ಸ್ತನ ಕ್ಯಾನ್ಸರ್‌ ಕುರಿತು ಮಹಿಳೆಯರು ಅನಗತ್ಯ ಆತಂಕಕ್ಕೆ ಒಳಗಾಗಬಾರದು. ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಗುಣಮುಖರಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಸಂಡೂರು: ಪಟ್ಟಣದಲ್ಲಿ ಶುಕ್ರವಾರ ತಾಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪುರಸಭೆ, ಇಂಡಿಯನ್‌ ಕ್ಯಾನ್ಸರ್ ಸೊಸೈಟಿ, ಸಂಜೀವಿನಿ ಎನ್‌ಆರ್‌ಎಲ್‌ಎಂಯೋಜನೆ ಸಂಯುಕ್ತಾಶ್ರಯದಲ್ಲಿ ಸ್ತನ ಕ್ಯಾನ್ಸರ್‌ ಕುರಿತು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಸಾರ್ವಜನಿಕ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ. ಪವನ್‌ಕುಮಾರ್‌ ಮಾತನಾಡಿ, ಸ್ತನ ಕ್ಯಾನ್ಸರ್‌ ಕುರಿತು ಮಹಿಳೆಯರು ಅನಗತ್ಯ ಆತಂಕಕ್ಕೆ ಒಳಗಾಗಬಾರದು. ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಗುಣಮುಖರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮಹಿಳೆಯರು ತಮ್ಮ ಸ್ತನಗಳಲ್ಲಿನ ಸಾಮಾನ್ಯ ಬದಲಾವಣೆಗಳ ಬಗ್ಗೆ ಅರಿವು ಹೊಂದಿರಬೇಕು. ಸ್ತನದಲ್ಲಿ ಗಡ್ಡೆ, ಚರ್ಮದಲ್ಲಿ ಬದಲಾವಣೆ, ಮೊಲೆ ತೊಟ್ಟಿನಿಂದ ಅಸಹಜ ಸ್ರಾವ ಸೇರಿದಂತೆ ಯಾವುದೇ ಅನುಮಾನಾಸ್ಪದ ಲಕ್ಷಣಗಳು ಕಂಡು ಬಂದರೆ, ತಡಮಾಡದೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಪಂ ಸಹಾಯಕ ನಿರ್ದೇಶಕ ಮಹೇಶ್‌ಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ನಿರಂತರವಾಗಿ ಆರೋಗ್ಯ ಜಾಗೃತಿ ಮೂಡಿಸುತ್ತಿದ್ದರೂ ಮಹಿಳೆಯರು ಕೆಲಸದ ಒತ್ತಡ ಹಾಗೂ ನಿರ್ಲಕ್ಷದಿಂದ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿಲ್ಲ. ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ಇಂತಹ ಜಾಗೃತಿ ಜಾಥಾ ಹೆಚ್ಚು ಆಯೋಜಿಸುವ ಮೂಲಕ ಮಹಿಳೆಯರಲ್ಲಿ ಅರಿವು ಮೂಡಿಸಿ ಸಕಾಲದಲ್ಲಿ ತಪಾಸಣೆ ಮಾಡಿಸಿಕೊಳ್ಳಲು ಪ್ರೇರೇಪಿಸಬೇಕು ಎಂದು ತಿಳಿಸಿದರು.

ಪುರಸಭೆಯ ಪರಿಸರ ಸಂರಕ್ಷಣಾಧಿಕಾರಿ ಅನ್ನಪೂರ್ಣ ಮಾತನಾಡಿ, ಕುಟುಂಬದ ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮಹಿಳೆಯರು ತಮ್ಮಆರೋಗ್ಯಕ್ಕೂ ಸಮಾನ ಆದ್ಯತೆ ನೀಡಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮವನ್ನು ಎನ್‌ಆರ್‌ಎಲ್‌ಎಂ ತಾಲೂಕು ವ್ಯವಸ್ಥಾಪಕ ಸೋಮಶೇಖರ್ ನಿರ್ವಹಿಸಿದರು. ಇಂಡಿಯನ್‌ ಕ್ಯಾನ್ಸರ್ ಸೊಸೈಟಿಯ ಜಿಲ್ಲಾ ಸಂಯೋಜಕ ಪಂಪಾಪತಿ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಂಡೇಗೌಡ, ಆರೋಗ್ಯ ಇಲಾಖೆ, ತಾಪಂ, ಪುರಸಭೆಯ ಸಿಬ್ಬಂದಿ ಮತ್ತು ಇಂಡಿಯನ್‌ ಕ್ಯಾನ್ಸರ್ ಸೊಸೈಟಿಯ ಪ್ರತಿನಿಧಿ, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಸ್ವಸಹಾಯ ಗುಂಪುಗಳ ಸದಸ್ಯರು, ಸಂಜೀವಿನಿ ಒಕ್ಕೂಟಗಳ ಸಿಬ್ಭಂದಿ, ಮಹಿಳಾ ಪೌರ ಕಾರ್ಮಿಕರು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.