ಸಾರಾಂಶ
ಮುನಿರಾಬಾದ್ (ಕೊಪ್ಪಳ):
ಪಾಕಿಸ್ತಾನ ಹಾಗೂ ಭಾರತದ ನಡುವೆ ಯುದ್ಧದ ಕಾರ್ಮೋಡ ಕವಿದಿದ್ದರಿಂದ ಮೇ 8ರ ಸಂಜೆಯಿಂದ ತುಂಗಭದ್ರಾ ಜಲಾಶಯಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿತ್ತು. ಇದರ ನಡುವೆ ನೀರಾವರಿ ಇಲಾಖೆಯ ತುಂಗಭದ್ರಾ ಜಲಾಶಯದ ಕಾರ್ಯಪಾಲಕ ಅಭಿಯಂತರ ಗಿರೀಶ ಮೇಟಿ, ಮೇ 10ರಂದು ಜಲಾಶಯದ ಲೇಕ್ ವ್ಯೂ ಅತಿಥಿ ಗೃಹದ ಸಮೀಪದ ಮನೆಯಲ್ಲಿ ನೂರಾರು ಜನರಿಗೆ ಮಗನ ನಿಶ್ಚಿತಾರ್ಥದ ಹೋಳಿಗೆ ಊಟ ಹಾಕಿಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಇದರಲ್ಲಿ ಹಿರಿಯ ಅಧಿಕಾರಿಗಳು ಸಹ ಭಾಗವಹಿಸಿದ್ದರು.ಪಾಕಿಸ್ತಾನದ ಮೇಲೆ ಆಪರೇಷನ್ ಸಿಂದೂರ ನಡೆಸಿದ ಬಳಿಕ ರಾಜ್ಯ ಸರ್ಕಾರ ಜಲಾಶಯಕ್ಕೆ ಸೂಕ್ತ ಭದ್ರತೆ ನೀಡಬೇಕೆಂದು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಆದೇಶ ನೀಡಿತ್ತು. ಅದರಂತೆ ಮೇ 8ರಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಮೇರೆಗೆ ಸಾರ್ವಜನಿಕರ ನಿರ್ಬಂಧ ವಿಧಿಸಲಾಗಿತ್ತು. ಜತೆಗೆ ನೀರಾವರಿ ಇಲಾಖೆ ಸಿಬ್ಬಂದಿ ಹೊರತುಪಡಿಸಿ ಯಾರಿಗೂ ಅವಕಾಶ ನೀಡಬಾರದು ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಜತೆಗೆ ಐಡಿ ಕಾರ್ಡ್ ಕಡ್ಡಾಯಗೊಳಿಸಲಾಗಿತ್ತು. ಜಲಾಶಯದ ಪ್ರವೇಶ ದ್ವಾರ ವಿಶ್ವೇಶ್ವರಯ್ಯ ವೃತ್ತದಲ್ಲಿ ಪೊಲೀಸ್ ಚೆಕ್ ಪೋಸ್ಟ್ ತೆರೆಯಲಾಗಿತ್ತು. ಆದರೆ, ನೀರಾವರಿ ಇಲಾಖೆಯ ತುಂಗಭದ್ರಾ ಜಲಾಶಯದ ಕಾರ್ಯಪಾಲಕ ಅಭಿಯಂತರ ಗಿರೀಶ ಮೇಟಿ, ಈ ಎಲ್ಲ ನಿಯಮಗಳನ್ನು ಮೀರಿ ಮೇ 10ರಂದು ನಿಷೇಧಿತ ಪ್ರದೇಶದಲ್ಲಿ ಮಗನ ನಿಶ್ಚಿತಾರ್ಥದ ನಿಮಿತ್ತ ಬೀಗರಿಗೆ ಹಾಗೂ ಗೆಳೆಯರಿಗೆ ಹೋಳಿಗೆ ಊಟ ಹಾಕಿಸಿದ್ದಾರೆ.
ಒಳಬಿಟ್ಟಿದ್ದು ಯಾರು?ಮೇ 8 ಸಂಜೆ ಪೊಲೀಸ್ ಅಧಿಕಾರಿಗಳು ಬಂದು ಚೆಕ್ ಪೋಸ್ಟ್ ಸ್ಥಾಪಿಸಿ ಹೋದ ನಂತರವೂ ಆ ಚೆಕ್ ಪೋಸ್ಟ್ ಮೂಲಕ ಅವರ ಮನೆಗೆ ಶಾಮಿಯಾನ, ಕುರ್ಚಿ ಹಾಗೂ ಆಹಾರ ಪದಾರ್ಥಗಳನ್ನು ವಾಹನದಲ್ಲಿ ಹೇಗೆ ಸಾಗಿಸಲಾಗಿತ್ತು ಎಂಬುದು ಯಕ್ಷಪ್ರಶ್ನೆಯಾಗಿದೆ. ಚೆಕ್‌ಪೋಸ್ಟ್‌ನಲ್ಲಿ ಭದ್ರತಾ ಲೋಪವಾಗಿದೆಯಾ? ಎಂಬ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ಉನ್ನತ ಮಟ್ಟದ ತನಿಖೆ ನಡೆಸಬೇಕಾಗಿದೆ.
2ನೇ ಬಾರಿ ಭದ್ರತಾ ಲೋಪ:ಕಳೆದ ವರ್ಷ ಬಿಗಿ ಭದ್ರತೆ ಇರುವ ತುಂಗಭದ್ರಾ ಜಲಾಶಯದ ಮೇಲೆ ಗೇಟಿನ ಮುಂದೆ ನಿಂತು ನವದಂಪತಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ನಿಯಮ ಉಲ್ಲಂಘಿಸಿದ್ದರು. ಈ ಕುರಿತು ಪ್ರಕರಣ ದಾಖಲಾಗಿದ್ದರೂ ಯಾವ ಕ್ರಮವಾಗಿಲ್ಲ. ಈ ಬಾರಿ ಕಾರ್ಯಪಾಲಕ ಅಭಿಯಂತರರು ನಿಯಮ ಉಲ್ಲಂಘಿಸಿ ನೂರಾರು ಜನರನ್ನು ಸೇರಿಸಿದ್ದಾರೆ. ಈ ಎರಡು ಘಟನೆಗಳು ಒಂದು ವರ್ಷದೊಳಗೆ ನಡೆದಿದ್ದು ಭದ್ರತಾ ಲೋಪ ಆಗಿರುವುದು ಸ್ಪಷ್ಟವಾಗಿದೆ.
ತುಂಗಭದ್ರಾ ಜಲಾಶಯ ಭದ್ರತೆ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೀತಿ-ನಿಯಮ ಪಾಲಿಸಬೇಕಾದ ಕಾರ್ಯಪಾಲಕ ಅಭಿಯಂತರ ಗಿರೀಶ್ ಮೇಟಿ ಆ ನೀತಿ ನಿಯಮ ಗಾಳಿಗೆ ತೂರಿದ್ದು ಅಪರಾಧವಾಗಿದೆ. ಸರ್ಕಾರ ಕೂಡಲೇ ಅವರ ಮೇಲೆ ಶಿಸ್ತು ಕ್ರಮಕೈಗೊಳ್ಳಬೇಕೆಂದು ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷ ಗೋನಾಳ ಆಗ್ರಹಿಸಿದ್ದಾರೆ.ಈ ಬಗ್ಗೆ ನನಗೆ ಮಾಹಿತಿ ಇಲ್ಲ, ನಾವಂತೂ ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಯಾರಿಗೂ ಸಹ ಅನುಮತಿ ನೀಡಿಲ್ಲ. ಅವರು ಪರವಾನಗಿ ಪಡೆದುಕೊಂಡಿದ್ದಾರೋ ಗೊತ್ತಿಲ್ಲ. ಪರಿಶೀಲಿಸಲಾಗುವುದು.ಡಾ. ಎಲ್. ರಾಮ ಅರಸಿದ್ದಿ, ಎಸ್ಪಿ, ಕೊಪ್ಪಳ