ಹಾಸನಾಂಬೆಯ ಜಾತ್ರಾ ಮಹೋತ್ಸವದ ಖರ್ಚು ಆದಾಯದ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಉತ್ಸವದ ಖರ್ಚು-ವೆಚ್ಚದಲ್ಲಿ ಪಾರದರ್ಶಕತೆ ಕಾಪಾಡಲು ಜಿಲ್ಲಾಡಳಿತ ಮುಂದಾಗಿದೆ. ಹಾಸನಾಂಬೆ ಉತ್ಸವಕ್ಕಾಗಿ ಈ ಬಾರಿ ಒಟ್ಟು ಎಷ್ಟು ಹಣ ಖರ್ಚು ಮಾಡಲಾಗಿದೆ ಎಂಬುದನ್ನು ಮರೆಮಾಚದೆ, ಜಾತ್ರೆ ಮುಗಿದ ಕೂಡಲೇ ಸಂಪೂರ್ಣ ಲೆಕ್ಕಪತ್ರವನ್ನು ಪುಸ್ತಕ ರೂಪದಲ್ಲಿ ಮುದ್ರಿಸಿ ಸಾರ್ವಜನಿಕರಿಗೆ ಹಂಚಲಾಗುವುದು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಘೋಷಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಹಾಸನಾಂಬೆಯ ಜಾತ್ರಾ ಮಹೋತ್ಸವದ ಖರ್ಚು ಆದಾಯದ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಉತ್ಸವದ ಖರ್ಚು-ವೆಚ್ಚದಲ್ಲಿ ಪಾರದರ್ಶಕತೆ ಕಾಪಾಡಲು ಜಿಲ್ಲಾಡಳಿತ ಮುಂದಾಗಿದೆ. ಹಾಸನಾಂಬೆ ಉತ್ಸವಕ್ಕಾಗಿ ಈ ಬಾರಿ ಒಟ್ಟು ಎಷ್ಟು ಹಣ ಖರ್ಚು ಮಾಡಲಾಗಿದೆ ಎಂಬುದನ್ನು ಮರೆಮಾಚದೆ, ಜಾತ್ರೆ ಮುಗಿದ ಕೂಡಲೇ ಸಂಪೂರ್ಣ ಲೆಕ್ಕಪತ್ರವನ್ನು ಪುಸ್ತಕ ರೂಪದಲ್ಲಿ ಮುದ್ರಿಸಿ ಸಾರ್ವಜನಿಕರಿಗೆ ಹಂಚಲಾಗುವುದು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಘೋಷಿಸಿದ್ದಾರೆ.

ನಗರದ ಹಾಸನಾಂಬೆ ದೇವಾಲಯಕ್ಕೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಮಾತನಾಡಿದ ಅವರು, ಈಗಾಗಲೇ 13.54 ಕೋಟಿ ವೆಚ್ಚದ 48 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಕೆಲವು ಕಾಮಗಾರಿಗಳ ದರ ಹಾಗೂ ಟೆಂಡರ್ ಪ್ರಕ್ರಿಯೆ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ಷೇಪಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ವೆಚ್ಚವನ್ನು ಮರುಪರಿಶೀಲಿಸಿ ವೆಚ್ಚವನ್ನು ಕಡಿತಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಹಾಸನಾಂಬೆ ದೇವಾಲಯದ ಆವರಣದಲ್ಲಿ ಶಾಮಿಯಾನ, ಬ್ಯಾನರ್ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಸಚಿವರು, ಉತ್ಸವದ ಸಿದ್ಧತೆಗಳಲ್ಲಿ ಅನಗತ್ಯ ವೆಚ್ಚಕ್ಕೆ ಅವಕಾಶ ನೀಡಬಾರದು. ಸಾರ್ವಜನಿಕರ ಹಣವನ್ನು ಜವಾಬ್ದಾರಿಯಿಂದ ಬಳಸಬೇಕು ಎಂಬ ನಿಲುವು ವ್ಯಕ್ತಪಡಿಸಿದರು.

ಅನುಮೋದಿತ ಮೊತ್ತವೇ ಅಂತಿಮ ವೆಚ್ಚವಲ್ಲ:ಜಿಲ್ಲಾಡಳಿತ ಈಗಾಗಲೇ 48 ಕಾಮಗಾರಿಗಳಿಗೆ 13.54 ಕೋಟಿ ವೆಚ್ಚದ ಅನುಮೋದನೆ ನೀಡಿದೆ. ಆದರೆ ಈ ಮೊತ್ತವೇ ಅಂತಿಮವಾಗಿ ಖರ್ಚಾಗುವ ಹಣವಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಕಾಮಗಾರಿಗಳ ದರಗಳನ್ನು ಪರಿಶೀಲಿಸಿ ವೆಚ್ಚ ಕಡಿತಕ್ಕೆ ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.“ಹಾಸನಾಂಬೆ ಜಾತ್ರಾ ಮಹೋತ್ಸವದ ಇತಿಹಾಸದಲ್ಲಿಯೇ ಈ ಬಾರಿ ಉತ್ಸವವನ್ನು ಪಾರದರ್ಶಕವಾಗಿ ನಡೆಸಬೇಕು ಎಂಬ ಉದ್ದೇಶ ಹೊಂದಿದ್ದೇವೆ. ಅಂತಿಮವಾಗಿ ಎಷ್ಟು ಹಣ ವ್ಯಯವಾಗಿದೆ ಎಂಬುದನ್ನು ಪ್ರಕಟಿಸುತ್ತೇವೆ. ಸಾಧ್ಯವಾದಷ್ಟು ಖರ್ಚು ಕಡಿಮೆ ಮಾಡುವುದು ನಮ್ಮ ಉದ್ದೇಶ” ಎಂದು ಸಚಿವ ಶಿವಲಿಂಗೇಗೌಡ ಹೇಳಿದರು. ಉತ್ಸವದ ವ್ಯವಸ್ಥೆಗಳಿಗಾಗಿ ನಿಗದಿಪಡಿಸಿರುವ ಹಣದ ಬಳಕೆ ಕುರಿತು ಸಾರ್ವಜನಿಕರಿಗೆ ಮಾಹಿತಿ ದೊರೆಯಬೇಕು. ಕಾಮಗಾರಿಗಳ ವೆಚ್ಚದ ಬಗ್ಗೆ ಯಾವುದೇ ಅನುಮಾನಗಳಿಗೆ ಅವಕಾಶವಿರಬಾರದು. ಈ ಉದ್ದೇಶದಿಂದಲೇ ಎಲ್ಲರ ಸಮ್ಮುಖದಲ್ಲಿ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಮುಚ್ಚಿದ ಕೊಠಡಿ ಬದಲು ಬಹಿರಂಗ ಚರ್ಚೆಹಾಸನಾಂಬೆ ಉತ್ಸವದ ಕಾಮಗಾರಿಗಳ ವೆಚ್ಚದ ಕುರಿತು ಸಾರ್ವಜನಿಕರಿಂದ ಆಕ್ಷೇಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ನಾಲ್ಕು ಗೋಡೆಗಳ ನಡುವೆ ಸಭೆ ನಡೆಸುವುದಕ್ಕಿಂತ ದೇವಾಲಯದ ಆವರಣದಲ್ಲಿಯೇ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಚರ್ಚೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.ಉತ್ಸವದ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಯಾವ ಕಾಮಗಾರಿಗೆ ಎಷ್ಟು ವೆಚ್ಚವಾಗಲಿದೆ, ದರವನ್ನು ಕಡಿಮೆ ಮಾಡಲು ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಅಂತಿಮವಾಗಿ ಎಲ್ಲ ಕಾಮಗಾರಿಗಳ ಲೆಕ್ಕಪತ್ರಗಳನ್ನು ಸಿದ್ಧಪಡಿಸಿ ಪುಸ್ತಕ ರೂಪದಲ್ಲಿ ಮುದ್ರಿಸಿ ಸಾರ್ವಜನಿಕರಿಗೆ ಹಂಚಲಾಗುವುದು ಎಂದು ಭರವಸೆ ನೀಡಿದರು.ಈ ಕ್ರಮದಿಂದ ಉತ್ಸವದ ಖರ್ಚು-ವೆಚ್ಚದ ಬಗ್ಗೆ ಜನರಿಗೆ ಸ್ಪಷ್ಟ ಮಾಹಿತಿ ದೊರೆಯುವುದರ ಜೊತೆಗೆ ಆಡಳಿತದ ಮೇಲಿನ ವಿಶ್ವಾಸ ಹೆಚ್ಚಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.ಒಬ್ಬನೇ ವ್ಯಕ್ತಿಗೆ ಹಲವು ವರ್ಷಗಳಿಂದ ಟೆಂಡರ್‌ ಏಕೆ?ಸಭೆಯಲ್ಲಿ ಕೆಲವು ಸಂಘಟನೆಗಳ ಮುಖಂಡರು ಟೆಂಡರ್ ಪ್ರಕ್ರಿಯೆ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಈ ಹಿಂದೆ ಕಾಮಗಾರಿಗಳನ್ನು ನಿರ್ವಹಿಸಿದ್ದ ಗುತ್ತಿಗೆದಾರರಿಗೇ ಈ ಬಾರಿಯೂ ಗುತ್ತಿಗೆ ನೀಡಲಾಗಿದೆ. ಕೆಲವು ಕಾಮಗಾರಿಗಳನ್ನು ದುಬಾರಿ ದರದಲ್ಲಿ ವಹಿಸಲಾಗಿದೆ ಎಂಬ ಆರೋಪಗಳನ್ನು ಮುಂದಿಟ್ಟರು.ಉತ್ಸವದ ಹೆಸರಿನಲ್ಲಿ ನಡೆಯುವ ಕಾಮಗಾರಿಗಳ ವೆಚ್ಚವನ್ನು ಸಮಗ್ರವಾಗಿ ಪರಿಶೀಲಿಸಬೇಕು. ಸ್ಪರ್ಧಾತ್ಮಕ ದರಗಳಿಗೆ ಆದ್ಯತೆ ನೀಡಬೇಕು. ಸಾರ್ವಜನಿಕರ ಹಣದ ಬಳಕೆಯಲ್ಲಿ ಪಾರದರ್ಶಕತೆ ಇರಬೇಕು ಎಂದು ಮುಖಂಡರು ಆಗ್ರಹಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹಾಸನಾಂಬೆ ಉತ್ಸವ ಆರಂಭಕ್ಕೆ ಕೇವಲ 10 ದಿನಗಳು ಬಾಕಿ ಇರುವುದರಿಂದ ಈಗ ಹೊಸದಾಗಿ ಟೆಂಡರ್ ಕರೆಯುವುದು ಪ್ರಾಯೋಗಿಕವಾಗಿ ಕಷ್ಟಸಾಧ್ಯವಾಗಿದೆ ಎಂದರು.ಆದರೆ ಈಗಾಗಲೇ ನಡೆದಿರುವ ಟೆಂಡರ್ ಪ್ರಕ್ರಿಯೆಯನ್ನು ಹಾಗೆಯೇ ಮುಂದುವರಿಸಬೇಕೆಂದಿಲ್ಲ. ಕಾಮಗಾರಿಗಳ ದರಗಳನ್ನು ಮರುಪರಿಶೀಲಿಸಿ, ಕಡಿಮೆ ದರ ನಮೂದಿಸಿರುವ ಬಿಡ್‌ದಾರರಿಗೆ ಕಾಮಗಾರಿ ವಹಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು. ದರ ಸಂಧಾನದ ಮೂಲಕವೂ ವೆಚ್ಚ ಕಡಿತಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.ಶಾಮಿಯಾನ, ಮ್ಯಾಟ್, ಬ್ಯಾರಿಕೇಡ್ ವೆಚ್ಚದ ಮೇಲೆ ನಿಗಾಹಾಸನಾಂಬೆ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿರುವುದರಿಂದ ಸರತಿ ಸಾಲುಗಳ ನಿರ್ವಹಣೆ, ಶಾಮಿಯಾನ, ಮ್ಯಾಟ್ ಹಾಗೂ ಬ್ಯಾರಿಕೇಡ್ ಅಳವಡಿಕೆ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಈ ಕಾಮಗಾರಿಗಳ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ ಎಂದು ಸಚಿವರು ವಿವರಿಸಿದರು.ಕಾಮಗಾರಿಗಳನ್ನು ಕೈಗೊಳ್ಳುವಾಗ ಕಡಿಮೆ ದರದ ಬಿಡ್‌ಗಳಿಗೆ ಆದ್ಯತೆ ನೀಡುವುದರ ಜೊತೆಗೆ, ದರ ಸಂಧಾನದ ಮೂಲಕ ಮತ್ತಷ್ಟು ಉಳಿತಾಯ ಮಾಡಲು ಪ್ರಯತ್ನಿಸಲಾಗುತ್ತಿದೆ. ಭಕ್ತರಿಗೆ ಅಗತ್ಯ ಸೌಲಭ್ಯಗಳಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವುದರೊಂದಿಗೆ ಅನಗತ್ಯ ವೆಚ್ಚವನ್ನು ನಿಯಂತ್ರಿಸುವುದು ಮುಖ್ಯವಾಗಿದೆ ಎಂದು ಹೇಳಿದರು.ಉತ್ಸವದ ಸಿದ್ಧತೆಗಳಿಗೆ ಸಮಯ ಕಡಿಮೆ ಇರುವುದರಿಂದ ಲಭ್ಯವಿರುವ ಅವಕಾಶಗಳಲ್ಲಿಯೇ ವೆಚ್ಚ ಕಡಿತದ ಕ್ರಮಗಳನ್ನು ಕೈಗೊಳ್ಳಲಾಗುವುದು. ಕಾಮಗಾರಿಗಳ ಗುಣಮಟ್ಟ ಮತ್ತು ಭಕ್ತರಿಗೆ ಒದಗಿಸುವ ಸೌಲಭ್ಯಗಳ ವಿಚಾರದಲ್ಲಿಯೂ ಎಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದರು.ಅಂತಿಮ ಲೆಕ್ಕಪತ್ರವೇ ವೆಚ್ಚದ ಸ್ಪಷ್ಟ ಚಿತ್ರಣಉತ್ಸವಕ್ಕೆ ಸಂಬಂಧಿಸಿದಂತೆ ಅನುಮೋದನೆ ಪಡೆದ ಮೊತ್ತ, ಕಾಮಗಾರಿಗಳಿಗೆ ನಿಗದಿಪಡಿಸಿದ ದರ ಮತ್ತು ಅಂತಿಮವಾಗಿ ಪಾವತಿಯಾಗುವ ಹಣ ಇವೆಲ್ಲವೂ ಒಂದೇ ಆಗಿರಬೇಕೆಂದಿಲ್ಲ. ಆದ್ದರಿಂದ ಕಾಮಗಾರಿಗಳು ಪೂರ್ಣಗೊಂಡ ಬಳಿಕ ವಾಸ್ತವಿಕ ಖರ್ಚು-ವೆಚ್ಚದ ವಿವರಗಳನ್ನು ಸಿದ್ಧಪಡಿಸಿ ಸಾರ್ವಜನಿಕರಿಗೆ ನೀಡುವ ನಿರ್ಧಾರ ಮಹತ್ವ ಪಡೆದಿದೆ.ಈ ಬಾರಿ ಹಾಸನಾಂಬೆ ಉತ್ಸವದ ಖರ್ಚಿನ ವಿವರಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದಾಗಿ ಸಚಿವರು ನೀಡಿರುವ ಭರವಸೆಯಂತೆ ಕ್ರಮ ಕೈಗೊಂಡರೆ, ಯಾವ ಕಾಮಗಾರಿಗೆ ಎಷ್ಟು ಹಣ ವೆಚ್ಚವಾಗಿದೆ ಎಂಬುದನ್ನು ಸಾರ್ವಜನಿಕರು ಪರಿಶೀಲಿಸಲು ಅವಕಾಶ ದೊರೆಯಲಿದೆ.ಆದರೆ ಅನುಮೋದಿತ ₹13.54 ಕೋಟಿ ಮೊತ್ತದಲ್ಲಿ ಎಷ್ಟು ಉಳಿತಾಯವಾಗಲಿದೆ, ಯಾವ ಕಾಮಗಾರಿಗಳ ದರವನ್ನು ಕಡಿತಗೊಳಿಸಲಾಗುತ್ತದೆ ಮತ್ತು ಅಂತಿಮವಾಗಿ ಒಟ್ಟು ಎಷ್ಟು ಹಣ ವ್ಯಯವಾಗಲಿದೆ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.ಸಭೆಯಲ್ಲಿ ಸಂಸದ ಶ್ರೇಯಸ್ ಎಂ. ಪಟೇಲ್, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಂ ಶುಕ್ಲಾ, ಉಪವಿಭಾಗಾಧಿಕಾರಿ ಹಾಗೂ ದೇವಾಲಯದ ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

=========

ಫೋಟೋಹಾಸನದ ಅಧಿದೇವತೆ ಹಾಸನಾಂಬೆ ದೇವಾಲಯಕ್ಕೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ ಎಂ ಶಿವಲಿಂಗೇಗೌಡ ಭೇಟಿ ನೀಡಿದ್ದರು.