ಅನರ್ಹ ಬಿಪಿಎಲ್‌ ಕಾರ್ಡ್‌ ಪತ್ತೆ ಕಟ್ಟುನಿಟ್ಟು: ಸಚಿವ ಮುನಿಯಪ್ಪ

| Published : Sep 27 2025, 12:02 AM IST

ಅನರ್ಹ ಬಿಪಿಎಲ್‌ ಕಾರ್ಡ್‌ ಪತ್ತೆ ಕಟ್ಟುನಿಟ್ಟು: ಸಚಿವ ಮುನಿಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಪಡಿತರದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಆಹಾರ, ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಉಡುಪಿ: ಜಿಲ್ಲೆಯಲ್ಲಿರುವ ಅನರ್ಹ ಬಿಪಿಎಲ್ ಕಾರ್ಡುಗಳನ್ನು ಕಟ್ಟುನಿಟ್ಟಾಗಿ ಪತ್ತೆ ಮಾಡಬೇಕು ಮತ್ತು ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಪಡಿತರದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಆಹಾರ, ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅವರು ಶುಕ್ರವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೇಂದ್ರ ಸರ್ಕಾರದ ಸಮೀಕ್ಷೆಯನ್ವಯ ರಾಜ್ಯದಲ್ಲಿ ಸುಮಾರು 7 ಲಕ್ಷಕ್ಕೂ ಅಧಿಕ ಅನರ್ಹ ಬಿಪಿಎಲ್ ಕಾರ್ಡುಗಳಿವೆ. ರಾಜ್ಯ ಸರ್ಕಾರವು ಇಂತಹ ಅನುಮಾಸ್ಪದ ಪಡಿತರ ಚೀಟಿಗಳನ್ನು ಪರಿಶೀಲನೆ ಮಾಡುತ್ತಿದೆ. ಅನರ್ಹ ಪಡಿತರ ಕಾರ್ಡುಗಳನ್ನು ಶೀಘ್ರದಲ್ಲಿ ರದ್ದುಗೊಳಿಸಿ, ಎಪಿಎಲ್ ಮಾಡಲಾಗುವುದು, ಒಂದು ವೇಳೆ ಅರ್ಹ ಬಿಪಿಎಲ್ ಕಾರ್ಡುಗಳು ಎಪಿಎಲ್ ಎಂದಾಗಿದ್ದಲ್ಲಿ, ಪೂರಕ ದಾಖಲೆಗಳನ್ನು ತಹಸೀಲ್ದಾರ್‌ರಿಗೆ ಸಲ್ಲಿಸಿದ್ದಲ್ಲಿ ಸರಿಪಡಿಸಲಾಗುವುದು ಎಂದರು.ಜಿಲ್ಲೆಯಲ್ಲಿ ಪಡಿತರ ಚೀಟಿ ಅಕ್ಕಿಯನ್ನು ಅಕ್ರಮ ದಾಸ್ತಾನು ಅಥವಾ ಮಾರಾಟ ಮಾಡುತ್ತಿದ್ದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ 295 ನ್ಯಾಯಬೆಲೆ ಅಂಗಡಿಗಳಿದ್ದು, 1,95,058 ಅಂತ್ಯೋದಯ - ಆದ್ಯತಾ ಪಡಿತರ ಕಾರ್ಡುಗಳುಸೇರಿ ಒಟ್ಟು 8,31,846 ಫಲಾನುಭವಿಗಳಿದ್ದಾರೆ. ಪಡಿತರ ವಿತರಣೆಯಲ್ಲಿ ರಾಜ್ಯದಲ್ಲಿಯೇ ಉಡುಪಿ ಜಿಲ್ಲೆಯು 3ನೇ ಸ್ಥಾನದಲ್ಲಿದೆ. ಸೆಪ್ಟಂಬರ್ ತಿಂಗಳಿನಲ್ಲಿ 40375.45 ಕ್ವಿಂಟಾಲ್ ಅಕ್ಕಿ ವಿತರಣೆ ಮಾಡುವುದರೊಂದಿಗೆ ಶೇ. 78.42 ಪ್ರಗತಿ ಸಾಧಿಸಲಾಗಿರುತ್ತದೆ, ಇ-ಕೆ.ವೈ.ಸಿ ಕಾರ್ಯ ಶೇ. 99.30 ಪೂರ್ಣಗೊಂಡಿದೆ ಎಂದವರು ಶ್ಲಾಘಿಸಿದರು.

ಜಿಲ್ಲೆಯಲ್ಲಿ ಸೆಪ್ಟಂಬರ್‌ನಲ್ಲಿ 2950 ಅನರ್ಹ ಪಡಿತರ ಚೀಟಿಗಳು ಪತ್ತೆಯಾಗಿದ್ದು, ಅದರಲ್ಲಿ 2739ನ್ನು ಆದ್ಯತೇತರ ಪಡಿತರ ಚೀಟಿಗಳಾಗಿ ಪರಿವರ್ತಿಸಲಾಗಿವೆ. ಆದ್ಯತಾ ಪಡಿತರ ಚೀಟಿಗೆ 13,947 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 13,412 ಅರ್ಜಿಗಳನ್ನು ವಿಲೇವಾರಿಯಾಗಿವೆ. ಆದ್ಯತೇತರ 12,332 ಅರ್ಜಿಗಳು ಸಲ್ಲಿಕೆಯಾಗಿ 10,294 ಅರ್ಜಿಗಳು ವಿಲೇವಾರಿಯಾಗಿವೆ. ಬಾಕಿ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ ಎಂದರು.

ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆಯಡಿ 9 ಪ್ರಕರಣಗಳು ದಾಖಲಾಗಿ 200.95 ಕ್ವಿಂಟಾಲ್ ಅಕ್ಕಿ ಹಾಗೂ 3 ವಾಹನಗಳನ್ನು ವಶಪಡಿಸಿಕೊಂದು 2 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ರಶ್ಮಿ, ದ.ಕ ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು, ಕಾನೂನು ಮಾಪನ ಇಲಾಖೆಯ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಆಹಾರ ನಿರೀಕ್ಷಕರು, ಮತ್ತಿತರರು ಇದ್ದರು.