ನಕಲಿ ಬ್ರಾಂಡ್‌ ವಸ್ತುಗಳ ತಯಾರಿಕಾ ಜಾಲ ಪತ್ತೆ

| Published : Mar 24 2024, 01:37 AM IST

ಸಾರಾಂಶ

ಬ್ರಾಂಡೆಡ್ ಪದಾರ್ಥಗಳಿಗೆ ಅಗ್ಗದ ನಕಲಿ ರಾಸಾಯನಿಕಗಳನ್ನು ಕಲಬೆರಕೆ ಮಾಡಿ ಸುಲಭವಾಗಿ ಹಣ ಮಾಡುವ ದೊಡ್ಡ ಜಾಲವೊಂದನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಹಾಗೂ ಐಪಿ ಇನ್ವೆಸ್ಟಿಗೇಷನ್ ಡಿಟೆಕ್ಟಿವ್ ಸರ್ವಿಸ್ ಜಂಟಿ ಕಾರ್ಯಚರಣೆ ನಡೆಸಿ ಪತ್ತೆ ಹಚ್ಚಿದ್ದಾರೆ.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಬ್ರಾಂಡೆಡ್ ಪದಾರ್ಥಗಳಿಗೆ ಅಗ್ಗದ ನಕಲಿ ರಾಸಾಯನಿಕಗಳನ್ನು ಕಲಬೆರಕೆ ಮಾಡಿ ಸುಲಭವಾಗಿ ಹಣ ಮಾಡುವ ದೊಡ್ಡ ಜಾಲವೊಂದನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಹಾಗೂ ಐಪಿ ಇನ್ವೆಸ್ಟಿಗೇಷನ್ ಡಿಟೆಕ್ಟಿವ್ ಸರ್ವಿಸ್ ಜಂಟಿ ಕಾರ್ಯಚರಣೆ ನಡೆಸಿ ಪತ್ತೆ ಹಚ್ಚಿದ್ದಾರೆ.

ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿ ಗ್ರಾಮದ ಗೋದಾಮಿನಲ್ಲಿ ಬ್ರಾಂಡೆಡ್ ಡಿಟರ್ಜೆಂಟ್ ವಸ್ತುಗಳನ್ನು ನಕಲು ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಮಹೇಶ್ ಗಾಂಧಿ, ಅಶ್ವಿನ್, ನಿರ್ಮಲ್ ಮೂವರನ್ನು ಬಂಧಿಸಿದ್ದಾರೆ.

ಹೊಸಕೋಟೆ ಬಳಿಯ ಆವಲಹಳ್ಳಿಯ ತಯಾರಿಕ ಘಟಕದಿಂದ ಲೋಡ್‌ಗಟ್ಟಲೇ ನಕಲಿ ಡಿಟರ್ಜೆಂಟ್ ಕೆಮಿಕಲ್ ಖರೀದಿ ಮಾಡಿ ಬ್ರಾಂಡೆಡ್ ಬಾಕ್ಸ್ ನಲ್ಲಿ ಪ್ಯಾಕ್ ಮಾಡುತ್ತಿದ್ದರು ಎನ್ನಲಾಗಿದೆ. ನಕಲಿ ಪ್ರಿಂಟ್ ಮಾಡಿದ ಬ್ರಾಂಡೆಡ್ ಲೇಬಲ್ ಬಳಸಿ ಡಿಟರ್ಜೆಂಟ್ ಬಾಟಲ್‌ಗಳಲ್ಲಿ ತುಂಬಿ ನಕಲಿ ಬ್ರಾಂಡ್‌ಗಳನ್ನು ಅಸಲಿ ಬ್ರಾಂಡ್ ಆಗಿ ಕನ್ವರ್ಟ್ ಮಾಡಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಮಾರಾಟ ಮಾಡಿ ಕೋಟ್ಯಂತರ ಹಣ ಗಳಿಸುತ್ತಿದ್ದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ.

ಇನ್ನು ದಾಳಿಯಲ್ಲಿ 20 ಲಕ್ಷ ರುಪಾಯಿ ಬೆಲೆ ಬಾಳುವ ಡಿಟರ್ಜೆಂಟ್‌ಗಳಾದ ಹಾರ್ಪಿಕ್, ಲೈಸೋಲ್, ಕೂಲೀನ್, ಮಿಕ್ಸಿಂಗ್ ಮಷಿನ್‌ಗಳು, ನೂರಾರು ಬಾಕ್ಸ್, ಲೇಬಲ್, ಖಾಲಿ ಬಾಟಲ್, ಗುಡ್ ನೈಟ್ ಕಾಯಿಲ್‌ಗಳನ್ನು ಸೀಜ್ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.