋರಾಗಿತ್ತು.