ಕೆರೆ ಸಮೀಕ್ಷೆಯಿಂದ ಒತ್ತುವರಿ ಜಾಗ ತರೆವುಗೊಳಿಸಿ

| Published : Jun 26 2024, 12:41 AM IST

ಸಾರಾಂಶ

ಹೊಳಲ್ಕೆರೆ ತಾಲೂಕು ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಎಂ.ಚಂದ್ರಪ್ಪ ಮಾತನಾಡಿದರು.

ಕೆಡಿಪಿ ಸಭೆಯಲ್ಲಿ ಶಾಸಕ ಎಂ. ಚಂದ್ರಪ್ಪ ತಹಸೀಲ್ದಾರ್‌ಗೆ ಸೂಚನೆಕನ್ನಡಪ್ರಭ ವಾರ್ತೆ ಹೊಳಲ್ಕೆರೆ:

ತಹಸೀಲ್ದಾರ್‌ ಸೇರಿದಂತೆ ಸಣ್ಣ ನೀರಾವರಿ, ಜಿಪಂ ಎಂಜಿನಿಯರ್‌ ಒಳಗೊಂಡ ಸಮಿತಿ ರಚಿಸಿ ತಾಲೂಕಿನ ಕೆರೆಗಳ ಸಮೀಕ್ಷೆ ನಡೆಸಿ ಒತ್ತುವರಿ ಜಾಗ ತೆರವುಗೊಳಿಸಬೇಕೆಂದು ಶಾಸಕ ಎಂ.ಚಂದ್ರಪ್ಪ ತಹಸೀಲ್ದಾರ್‌ ಬೀಬಿ ಫಾತಿಮಾ ಅವರಿಗೆ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ 79 ಕೆರೆಗಳಿದ್ದು, ಹಲವೆಡೆ ಒತ್ತುವರಿ ಕಾರ್ಯ ನಡೆದಿದೆ. ಕೆರೆಗಳು ಉಳಿದರೆ ಮಾತ್ರ ರೈತರು ಉಳಿಯಲು ಸಾಧ್ಯ. ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ತಾಲೂಕಿನಲ್ಲಿ 300ಕ್ಕೂ ಹೆಚ್ಚು ಚೆಕ್ ಡ್ಯಾಂ, ಬ್ಯಾರೇಜ್, ಹೊಸ ಕೆರೆಗಳ ನಿರ್ಮಿಸಲಾದ ಪರಿಣಾಮ ಅಡಿಕೆ ತೋಟಗಳು ಉಳಿದಿವೆ ಎಂದರು.

ಕೆಲವು ಶಿಕ್ಷಕರು ಶಾಲೆಗೆ ಬಂದು ಸಹಿ ಹಾಕಿದ ನಂತರ ತೋಟಕ್ಕೆ ಹೋಗುತ್ತಾರೆ. ಇನ್ನು ಕೆಲವರು ಶಾಲೆಗೆ ಹೋಗದೆ ಪಟ್ಟಣದಲ್ಲಿ ತಿರುಗುತ್ತಾರೆ ಎಂಬ ದೂರುಗಳು ಬಂದಿವೆ. ಸಂಜೆ 3 ಗಂಟೆಯ ನಂತರ ದೂರದ ಗ್ರಾಮಗಳ ಶಾಲೆಗೆ ಭೇಟಿ ನೀಡಿ ಪರಿಶೀಲಸಿ ವರದಿ ಕೊಡಿ ಎಂದು ಶಾಸಕರು ಬಿಇಒ ಎಚ್.ಶ್ರೀನಿವಾಸ್ ಅವರಿಗೆ ಸೂಚಿಸಿದರು.

ನಾಮ ನಿರ್ದೇಶನ ಸದಸ್ಯ ಬಿ.ಗಂಗಾಧರ್ ಮಾತನಾಡಿ, ರಾಮಗಿರಿ ಹೋಬಳಿಯ ಕೆಲವು ಕೆರೆಗಳಲ್ಲಿ ಹೆಚ್ಚು ಒತ್ತುವರಿ ನಡೆದಿದೆ. ಕೆಲವರು ಕೆರೆಯಲ್ಲಿ ಕೊಳವೆ ಬಾವಿ ಕೊರೆಯಿಸಿ ತೋಟಕ್ಕೆ ನೀರು ಹಾಯಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಕೆಲವು ಕಡೆ ಪರಿಶಿಷ್ಟರನ್ನು ಗ್ರಾಮದ ಹೊರಗಿಟ್ಟು ಪಡಿತರ ವಿತರಿಸಲಾಗುತ್ತಿದೆ ಎಂದು ಮತ್ತೊಬ್ಬ ನಾಮ ನಿರ್ದೇಶನ ಸದಸ್ಯ ಪಾಡಿಗಟ್ಟೆ ಸುರೇಶ್ ದೂರಿದರು. ಇದಕ್ಕೆ ದನಿಗೂಡಿಸಿದ ಮತ್ತೊಬ್ಬ ಸದಸ್ಯ ಪುಟ್ಟಸ್ವಾಮಿ ಉಚಿತ ಪಡಿತರ ನೀಡಬೇಕಿದ್ದರೂ, ನ್ಯಾಯಬೆಲೆ ಅಂಗಡಿ ಮಾಲೀಕರು ಗ್ರಾಹಕರಿಂದ 20, 30 ರು. ಹಣ ಪಡೆಯುತ್ತಿದ್ದಾರೆ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಬೀಬಿ ಫಾತಿಮಾ ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶಿವಪ್ರಕಾಶ್, ನಾಮ ನಿರ್ದೇಶನ ಸದಸ್ಯೆ ಬಿಂದು ಶಿವಕುಮಾರ್, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಜೆಜೆಎಂ ಕಾಮಗಾರಿ ಕಳಪೆ ಆರೋಪ:

ತಾಲೂಕಿನಲ್ಲಿ ನಡೆಸಿರುವ ಜಲ ಜೀವನ್ ಮಿಷನ್ ಕಾಮಗಾರಿ ಕಳಪೆಯಾಗಿದೆ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಗ್ರಾಮಗಳಲ್ಲಿ ಪೈಪ್ ಲೈನ್ ನಿರ್ಮಿಸಲು ಹೊಸ ಕಾಂಕ್ರೀಟ್ ರಸ್ತೆ ಕಿತ್ತು ಹಾಕಿದ್ದಾರೆ. ಪೈಪ್‌ಲೈನ್ ಕಾಮಗಾರಿ ಮುಗಿದ ನಂತರ ಗುಂಡಿ ಮುಚ್ಚದೆ ಇರುವುದರಿಂದ ಸಾರ್ವಜನಿಕರಿಗೆ ಮನೆ ಮುಂದೆ ಓಡಾಡಲು ತೊಂದರೆ ಆಗಿದೆ. ಹಾಕಿರುವ ನಲ್ಲಿಗಳು ಮುಟ್ಟಿದರೆ ಸಾಕು ಕೆಳಗೆ ಬೀಳುತ್ತವೆ. ಕಾಮಗಾರಿ ಮುಗಿದು ಹಲವು ದಿನಗಳು ಕಳೆದರು ನೀರು ಬಂದಿಲ್ಲ, ಆದರೆ ಕಾಮಗಾರಿ ಮುಗಿದಿದೆ ಎಂದು ಹಣ ಪಡೆದಿದ್ದಾರೆ ಎಂದು ಸದಸ್ಯರು ದೂರಿದರು. ಇದಕ್ಕೆ ಉತ್ತರಿಸಿದ ಸಚಿವರು ಕಾಮಗಾರಿ ನಡೆಸದೇ ಬಿಲ್ ಪಾವತಿ ಮಾಡಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಎಂಜಿನಿಯರ್‌ಗೆ ಎಚ್ಚರಿಸಿದರು.