ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿಬರದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 2 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಮಾರ್ಚ್ ತಿಂಗಳಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮನವಿ ಮಾಡಿದ್ದರೂ ಈವರೆಗೆ ನೀರು ಬಿಟ್ಟಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಆರೋಪಿಸಿದರು.ನಗರದಲ್ಲಿ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಾಪುರ ಬ್ಯಾರೇಜ್‌ನಿಂದ ಹೆಚ್ಚಾದ ನೀರು ಸ್ವಲ್ಪಮಟ್ಟಿಗೆ ಕೃಷ್ಣಾ ನದಿಗೆ ಬಂದಿದ್ದು, 10 ದಿನಗಳ ಕಾಲ ಜನತೆಗೆ ಅನುಕೂಲವಾಗಲಿದೆ ಎಂದರು.ಕೊಯ್ನಾ ಡ್ಯಾಮ್‌ನಿಂದ ಕೃಷ್ಣಾ ನದಿಗೆ ನೀರು ಹರಿಸುವುದು, ಆಲಮಟ್ಟಿ ಜಲಾಶಯದಿಂದ ಮಹಾರಾಷ್ಟ್ರ ರಾಜ್ಯ ಗಡಿ ಪ್ರದೇಶಗಳಿಗೆ ನೀರು ಹರಿಸುವ ಯೋಜನೆ ಚರ್ಚೆಯಲ್ಲಿ ಮಾತ್ರ ಇದೆ. ಆದರೆ, ಈ ಕುರಿತು ಸರ್ಕಾರದ ಮಟ್ಟದಲ್ಲಿ ಯಾವುದೇ ಅಧಿಕೃತ ನಿರ್ಧಾರವಾಗಿಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅಥಣಿಗೆ ಬಂದಾಗ ಮಹಾರಾಷ್ಟ್ರದ ಶಾಸಕರು ಈ ಬಗ್ಗೆ ಚರ್ಚಿಸಿದ್ದಾರೆ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಿಜೆಪಿಗರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತೋ ಅಥವಾ ಕಾಂಗ್ರೆಸ್ ಸರ್ಕಾರವಿದ್ದಾಗ ಹದಗೆಟ್ಟಿತ್ತೋ ಎನ್ನುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಕಿ ಅಂಶಗಳ ಮೂಲಕ ಮಾಹಿತಿ ನೀಡಿದ್ದಾರೆ. ಸರ್ಕಾರ ಒಂದು ವರ್ಷದ ಅವಧಿ ಯಶಸ್ವಿಯಾಗಿ ಪೂರೈಸಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಬಿಜೆಪಿ ಅವಧಿಯಲ್ಲಿ ಹಾಗೂ ಕಾಂಗ್ರೆಸ್ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಹೇಗಿತ್ತು ಎಂಬ ಬಗ್ಗೆ ಅಂಕಿ ಅಂಶಗಳ ಮೂಲಕ ಮಾಹಿತಿ ನೀಡಿದ್ದಾರೆ ಎಂದರು.ಇನ್ನು ಲೋಕಸಭಾ ಚುನಾವಣೆಯ ಬಳಿಕ ಸಂಪುಟ ವಿಸ್ತರಣೆಯಿಲ್ಲ ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶ ನಂತರ ಯಾವುದೇ ಬದಲಾವಣೆ ಆಗಲ್ಲ. ಡಿಸಿಎಂ ಕೂಗು ಕೂಡ ಈಗ ಇಲ್ಲ. ಚುನಾವಣೆಕ್ಕಿಂತ ಮುಂಚೆ ಮಾಡಿದರೇ ಚುನಾವಣೆಯಲ್ಲಿ ಅನುಕೂಲ ಆಗತ್ತಿತ್ತು ಎಂಬುವುದು ನಮ್ಮ ನಿಲುವು ಆಗಿತ್ತು ಎಂದರು.ಜನತೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವುದರಲ್ಲಿ ನಮಕ್ಕಿಂತ ಅಧಿಕಾರಿಗಳ ಪಾತ್ರ ಮಹತ್ವದಿದೆ. ಅಧಿಕಾರಿಗಳು ನಾಲ್ಕು ಗೋಡೆಯಲ್ಲಿ ಕುಳಿತರೆ ಸಾಲದು, ಸಾರ್ವಜನಕರ ಸಮಸ್ಯೆಗೆ ಸ್ಪಂದಿಸಬೇಕು. ಅಧಿಕಾರಿಗಳನ್ನು ಸಾರ್ವಜನಿಕರೊಂದಿಗೆ, ಮಾಧ್ಯಮದವರು ಪ್ರಶ್ನಿಸಬೇಕು. ಬೆಳಗಾವಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಪೌರಕಾರ್ಮಿಕರ ಬಾಕಿ ವೇತನ ನೀಡಲು ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿದೇನೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಶಾಸಕ ಆಸೀಫ್(ರಾಜು) ಸೇಠ್, ಮಾಜಿ ಸಚಿವ ವೀರಕುಮಾರ್ ಪಾಟೀಲ್, ಕಾಂಗ್ರೆಸ್ ಕಮಿಟಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ್ ನಾವಲಗಟ್ಟಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಇದ್ದರು.