ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲು ತೀರ್ಮಾನ

| Published : Mar 21 2024, 01:03 AM IST

ಸಾರಾಂಶ

ಟಿಕೆಟ್ ತಪ್ಪಿರುವುದಕ್ಕೆ ಸಂಸದ ಸಂಗಣ್ಣ ಕರಡಿ ಬೆಂಬಲಿಗರ ಸಭೆ ಕರೆದಿರುವ ಬೆನ್ನಲ್ಲೇ ತುರ್ತಾಗಿ ಕುಷ್ಟಗಿಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಕೋರ್ ಕಮಿಟಿಯ ಸಭೆ ನಡೆಯಿತು.

ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರಕನ್ನಡಪ್ರಭ ವಾರ್ತೆ ಕೊಪ್ಪಳ

ಟಿಕೆಟ್ ತಪ್ಪಿರುವುದಕ್ಕೆ ಸಂಸದ ಸಂಗಣ್ಣ ಕರಡಿ ಬೆಂಬಲಿಗರ ಸಭೆ ಕರೆದಿರುವ ಬೆನ್ನಲ್ಲೇ ತುರ್ತಾಗಿ ಕುಷ್ಟಗಿಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಕೋರ್ ಕಮಿಟಿಯ ಸಭೆ ನಡೆಯಿತು. ಅಷ್ಟೇ ಅಲ್ಲ, ಹೈಕಮಾಂಡ್ ಘೋಷಣೆ ಮಾಡಿರುವ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟೂರ್ ಗೆಲುವಿಗೆ ಶ್ರಮಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಪಕ್ಷ ಅಭ್ಯರ್ಥಿಯನ್ನು ಈಗಾಗಲೇ ಘೋಷಣೆ ಮಾಡಿದೆ. ಹೀಗಾಗಿ, ವಿವಾದಕ್ಕೆ ಅವಕಾಶ ನೀಡದೆ, ಗೆಲುವಿಗಾಗಿ ಪ್ರತಿಯೊಬ್ಬರು ಶ್ರಮಿಸಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇದಕ್ಕಿಂತ ಮಿಗಿಲಾಗಿ ಸಂಗಣ್ಣರ ಮನವೊಲಿಸುವ ಪ್ರಯತ್ನವನ್ನು ಸಹ ಮಾಡುವ ಕುರಿತು ಚರ್ಚೆಯಾಯಿತಾದರೂ ಅದನ್ನು ಗಂಭೀರವಾಗಿ ಚರ್ಚಿಸುವ ಬದಲು ತೇಲಿಸಿ, ಚರ್ಚೆ ಮಾಡಲಾಯಿತು ಎನ್ನಲಾಗಿದೆ.

ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಮಾಜಿ ಸಚಿವ ಹಾಲಪ್ಪ ಆಚಾರ, ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣನವರ, ಕೊಪ್ಪಳ ಲೋಕಸಭಾ ಅಭ್ಯರ್ಥಿ ಬಸವರಾಜ ಕ್ಯಾವಟರ್, ಮುಖಂಡರಾದ ಕೆ. ವಿರುಪಾಕ್ಷಪ್ಪ, ಪರಣ್ಣ ಮುನವಳ್ಳಿ, ಬಸವರಾಜ ದಡೇಸೂಗುರು, ಹೇಮಲತಾ ನಾಯಕ, ಸೋಮಲಿಂಗಪ್ಪ, ಪ್ರಭಾರಿಗಳಾದ ಚಂದ್ರಶೇಖರ ಪಾಟೀಲ ಹಲಗೇರಿ, ಪ್ರತಾಪಗೌಡ ಮಸ್ಕಿ, ಕೆ. ಕರಿಯಪ್ಪ ಬಳ್ಳಾರಿ ಜಿಲ್ಲಾಧ್ಯಕ್ಷ ಚನ್ನಬಸನಗೌಡ, ರಾಯಚೂರು ಜಿಲ್ಲಾಧ್ಯಕ್ಷ ಶಿವರಾಜಗೌಡ ಪಾಟೀಲ ಉಪಸ್ಥಿತರಿದರು.

ಒಗ್ಗಟ್ಟು ಪ್ರದರ್ಶನ:

ಸಂಗಣ್ಣ ಟಿಕೆಟ್ ತಪ್ಪಿದ್ದಕ್ಕಾಗಿ ಪ್ರತ್ಯೇಕ ಸಭೆ ನಡೆಸುತ್ತಿರುವ ವೇಳೆಯಲ್ಲಿ ಕುಷ್ಟಗಿಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಕೋರ್ ಕಮಿಟಿ ಸಭೆ ನಡೆಸುವ ಮೂಲಕ ಬಿಜೆಪಿ ಒಗ್ಗಟ್ಟು ಪ್ರದರ್ಶನ ಮಾಡುವ ಪ್ರಯತ್ನ ಮಾಡಿದೆ. ಪಕ್ಷದ ಪದಾಧಿಕಾರಿಗಳು ಸಂಸದರು ಕರೆದಿರುವ ಸಭೆಗೆ ಹೊಗದಿರುವಂತೆ ಪರೋಕ್ಷವಾಗಿ ಸಂದೇಶ ರವಾನೆ ಮಾಡಲಾಗಿದೆ.

ನಾನಂತೂ ಸಂಗಣ್ಣ ಬೆಂಬಲಿಗರ ಸಭೆಗೆ ಹೋಗುವುದಿಲ್ಲ. ನಾನು ಪಕ್ಷದ ಬೇರೆ ಕಾರ್ಯದಲ್ಲಿರುವುದರಿಂದ ಹೋಗಲು ಆಗುವುದಿಲ್ಲ. ಅವರು ಬೆಂಬಲಿಗರ ಅಭಿಪ್ರಾಯ ಪಡೆದು, ಬಿಜೆಪಿ ಜೊತೆಗೆ ಬರುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ ತಿಳಿಸಿದ್ದಾರೆ.