ರಾಮನಗರವನ್ನು ಮಾದರಿ ಜಿಲ್ಲೆಯನ್ನಾಗಿ ರೂಪಿಸಲು ಸಂಕಲ್ಪ: ಡಿಸಿಎಂ ಡಿಕೆಶಿ

| Published : Feb 13 2024, 12:47 AM IST

ರಾಮನಗರವನ್ನು ಮಾದರಿ ಜಿಲ್ಲೆಯನ್ನಾಗಿ ರೂಪಿಸಲು ಸಂಕಲ್ಪ: ಡಿಸಿಎಂ ಡಿಕೆಶಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರವನ್ನು ಮಾದರಿ ಜಿಲ್ಲೆಯನ್ನಾಗಿ ಪರಿವರ್ತಿಸಲು ಸಂಸದ ಡಿ.ಕೆ.ಸುರೇಶ್ ಸಂಕಲ್ಪ ಮಾಡಿದ್ದಾರೆ. ಅದಕ್ಕೆ ನಾನು ಸೇರಿ ಶಾಸಕ ಇಕ್ಬಾಲ್ ಹುಸೇನ್ , ಬಾಲಕೃಷ್ಣ, ರವಿ ಕೈಜೋಡಿಸಿದ್ದೇವೆ.

ಕನ್ನಡಪ್ರಭ ವಾರ್ತೆ ರಾಮನಗರರಾಮನಗರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಮಾದರಿ ಜಿಲ್ಲೆಯನ್ನಾಗಿ ರೂಪಿಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಶೀಘ್ರದಲ್ಲಿಯೇ ಯಾವ ಇಲಾಖೆಗಳಲ್ಲಿ ಯಾವ ಯೋಜನೆಗಳನ್ನು ಸಿದ್ಧಪಡಿಸಿದ್ದೇವೆ ಎಂಬುದನ್ನು ಜನರ ಮುಂದಿಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಅಶ್ವಮೇಧ ಕ್ಲಾಸಿಕ್ ಬಸ್ಸುಗಳ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಮನಗರವನ್ನು ಮಾದರಿ ಜಿಲ್ಲೆಯನ್ನಾಗಿ ಪರಿವರ್ತಿಸಲು ಸಂಸದ ಡಿ.ಕೆ.ಸುರೇಶ್ ಸಂಕಲ್ಪ ಮಾಡಿದ್ದಾರೆ. ಅದಕ್ಕೆ ನಾನು ಸೇರಿ ಶಾಸಕ ಇಕ್ಬಾಲ್ ಹುಸೇನ್ , ಬಾಲಕೃಷ್ಣ, ರವಿ ಕೈಜೋಡಿಸಿದ್ದೇವೆ ಎಂದರು.ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಸುರೇಶ್ ರವರು ರೂಪಿಸಿರುವ ಎಲ್ಲಾ ಯೋಜನೆಗಳಿಗೆ ಒಪ್ಪಿಗೆ ನೀಡಿ ಅನುಷ್ಠಾನಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಾಮಲಿಂಗಾರೆಡ್ಡಿಯವರು ಜಿಲ್ಲೆಯಲ್ಲಿ ಸಾಕ್ಷಿ ಬಿಟ್ಟು ಹೋಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.ದೇಶದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಾದರಿಯಾಗಿದೆ. ರಾಮಲಿಂಗಾರೆಡ್ಡಿಯವರು ಸಾರಿಗೆ ಸಚಿವರಾಗಿ ಕ್ರಾಂತಿಕಾರಿ ಬದಲಾವಣೆ ತರುತ್ತಿದ್ದಾರೆ. ಒಳ್ಳೆಯ ಅಧಿಕಾರಿಗಳ ತಂಡವಿದ್ದು, ಒಳ್ಳೆಯ ರೀತಿಯಲ್ಲಿ ಸಂಸ್ಥೆ ಮುನ್ನಡೆಯುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಶ್ಲಾಘಿಸಿದರು.ರಾಜ್ಯಕ್ಕೆ 1 ಸಾವಿರ ಹೊಸ ಬಸ್ ಗಳನ್ನು ಖರೀದಿಸಲಾಗುತ್ತಿದ್ದು, ಅದರಲ್ಲಿ ರಾಮನಗರ ಜಿಲ್ಲೆಯ 5 ತಾಲೂಕುಗಳಿಗೆ 100 ಹೊಸ ಸಾರಿಗೆ ಬಸ್‌ ಗಳನ್ನು ಮಂಜೂರಾತಿ ಮಾಡಿದ್ದೇವೆ. ಅದರಲ್ಲಿ 25 ಬಸ್ ಗಳನ್ನು ನೀಡಿದ್ದು, ಉಳಿದ ಬಸ್‌ ಗಳನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಒದಗಿಸಲಾಗುವುದು ಎಂದು ತಿಳಿಸಿದರು.ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೆ ಬಂದ ಮೇಲೆ ಧಾರ್ಮಿಕ ಕೇಂದ್ರಗಳ ಆದಾಯ ಮಾತ್ರವಲ್ಲದೆ ವ್ಯಾಪಾರ ವಹಿವಾಟವೂ ವೃದ್ಧಿ ಕಂಡಿದೆ. ಧರ್ಮಸ್ಥಳದಲ್ಲಿ ಹುಂಡಿ ಹಣ ಹೆಚ್ಚಾಗಿದೆಯೆಂದು ವೀರೇಂದ್ರ ಹೆಗ್ಗಡೆಯವರು ಹೇಳುತ್ತಿದ್ದರು. ಆ ರೀತಿ ರಾಜ್ಯದ ಎಲ್ಲ ಧಾರ್ಮಿಕ ಕೇಂದ್ರಗಳ ಹುಂಡಿಗಳೂ ಭಕ್ತರ ಕಾಣಿಕೆಯಿಂದ ತುಂಬುತ್ತಿವೆ ಎಂದರು.ತಮಿಳುನಾಡಿನಲ್ಲಿ ಶಕ್ತಿ ಯೋಜನೆಯನ್ನು ಕಾರ್ಪೋರೇಷನ್ ಲಿಮಿಟ್ ನಲ್ಲಿ ಜಾರಿ ತಂದಿದ್ದರು. ನಾವು ಚುನಾವಣಾ ಪೂರ್ವದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರವಾಸ ಕಲ್ಪಿಸುವ ಭರವಸೆ ನೀಡಿದ್ದೇವು. ಈಗ ನಮಗೂ ಒಳ್ಳೆಯದಾಗಲೆಂದು ಜನರು ದೇವಸ್ಥಾನಗಳಲ್ಲಿ ಸಿದ್ದರಾಮಯ್ಯ ಮತ್ತು ನನ್ನ ಹೆಸರಿನಲ್ಲಿಯೂ ಪೂಜೆ ಮಾಡಿ ಪ್ರಾರ್ಥಿಸುತ್ತಿದ್ದಾರಂತೆ ಎಂದು ಹೇಳಿದರು.ದೇಶದಲ್ಲಿ ಈವರೆಗೆ ಯಾವ ಸರ್ಕಾರವೂ ಐದಾರು ತಿಂಗಳಲ್ಲಿ ಚುನಾವಣಾ ಪೂರ್ವದಲ್ಲಿ ಘೋಷಿಸಿದ ಯೋಜನೆಗಳನ್ನು ಜಾರಿಗೊಳಿಸಿರುವ ಉದಾಹರಣೆಗಳಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿಗೆ ತರುವುದರ ಮೂಲಕ ನುಡಿದಂತೆ ನಡೆದು ತೋರಿಸಿದೆ ಎಂದು ತಿಳಿಸಿದರು.ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಂಸದ ಡಿ.ಕೆ.ಸುರೇಶ್ , ಸಾರಿಗೆ ನಿಗಮದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಶಾಸಕರಾದ ಇಕ್ಬಾಲ್ ಹುಸೇನ್ , ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧ್ಯಕ್ಷ ಆನೇಕಲ್ ಶಿವಣ್ಣ, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ಜಾಗೃತ ದಳದ ನಂದಿನಿ , ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಉಪಸ್ಥಿತರಿದ್ದರು.ಡಿಕೆಶಿಯಿಂದ ಮತ್ತೊಮ್ಮೆ ಜಿಲ್ಲೆ ಮರು ನಾಮಕರಣದ ಪ್ರಸ್ತಾಪ

ರಾಮನಗರದ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡುವ ವಿಚಾರವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಪ್ರಸ್ತಾಪಿಸಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಅಶ್ವಮೇಧ ಕ್ಲಾಸಿಕ್ ಬಸ್ಸುಗಳ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾವು ನೀವೆಲ್ಲ ಬೆಂಗಳೂರು ಜಿಲ್ಲೆಯವರು. ಚುನಾವಣೆ ನಂತರ ಚರ್ಚೆ ಮಾಡಿ ರೂಪುರೇಷೆ ನೀಡುತ್ತೇನೆ. ನನ್ನ ಮೇಲೆ ವಿಶ್ವಾಸ ಇಡಿ ಎಂದರು. ನಾವೆಲ್ಲರೂ ಬೆಂಗಳೂರಿನ ಒಂದು ಭಾಗ. ನಮ್ಮ ಸ್ವಾಭಿಮಾನ, ನಮ್ಮ ಬದುಕು ಮುಖ್ಯ. ಬೆಂಗಳೂರು ಜಿಲ್ಲೆಯಿದ್ದಾಗ ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ಕಟ್ಟಿ ಸಾಕ್ಷಿ ಗುಡ್ಡೆ ಬಿಟ್ಟು ಹೋದರು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಶ್ರೀ ಶಿವಕುಮಾರ ಸ್ವಾಮೀಜಿ ಇಲ್ಲಿಯವರೇ. ಬಿಡದಿ ಪ್ಲಾನಿಂಗ್ ಅಥಾರಿಟಿಯನ್ನು ಗ್ರೇಟರ್ ಬೆಂಗಳೂರು ಎಂಬುದಾಗಿ ನಾಮಕರಣ ಮಾಡಿ ನಕ್ಷೆ ತಯಾರಿಸಲಾಗುತ್ತಿದೆ. ಬಿಡದಿ - ಆನೇಕಲ್ ವರೆಗೆ ಮೆಟ್ರೋ ವಿಸ್ತರಿಸಲು ಸರ್ವೇ ಕಾರ್ಯ ನಡೆಸಿ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ದೂರದೃಷ್ಟಿ ಇಟ್ಟುಕೊಂಡು ಈ ಎಲ್ಲಾ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಶಿವಕುಮಾರ್ ಹೇಳಿದರು.