ಕ್ಯಾನ್ಸರ್ ಆರಂಭದಲ್ಲೇ ಗುರ್ತಿಸಿ ಚಿವುಟಿ ಹಾಕಿ

| Published : Feb 05 2024, 01:49 AM IST

ಸಾರಾಂಶ

ಪ್ರತಿ 10 ಮಂದಿ ಭಾರತೀಯರಲ್ಲಿ ಒಬ್ಬರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದು, ವಾರ್ಷಿಕವಾಗಿ 16 ಮಿಲಿಯನ್ ಮಂದಿ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ. ಹಾಗಾಗಿ ಈ ಮಾರಣಾಂತಿಕ ರೋಗದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಆರೋಗ್ಯದ ಮಹತ್ವ ಗೊತ್ತಾಗುವುದು ಒಮ್ಮೆ ಆರೋಗ್ಯವನ್ನು ಕಳೆದುಕೊಂಡಾಗ ಮಾತ್ರ ಅದರ ಬೆಲೆ ತಿಳಿಯುತ್ತದೆ, ಕ್ಯಾನ್ಸರ್ ಎನ್ನುವುದು ಮರಣಾಂತಿಕ ಕಾಯಿಲೆ. ಇದನ್ನು ಪ್ರಾರಂಭದಲ್ಲೇ ಗುರುತಿಸಿದರೆ ಚಿವುಟಿಹಾಕಬಹುದು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ತಿಳಿಸಿದರು.

ಭಾನುವಾರ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಮತ್ತು ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿ ರಾಷ್ಟ್ರೀಯ ಅಸಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಆರೋಗ್ಯ ರಕ್ಷಣೆಗೆ ಒತ್ತು ನೀಡಿ

ಪ್ರತಿಯೊಬ್ಬರು ಅವರವರ ವಯಸ್ಸಿಗೆ ಅನುಗುಣವಾಗಿ ಆಹಾರಭ್ಯಾಸಗಳು, ಯೋಗಗಳು, ವ್ಯಾಯಾಮ, ನಡಿಗೆ ಇವುಗಳನ್ನು ಪ್ರತಿನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯವಂತರಾಗಿ ಜೀವಿಸಲು ಸಾಧ್ಯ, ನಮ್ಮ ಆರೋಗ್ಯವನ್ನು,ಮನಸ್ಸನ್ನು, ಸಂತೋಷವಾಗಿ ಹೇಗೆ ಇಟ್ಟುಕೊಳ್ಳಬೇಕು ಎನ್ನುವುದು ಅವರ ಜೀವನ ಶೈಲಿಯ ಪುಸ್ತಕವನ್ನು ಓದುವುದರ ಮೂಲಕ ತಿಳಿಯುಬಹುದು ಎಂದರು. ಪ್ರತಿ 10 ಮಂದಿ ಭಾರತೀಯರಲ್ಲಿ ಒಬ್ಬರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದು, ವಾರ್ಷಿಕವಾಗಿ 16 ಮಿಲಿಯನ್ ಮಂದಿ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ. ಜಾಗತಿಕವಾಗಿ ಪ್ರತಿ ವರ್ಷ 6 ಜನರಲ್ಲಿ ಒಬ್ಬರು ಕ್ಯಾನ್ಸರ್ ನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಈ ಮಾರಣಾಂತಿಕ ರೋಗದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನ ಆಚರಣೆ ಮುಖ್ಯ ಉದ್ದೇಶವಾಗಿದೆ ಎಂದರು.ಮುಖ್ಯ ರಸ್ತೆಗಳಲ್ಲಿ ಸಂಚರಿಸಿದ ಜಾಥಾ

ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಕೈ ಜೋಡಿಸಿ” ಘೋಷವಾಕ್ಯದಡಿಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಲಾಯಿತು. ನಡಿಗೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಜೊತೆಗೆ ಆರೋಗ್ಯ ಮತ್ತು ಕುಟುಂಭ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ಮಂಜುಳಾದೇವಿ, ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ಪಿ.ವಿ.ರಮೇಶ್,ಜಿಲ್ಲಾ ಸಾಂಖಿಕ ಅಧಿಕಾರಿ ಡಾ.ಕೃಷ್ಣಾನಂದ್, ಮೂಳೆ ತಜ್ಞ ಡಾ.ಕೆ.ಆರ್. ಅನಂತ್, ಜಿಲ್ಲಾಸ್ಪತ್ರೆಯ ವೈದ್ಯರು. ನರ್ಸಿಂಗ್, ಪ್ಯಾರಾಮೆಡಿಕಲ್ ವಿಧ್ಯಾರ್ಥಿಗಳು, ಇಲಾಖೆಯ ಅಧಿಕಾರಿಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹೆಜ್ಜೆ ಹಾಕಿದರು. ಮುಂಜಾನೆಯೇ ನೂರಾರು ಜನರು ಕ್ಯಾನ್ಸರ್ ಜಾಗೃತಿ ನಡಿಗೆಯಲ್ಲಿ ಪಾಲ್ಗೊಂಡು, ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಒಂದಾಗೋಣ ಎಂಬ ಘೋಷವಾಖ್ಯಗಳನ್ನ ಮೊಳಗಿಸಿದರು.