ಮುಂಡರಗಿ: ದೇವರ ದಾಸಿಮಯ್ಯ ಆದ್ಯ ವಚನಕಾರರಾಗಿದ್ದು, ಅವರ ಜೀವನ ದರ್ಶನ ಯುವ ಪೀಳಿಗೆಗೆ ಮಾರ್ಗದರ್ಶನವಾಗಿದೆ ಎಂದು ಉಪತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ ತಿಳಿಸಿದರು.
ಪಟ್ಟಣದ ದೇವಾಂಗ ಸಮುದಾಯ ಭವನದಲ್ಲಿ ಬನಶಂಕರಿ ದೇವಸ್ಥಾನ ಟ್ರಸ್ಟ್ ಸಮಿತಿ, ದೇವಾಂಗ ಸಮಾಜ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಇತ್ತೀಚೆಗೆ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜೀವನ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಭಾರತದ ದಾರ್ಶನಿಕರ ಜಯಂತಿಗಳನ್ನು ಆಚರಿಸಲು ಸರ್ಕಾರದ ಆದೇಶ ಇರುತ್ತದೆ. ಎಲ್ಲ ದಾರ್ಶನಿಕರ ಜಯಂತಿಗಳನ್ನು ಸರ್ಕಾರದ ಮಟ್ಟದಲ್ಲಿ ಮತ್ತು ಸಾರ್ವಜನಿಕವಾಗಿ ಆಚರಿಸಲಾಗುತ್ತಿದೆ ಎಂದರು.
ಹಿರೇಹಡಗಲಿ ಶಿಕ್ಷಕ ಉಮಾಪತಿ ಅಕ್ಕಸಾಲಿ ಮಾತನಾಡಿ, ದೇವರ ದಾಸಿಮಯ್ಯನವರು ಆದ್ಯ ವಚನಕಾರ ಹೇಗೋ ಹಾಗೆ ಸ್ತ್ರೀ ಸ್ವಾತಂತ್ರ ಮೊದಲ ಪ್ರತಿಪಾದಕರು ಹೌದು. ಸಮಾಜದಲ್ಲಿಯ ಹೆಣ್ಣಿನ ತಾರತಮ್ಯದ ಕುರಿತು 11ನೇ ಶತಮಾನದಲ್ಲಿ ಸ್ತ್ರೀ ಸಮಾನತೆ ಧ್ವನಿ ಎತ್ತಿದ್ದಾರೆ. ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುವುದು ಶಿವಂಗೆ ಎಂದು ಪತಿ ಪತ್ನಿಯರು ಒಂದಾಗಿ ನಡೆಯುವ ಬಗ್ಗೆ ತಿಳಿಸಿದ್ದಾರೆ ಎಂದರು.ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ದಶರಥರಾಜು ಕೊಳ್ಳಿ ಮಾತನಾಡಿ, ದೇವಾಂಗ ಸಮಾಜದವರು ಸಂಘಟಿತರಾಗಿ ಉತ್ತಮ ಕಾರ್ಯಕ್ರಮ ಕೈಗೊಂಡಿರುವುದು ಶ್ಲಾಘನೀಯ. 2026ರ ಮೇ 9 ಮತ್ತು 10ರಂದು ಬಾದಾಮಿ- ಬನಶಂಕರಿಯಲ್ಲಿ ಜರುಗುವ ಅಖಿಲ ಭಾರತ ದೇವಾಂಗ ಜಾಗೃತಿ ಕಾರ್ಯಕ್ರಮ ಹಾಗೂ ದಯಾನಂದಪುರಿ ಸ್ವಾಮೀಜಿ ಪಟ್ಟಾಭಿಷೇಕದ 36ನೇ ವಾರ್ಷಿಕೋತ್ಸವದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದರು.
ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಆದ್ಯ ವಚನಕಾರ ದೇವರ ದಾಸಿಮಯ್ಯ 12ನೇ ಶತಮಾನಕ್ಕಿಂತಲೂ ಪೂರ್ವದಲ್ಲಿ ಜನಿಸಿ ಶ್ರೇಷ್ಠ ಜೀವನದಿಂದ ಹಾಗೂ ವಚನ ಸಾಹಿತ್ಯದಿಂದ 12ನೇ ಶತಮಾನದ ಬಸವಾದಿ ಶರಣರಿಗೆ ವಚನ ಸಾಹಿತ್ಯ ಮಾರ್ಗವನ್ನು ಪಚುರಪಡಿಸಿದರು ಎಂದರು.
ಶಂಕ್ರಮ್ಮ ಹಡಗಲಿ, ಚಂದ್ರಮತಿ ಗದ್ದಿ, ರಾಘವೇಂದ್ರ ಕೊಪ್ಪಳ, ನಾರಾಯಣಪ್ಪ ಗುಬ್ಬಿ, ನಾಗರಾಜ ಭೂತಾನವರ, ಕೃಷ್ಣಮೂರ್ತಿ ದೂತರಗಾವಿ, ಶ್ರಂಕ್ರಪ್ಪ ಕಳ್ಳಿ, ಡಾ. ನಿಂಗು ಸೊಲಗಿ, ಸಂಗಮೇಶ ನಿಡಗುಂದಿ, ಬಸನಗೌಡ ಮುನ್ನೊಳ್ಳಿ, ಬಸನಗೌಡ ಪಾಟೀಲ, ಗ್ಯಾನಪ್ಪ ಗುಗ್ಗುರಿ, ಬಸವರಾಜ ಗೋದಿ, ಮಲ್ಲಪ್ಪ ದೊತ್ರಗಾವಿ, ಲೋಕಪ್ಪ ದೂತರಗಾವಿ, ಕೇಶಪ್ಪ ಹುಳ್ಳಿ, ಸಂಜೀವ್ ರಿತ್ತಿ, ಶ್ರೀನಿವಾಸ್ ಕಟ್ಟಿ, ಪ್ರವೀಣ್ ಅರ್ಕಸಾಲಿ, ಪಂಪನಗೌಡ ಗುಗ್ಗರಿ, ಮಹೇಶ್ ಮೇಟಿ, ಕೃಷ್ಣಾ ಸಾಹುಕಾರ, ಬಿ.ಎಚ್. ಹಲವಾಗಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಅವಿನಾಶ ಗೋಡಕಿಂಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸನಗೌಡ ಪಾಟೀಲ ನಿರೂಪಿಸಿದರು. ಮಂಜುನಾಥ ಗುಗ್ರಿ ವಂದಿಸಿದರು.