ಸಾರಾಂಶ
ದೇವಸ್ಥಾನಗಳಲ್ಲಿ ವಿಶೇಷ ಪೂಜೆ-ನದಿ ತೀರ, ಉದ್ಯಾನಗಳಲ್ಲಿ ಸಹಭೋಜನ
ಕನ್ನಡಪ್ರಭ ವಾರ್ತೆ ಹಾವೇರಿಹೊಸ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯನ್ನು ಜಿಲ್ಲಾದ್ಯಂತ ಬರದ ನಡುವೆಯೂ ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಬರಗಾಲದಿಂದ ನದಿಗಳು ಬತ್ತುತ್ತಿದ್ದು, ಇದ್ದ ಅಲ್ಪ ಪ್ರಮಾಣದ ನದಿ ತೀರಗಳಲ್ಲಿಯೇ ಹಲವರು ಪುಣ್ಯ ಸ್ನಾನ ಮಾಡಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕುಟುಂಬ ಸದಸ್ಯರಿಗೆ ಎಳ್ಳುಬೆಲ್ಲ ನೀಡಿ ಶುಭಾಶಯ ಕೋರಿದರು.ತಾಲೂಕಿನ ಗುತ್ತಲ ಬಳಿ ಚೌಡದಾನಪುರದ ತುಂಗಾ ತೀರದಲ್ಲಿ, ಕರ್ಜಗಿ ಬಳಿಯ ವರದಾ ನದಿಯಲ್ಲಿ, ವರದಾ ಹಾಗೂ ಧರ್ಮಾ ನದಿ ಸಂಗಮದ ಕೂಡಲದಲ್ಲಿ, ಶಿಗ್ಗಾಂವಿ ತಾಲೂಕಿನ ದಕ್ಷಿಣಕಾಶಿ ಗಂಗಿಬಾವಿಯಲ್ಲಿ, ಹಿರೇಕೆರೂರು ತಾಲೂಕಿನ ಮದಗ ಮಾಸೂರು ಕೆರೆಯಲ್ಲಿ, ಹಿರೇಕೆರೂರಿನ ದುರ್ಗಾದೇವಿ ಕೆರೆಯಲ್ಲಿ ಸಾವಿರಾರು ಜನರು ಮಕರ ಸಂಕ್ರಮಣದ ಅಂಗವಾಗಿ ಪುಣ್ಯ ಸ್ನಾನ ಮಾಡಿದರು.
ಬ್ಯಾಡಗಿ ತಾಲೂಕು ಕದರಮಂಡಲಗಿ, ಕಾಗಿನೆಲೆ, ದೇವರಗುಡ್ಡ, ಶಿಶುನಹಾಳ ಶರೀಫಗಿರಿ, ಹಾವನೂರ ಗ್ರಾಮದೇವತೆ, ಕಾರಡಗಿ ವೀರಭದ್ರೇಶ್ವರ ದೇವಸ್ಥಾನ, ಗಳಗನಾಥ, ಹಾವೇರಿಯ ಪುರಸಿದ್ದೇಶ್ವರ ಸೇರಿದಂತೆ ಜಿಲ್ಲೆಯ ಪ್ರಸಿದ್ಧ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದ ಆವರಣ, ನದಿ ತೀರ ಹಾಗೂ ಪ್ರೇಕ್ಷಣೀಯ ಸ್ಥಳದಲ್ಲೇ ಸಹಭೋಜನ ಮಾಡಿ ಸಂಭ್ರಮಿಸಿದರು.ನಗರದ ಪುರಸಿದ್ದೇಶ್ವರ ದೇವಸ್ಥಾನದ ಉದ್ಯಾನವನದಲ್ಲಿ ನಗರದ ನೂರಾರು ಜನರು ಪರಸ್ಪರ ಎಳ್ಳು-ಬೆಲ್ಲ ಹಂಚಿ, ಸಂಕ್ರಮಣ ಹಬ್ಬದ ಶುಭಾಶಯ ನಿಮಯ ಮಾಡಿಕೊಂಡರು. ಮನೆಯಿಂದ ತಂದಿದ್ದ ಸಜ್ಜಿ ರೊಟ್ಟಿ, ಎಣ್ಣೆ ಬದನೆ ಕಾಯಿ, ಗುರೆಳ್ಳು ಚಟ್ನಿ, ಶೇಂಗಾ ಚಟ್ನಿ, ಶೇಂಗಾ ಹೋಳಿಗಿ, ಕಡುಬು, ಚಿತ್ರಾನ್ನಾ, ಎಳ್ಳ ಹೋಳಿಗಿ, ಸೇರಿದಂತೆ ವಿವಿಧ ಖಾದ್ಯಗಳೊಂದಿಗೆ ಕುಟುಂಬ ಸದಸ್ಯರು, ಸ್ನೇಹಿತರು ವಿಶೇಷ ಭೋಜನ ಸವಿದು ಉತ್ತರಾಯಣವನ್ನು ಸ್ವಾಗತಿಸಿದರು. ಬರದ ನಡುವೆಯೂ ಗ್ರಾಮೀಣ ಜನರು ಸಂಕ್ರಾಂತಿ ಹಬ್ಬವನ್ನು ಸಡಗರದಲ್ಲಿ ಆಚರಿಸಿದರು. ಹೊಸ ಬಟ್ಟೆ ಧರಿಸಿ ಎಳ್ಳು ಬೆಲ್ಲ ನೀಡಿ ಸಾಮರಸ್ಯದಿಂದ ಬೆರೆತು ಬಾಳೋಣ ಎಂದು ಶುಭ ಕೋರಿದರು.