ಸಾರಾಂಶ
ಕನಕಪುರ: ನರೇಗಾ ಯೋಜನೆಯಡಿ ಅನಾವಶ್ಯಕ ಕಾಮಗಾರಿ ಕೈಗೊಂಡು ಒಡೆದು ಹಾಕುವುದು ಕ್ರಿಮಿನಲ್ ಅಪರಾಧ, ಕಾಮಗಾರಿ ಒಡೆದು ಹಾಕಿರುವವರು ಮರು ನಿರ್ಮಾಣ ಮಾಡಬೇಕು. ಇಲ್ಲ ಸರ್ಕಾರಕ್ಕೆ ಹಣ ವಾಪಸ್ ಕಟ್ಟಬೇಕು ಎಂದು ನರೇಗಾ ಜಿಲ್ಲಾ ಸಂಯೋಜಕ ಶ್ರೀನಿವಾಸ್ ಸೂಚನೆ ನೀಡಿದರು.
ತಾಲೂಕಿನ ಕಸಬಾ ಹೋಬಳಿಯ ನಾರಾಯಣಪುರ ಗ್ರಾಪಂ ಆವರಣದಲ್ಲಿ ನಡೆದ 2023-2024 ನೇ ಸಾಲಿನ ಸಾಮಾಜಿಕ ಲೆಕ್ಕಪರಿಶೋಧನಾ ವಿಶೇಷ ಗ್ರಾಮ ಸಭೆಯಲ್ಲಿ ವರದಿ ಮಂಡಿಸಿ ಮಾತನಾಡಿದ ಅವರು, ಕೆಲ ಫಲಾನುಭವಿಗಳು ಅನಾವಶ್ಯಕವಾಗಿ ಕಾಮಗಾರಿಗಳನ್ನು ಕೈಗೊಂಡು ನಂತರ ಅದನ್ನು ಒಡೆದು ಹಾಕಿದ್ದಾರೆ. ಈ ರೀತಿ ಹಣ ಪೋಲು ಮಾಡಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲು ಅವಕಾಶ ಇದೆ ಎಂದು ಎಚ್ಚರಿಕೆ ನೀಡಿದರು.ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಲ್ಲಿ 849 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಗ್ರಾಪಂ 671 ಕಾಮಗಾರಿಯಿಂದ 2,13,86,698 ರು. ಖರ್ಚಾಗಿದೆ. ಅರಣ್ಯ ಇಲಾಖೆ 23 ಕಾಮಗಾರಿಗಳಿಂದ 23,48,344 ಖರ್ಚು, ತೋಟಗಾರಿಕೆ ಇಲಾಖೆಯ 71 ಕಾಮಗಾರಿಳಿಂದ 7,45,538 ಖರ್ಚಾಗಿದೆ. ಕೃಷಿ ಇಲಾಖೆ 10 ಕಾಮಗಾರಿಗಳಿಂದ 2,76,559 ರು. ಖರ್ಚಾಗಿದೆ. ಒಟ್ಟಾರೆ 849 ಕಾಮಗಾರಿಗಳನ್ನು ಕೈಗೊಂಡು 2,65,19,151 ಖರ್ಚಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಇಂಜಿನಿಯರ್ ಶಿವಪ್ರಸಾದ್ ಮಾತನಾಡಿ, ನರೇಗಾ ಯೋಜನೆಯಡಿ ರೈತರಿಗೆ ಅನುಕೂಲವಾಗುವ ಕಾರ್ಯಕ್ರಮಗಳಿದ್ದು ರೈತರು ತಮಗೆ ಅನುಕೂಲವಾಗುವ ಕಾಮಗಾರಿಗಳನ್ನು ಕೈಗೊಳ್ಳಬೇಕು. ಅನಾವಶ್ಯಕ ಯಾವುದೇ ಕಾಮಗಾರಿಗಳನ್ನು ಕೈಗೊಂಡು ಸರ್ಕಾರದ ಹಣ ಪೋಲು ಮಾಡಬೇಡಿ ಎಂದು ಸಲಹೆ ನೀಡಿದರು.ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಧುಮಾಲ, ಅಭಿವೃದ್ಧಿ ಅಧಿಕಾರಿ ಮಹಾಂತೇಶ್, ಗ್ರಾಪಂ ಅಧ್ಯಕ್ಷ ಚಾಮುಂಡಿ, ಉಪಾಧ್ಯಕ್ಷೆ ಗಿರಿಜಮ್ಮ, ಸದಸ್ಯರಾದ ರೇಣುಕಪ್ಪ, ಕಮಲಮ್ಮ, ಮಾಜಿ ಅಧ್ಯಕ್ಷ ಗುರುರಾಜ, ಎಸ್‌ಡಿಎ ಸುರೇಶ್, ಸಿಬ್ಬಂದಿ ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 02:ನಾರಾಯಣಪುರ ಗ್ರಾಪಂ ಆವರಣದಲ್ಲಿ ನಡೆದ ಲೆಕ್ಕ ಪರಿಶೋಧನಾ ವಿಶೇಷ ಗ್ರಾಮಸಭೆಯಲ್ಲಿ ಜಿಲ್ಲಾ ಸಂಯೋಜಕ ಶ್ರೀನಿವಾಸ್ ವರದಿ ಮಂಡಿಸಿದರು.