ಹೈಡ್ರೋಜನ್‌ ಉತ್ಪಾದನೆಗೆ ವಿಸ್ತೃತ ಯೋಜನೆ ಸಿದ್ದ: ಡಾ.ರಂಗನಾಥ್

| Published : Mar 27 2025, 01:06 AM IST

ಸಾರಾಂಶ

ಕರ್ನಾಟಕ ರಾಜ್ಯದಲ್ಲಿ ಹೈಡ್ರೋಜನ್ ಅನಿಲ ಉತ್ಪಾದನೆಗೆ ಈಗಾಗಲೇ ಸ್ಥಳ ಪರಿಶೀಲಿಸಿ ಅದಕ್ಕೆ ಬೇಕಾದ ಸಮಗ್ರ ಯೋಜನಾ ವರದಿ ತಯಾರಿಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ ಎಂದು ಆರ್ಥಿಕ ತಜ್ಞ ಡಾ ಎಂ.ಆರ್.ರಂಗನಾಥ್ ಹೇಳಿದರು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಕರ್ನಾಟಕ ರಾಜ್ಯದಲ್ಲಿ ಹೈಡ್ರೋಜನ್ ಅನಿಲ ಉತ್ಪಾದನೆಗೆ ಈಗಾಗಲೇ ಸ್ಥಳ ಪರಿಶೀಲಿಸಿ ಅದಕ್ಕೆ ಬೇಕಾದ ಸಮಗ್ರ ಯೋಜನಾ ವರದಿ ತಯಾರಿಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ ಎಂದು ಆರ್ಥಿಕ ತಜ್ಞ ಡಾ ಎಂ.ಆರ್.ರಂಗನಾಥ್ ಹೇಳಿದರು.

ನಗರದ ಕೃಷಿ ಮಿತ್ರ ಕಚೇರಿಯಲ್ಲಿ ‌ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ರಾಮದುರ್ಗ , ಹೊನ್ನಾವರ ತಾಲೂಕಿನ ಹಳದಿಪುರ ಗ್ರಾಮ ವ್ಯಾಪ್ತಿಯಲ್ಲಿ ಹೈಡ್ರೋಜನ್ ಅನಿಲ ಉತ್ಪಾದನೆಗೆ ಸ್ಥಳ ಗುರುತಿಸಲಾಗಿದೆ. 1 ಸಾವಿರ ಮೆಗಾ ವ್ಯಾಟ್ ಹಳದಿಪುರ ಗ್ರಾಮ ವ್ಯಾಪ್ತಿ, ಹಾಗೂ 100 ಮೆಗಾ ವ್ಯಾಟ್ ರಾಮದುರ್ಗದಲ್ಲಿ ಉತ್ಪಾದನೆಗೆ ಸಮಗ್ರ ಯೋಜನಾ ವರದಿ ತಯಾರಿಸಲಾಗಿದೆ. ಇದಲ್ಲದೆ ಬೆಳಗಾವಿ ಜಿಲ್ಲೆಯ ಸವದತ್ತಿ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು, ಬಿಳಿಗಿ ತಾಲೂಕಿನ ಸಿದ್ದಾಪುರ ಮತ್ತು ಕರಕಲಮಟ್ಟಿ, ಹೊನ್ನಾವರ ಮತ್ತು ರಾಮದುರ್ಗದಲ್ಲಿ ಹೈಡ್ರೋಜನ್ ವಿದ್ಯುತ್ ಶಕ್ತಿ ಅಂದರೆ ಸೌರ ವಿದ್ಯುತ್ ಮತ್ತು ವಾಯು ವಿದ್ಯುತ್ ಶಕ್ತಿ ಉತ್ಪಾದನೆಗೆ ಸ್ಥಳ ಪರಿಶೀಲಿಸಿ, ಅಗತ್ಯ ಯೋಜನಾ ವರದಿಯನ್ನು ತಯಾರು ಮಾಡಲಾಗಿದೆ. ಇದನ್ನು ಪಬ್ಲಿಕ್ ಪ್ರೈವೇಟ್ ಮಾಡೆಲ್‌ನಲ್ಲಿ ಕೇಂದ್ರ ಸರ್ಕಾರದ ಅನುಮತಿಗೆ ಕಳಿಸಿಕೊಡಲಾಗುತ್ತಿದೆ ಎಂದು ಹೇಳಿದರು.

ಸಾರ್ವಜನಿಕ ಹಾಗೂ ಖಾಸಗಿ ಪಾಲುದಾರಿಕೆ ಮಾದರಿಯಲ್ಲಿ ಅಂದಾಜು 8,000 ಕೋಟಿ ರು. ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಹಾಗೂ ರಾಜ್ಯ ಸರ್ಕಾರದ ಸಹಕಾರ ನಿರೀಕ್ಷಿಸಲಾಗಿದೆ. ನಮ್ಮ ರಾಜ್ಯದಲ್ಲಿ 1900 ಮೆಗಾ ವ್ಯಾಟ್ ವಿದ್ಯುತ್ ಕೊರತೆ ಇದ್ದು ಈ ಯೋಜನೆಯಿಂದ ವಿದ್ಯುಚ್ಛಕ್ತಿ ಕೊರತೆ ನಿವಾರಿಸಬಹುದು. ಅಲ್ಲದೆ ಸುಮಾರು 5 ಸಾವಿರ ಉದ್ಯೋಗ ಸೃಷ್ಟಿ ಮಾಡಬಹುದು ಎಂದು ತಿಳಿಸಿದರು.

ಇಎಂಇಇ ಕಂಪನಿ ಅಧ್ಯಕ್ಷ ಶ್ರೀಪಾದಗೌಡ ಮಾತನಾಡಿ, 2025- 26ರ ವೇಳೆಗೆ ಭಾರತಾದ್ಯಂತ 13 ರಾಜ್ಯಗಳಲ್ಲಿ ಸೋಲಾರ್ ಪಾರ್ಕ್ ಸ್ಥಾಪಿಸಲು ಕೇಂದ್ರ ಸರ್ಕಾರ ಮಂಜೂರು ಮಾಡಿದ 55 ಸೋಲಾರ್ ಪಾರ್ಕ್ ನಲ್ಲಿ 31 ಯೋಜನೆಗಳು ಸ್ಥಾಪನೆಯಾಗಿವೆ. ಸೋಲಾರ್ ಪಾರ್ಕ್‌ಗಳ ಅಭಿವೃದ್ಧಿ ಮತ್ತು ಅಲ್ಟ್ರಾ- ಮೆಗಾ ಸೋಲಾರ್ ಪವರ್ ಪ್ರಾಜೆಕ್ಟ್‌ಗಳ ಯೋಜನೆ ಅಡಿಯಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆ ಕಲ್ಪಿಸಲಾಗಿದೆ. ಈ ಯೋಜನೆಯು ದೊಡ್ಡ ಪ್ರಮಾಣದ ಸೌರ ಯೋಜನೆಗಳ ಅನುಷ್ಠಾನಕ್ಕೆ ಭೂಮಿ ಲಭ್ಯತೆ-ಸಾಮರ್ಥ್ಯ ಮತ್ತು ಗ್ರಿಡ್- ಸಂಪರ್ಕವನ್ನು ಸುಲಭಗೊಳಿಸುವ ಗುರಿ ಹೊಂದಿದೆ ಎಂದು ವಿವರಿಸಿದರು.

ಮರು ನವೀಕರಿಸಬಹುದಾದ ಇಂಧನ ಯೋಜನೆಗಳ ಸ್ಥಾಪನೆಗೆ ಸೂಕ್ತ ಸರ್ಕಾರಿ ಭೂಮಿಯನ್ನು ಗುರುತಿಸಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಮನವಿ ಮಾಡುತ್ತಿದೆ. ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ರಾಜ್ಯ ಸರ್ಕಾರಗಳೊಂದಿಗೆ ತೆಗೆದುಕೊಳ್ಳಲಾಗಿದೆ. ನವೀಕರಿಸಬಹುದಾದ ಇಂಧನ ವಿಸ್ತರಣೆಯಲ್ಲಿ ನಿಯಂತ್ರಕ ಸವಾಲುಗಳನ್ನು ಎದುರಿಸಲು ಈಗ ಕೇಂದ್ರ ಸರ್ಕಾರಮಧ್ಯಪ್ರವೇಶಿಸಿದೆ ಎಂದರು. ಸಭೆಯಲ್ಲಿ ಇಎಂಇಇ ನಿರ್ದೇಶಕರಾದ ಪ್ರವೀಣ್ ನಾಯಕ್, ಡಾ. ಆಚಾರ್ಯ, ಲೋಕೇಶ್ ಗೌಡ, ಇದ್ದರು.