ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದಲ್ಲಿ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲು ತೂರಾಟವಾಗಿ ದೊಡ್ಡ ಮಟ್ಟದ ಘರ್ಷಣೆಯಾಗಿದ್ದರೂ ಕ್ಷೇತ್ರದ ಶಾಸಕರೂ ಮಾತ್ರ ಎಲ್ಲಿದ್ದಾರೆಂಬುದೇ ತಿಳಿಯದಾಗಿದೆ ಎಂದು ಮೈಸೂರು- ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದರು.ಪಟ್ಟಣದ ಹೊಳೇ ಆಂಜನೇಯಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಗೃಹ ಸಚಿವರು ಇಲ್ಲಿ ಬಂದು ಪರಿಶೀಲನೆ ನಡೆಸಬೇಕಿತ್ತು. ಸ್ಥಳೀಯ ಶಾಸಕರೂ ಸಹ ಜನರ ಸಮಸ್ಯೆ ಆಲಿಸಬೇಕಿತ್ತು. ಈಗ ಶಾಸಕರು ಎಲ್ಲಿ ಎಂದು ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ. ಆದರೂ ಅವರ ಪತ್ತೆ ಇಲ್ಲ ಎಂದರು.
ಜನರು ಎಷ್ಟು ನೋವಿನಲ್ಲಿದ್ದಾರೆ ಎಂಬುದರ ಬಗ್ಗೆ ಸರ್ಕಾರ ಗ್ರೌಂಡ್ ರಿಯಾಲಿಟಿ ನಡೆಸಿದಲ್ಲಿ ಜನರ ಆಕ್ರೋಶ ಹೇಗಿದೆ ಎಂಬುದು ತಿಳಿಯುತ್ತದೆ. ಕಿಡಿಗೇಡಿಗಳು ಎಲ್ಲಿರುತ್ತಾರೋ ಅಲ್ಲಿ ನಾವು ಧರ್ಮದ ರಕ್ಷಣೆಗೆ ಇರುತ್ತೇವೆ. ಧರ್ಮದ ರಕ್ಷಣೆಯಲ್ಲಿ ಬಿಜೆಪಿ ಯಾವಾಗಲೂ ಸಿದ್ಧ. ಮದ್ದೂರಿನಲ್ಲಿ ಧರ್ಮ ರಕ್ಷಣೆಗೆ ನಾವು ಸದಾ ಸಿದ್ದರಿದ್ದೇವೆ ಎಂದರು. ಪೂಜಾ ಕಾರ್ಯಗಳು ಅರಮನೆ ಸಂಸ್ಕೃತಿ ಪ್ರಕಾರವೇ ನೆರವೇರಲಿದೆ: ಯದುವೀರ್ಮದ್ದೂರು:
ಮೈಸೂರು ದಸರಾ ಉತ್ಸವದ ಅಂಗವಾಗಿ ನಡೆಯುವ ಖಾಸಗಿ ದರ್ಬಾರ್ ಸೇರಿದಂತೆ ಅನೇಕ ಪೂಜಾ ಕಾರ್ಯಗಳು ಅರಮನೆ ಸಂಸ್ಕೃತಿ ಪ್ರಕಾರವೇ ನೆರವೇರಲಿದೆ. ಇವುಗಳೆಲ್ಲವೂ ರಾಜರು ಮತ್ತು ರಾಜ ಮನೆತನದ ಪೂಜೆಗಳಾಗಿವೆ ಎಂದು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.ಪಟ್ಟಣದ ಹೊಳೆ ಆಂಜನೇಯನ ಸ್ವಾಮಿಗೆ ಕುಟುಂಬ ಸಮೇತ ಹರಕೆ ತೀರಿಸಿದ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ನಡೆಸುವ ದಸರಾ ಉತ್ಸವಕ್ಕೂ ಅರಮನೆ ಕಾರ್ಯಕ್ರಮಗಳಿಗೂ ಯಾವುದೇ ರೀತಿಯ ಸಂಬಂಧವಿಲ್ಲ, ಆದರೆ, ದಸರಾ ಉತ್ಸವದ ಜೊತೆ ಜೊತೆಯಲ್ಲೇ ನಡೆಯಲಿವೆ ಎಂದು ಸ್ಪಷ್ಟಪಡಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ದೇವಾಲಯಕ್ಕೆ ಬಂದು ಹರಕೆ ಕಟ್ಟಿಕೊಂಡಿದ್ದೆ. ಚುನಾವಣೆಯಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಬಂದು ಹಕರೆ ತೀರಿಸಿದ್ದೇನೆ ಎಂದರು.ಇಲ್ಲಿ ಇಷ್ಟಾರ್ಥ ಸಿದ್ಧಿಸಲು ಒಂದೂಕಾಲು ರುಪಾಯಿ ಹಕರೆ ಕಟ್ಟಿಕೊಳ್ಳುವುದು ಪ್ರತೀತಿ. ಈ ಹಿಂದೆ ಚುನಾವಣೆ ಸಂದರ್ಭ ಹರಕೆ ಕಟ್ಟಿಕೊಂಡಿದ್ದ ಯದುವೀರ್ ಒಡೆಯರ್, ಇಂದು ದೇವಾಲಯಕ್ಕೆ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಮಾಜಿ ನಿರ್ದೇಶಕಿ ರೂಪ, ಮುಖಂಡರಾದ ಕದಲೂರು ನವೀನ, ವೀರಭದ್ರಸ್ವಾಮಿ ಮತ್ತಿತರಿದ್ದರು.ಪೊಲೀಸ್ ಬಂದೋಬಸ್ತ್‌ನಲ್ಲಿ ಗಣೇಶ ಮೂರ್ತಿ ವಿಸರ್ಜನೆ
ಮದ್ದೂರು:ಪಟ್ಟಣದ ಚನ್ನೇಗೌಡ ಬಡಾವಣೆಯ ಶನಿಮಹಾತ್ಮ ದೇವಾಲಯದ ಬಳಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಯನ್ನು ಶನಿವಾರ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ವಿಸರ್ಜನೆ ಮಾಡಲಾಯಿತು.
ವಿಸರ್ಜನೆ ಮುನ್ನ ಮೆರವಣಿಗೆ ರಾಮ್ ರಹೀಮ್ ನಗರದ ಮಸೀದಿ ಬಳಿ ಬಂದಾಗ ಅಲ್ಪಸಂಖ್ಯಾತ ಕೋಮಿನ ಕೆಲವರು ಗಣೇಶಮೂರ್ತಿಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸುವುದಾಗಿ ಮೆರವಣಿಗೆ ಆಯೋಜಕರಲ್ಲಿ ಮನವಿ ಮಾಡಿದರು.ಈ ವೇಳೆ ಆಯೋಜಕರ ಗುಂಪಿನಲ್ಲಿದ್ದ ಕೆಲವು ಮಹಿಳೆಯರು ಪುಷ್ಪಾರ್ಚನೆಗೆ ಅವಕಾಶ ನೀಡದ ಕಾರಣ ಉಭಯ ಗುಂಪುಗಳ ನಡುವೆ ಸಣ್ಣ ಪ್ರಮಾಣದಲ್ಲಿ ಮಾತಿನ ಚಕಮಕಿ ನಡೆಯಿತು. ನಂತರ ಸ್ಥಳದಲ್ಲಿದ್ದ ಪೊಲೀಸರು ಗುಂಪನ್ನು ಸಮಾಧಾನ ಪಡಿಸಿದ ಬಳಿಕ ಮೆರವಣಿಗೆ ಮುಂದೆ ಸಾಗಲು ಅನುವು ಮಾಡಿಕೊಟ್ಟರು.
ಮೆರವಣಿಗೆ ಪೇಟೆ ಬೀದಿಯ ಮಸೀದಿ ಬಳಿ ಬಂದಾಗ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ತರಾತುರಿಯಲ್ಲಿ ಮೆರವಣಿಗೆ ಮುಂದೆ ಸಾಗಿಸಿದ ಬಳಿಕ ಕೊಲ್ಲಿ ಸರ್ಕಲ್ ಸಮೀಪದ ಶಿಂಷಾ ನದಿಯಲ್ಲಿ ಸಂಜೆ ವಿಸರ್ಜನೆ ಮಾಡಲಾಯಿತು.ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಈ.ಗಂಗಾಧರಸ್ವಾಮಿ, ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ವೆಂಕಟೇಗೌಡ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ಸೆ.22 ರಂದು ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ
ಮದ್ದೂರು: ಪಟ್ಟಣದಲ್ಲಿ ಗಲಭೆ ಖಂಡಿಸಿ, ಹಿಂದೂ ಸಂಘಟನೆಗಳ ನಡೆಸಿದ ರ್ಯಾಲಿ ವಿರೋಧಿಸಿ ಪ್ರಗತಿಪರ ಸಂಘಟನೆಗಳು ಸೆ.22ರಂದು ಪ್ರತಿಭಟನಾ ರ್ಯಾಲಿ ನಡೆಸಲು ನಿರ್ಧರಿಸಿವೆ. ರ್ಯಾಲಿಗೆ ಮುಸ್ಲಿಮರು ತನು, ಮನ, ಧನ ನೀಡುವುದಾಗಿ ಜಾಮಿಯಾ ಮಸೀದಿ ಅಧ್ಯಕ್ಷ ಆದಿಲ್ ಆಲಿಖಾನ್ ಹೇಳಿಕೆ ನೀಡಿದ್ದಾರೆ. ಪ್ರತಿಭಟನಾ ಪೂರ್ವಭಾವಿ ಸಭೆಯಲ್ಲಿ ಆದಿಲ್ ಆಲಿಖಾನ್ ಹೇಳಿಕೆ ನೀಡಿದ್ದು, ಪ್ರತಿಭಟನೆ ಮಾಡಲು ಹಣ ಕೂಡ ಮುಖ್ಯ. ನಿಮ್ಮ ಪ್ರತಿಭಟನಾ ರ್ಯಾಲಿಗೆ ನಾವೂ ಸಹ ಧನ ಸಹಾಯ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಮೊನ್ನೆಯಷ್ಟೇ ಶಾಂತಿ ಮಂತ್ರ ಪಠಿಸಿದ್ದ ಮುಸ್ಲಿಂ ಮುಖಂಡ, ನಮ್ಮವರೇ ಕಲ್ಲೆಸೆದು ತಪ್ಪು ಮಾಡಿ ಬಿಟ್ಟಿದ್ದಾರೆ ಎಂದಿದ್ದ ಆದಿಲ್, ಈಗ ಪ್ರಗತಿಪರ ಸಂಘಟನೆಗಳ ಪ್ರತಿಭಟನೆಗೆ ಕೈ ಜೋಡಿಸುವುದಾಗಿ ತಿಳಿಸಿದ್ದಾರೆ.