ಸಾರಾಂಶ
ಮುಂಡರಗಿ:ದೇವರ ದಾಸಿಮಯ್ಯನವರು ಇಳೆನಿಮ್ಮ ದಾನ, ಬೆಳೆ ನಿಮ್ಮದಾನ ಎನ್ನುವ ಅರ್ಥಪೂರ್ಣವಾದ ವಚನವೂ ಸೇರಿದಂತೆ ಸುಮಾರು 176ಕ್ಕೂ ಹೆಚ್ಚು ವಚನಗಳನ್ನು ರಚಿಸಿದ ಮೊಟ್ಟ ಮೊದಲ ವಚನಕಾರರಾಗಿದ್ದರು ಎಂದು ಗದಗ ಜಿಲ್ಲಾ ದೇವಾಂಗ ಸಮಾಜದ ನೌಕರರ ಸಂಘದ ಅಧ್ಯಕ್ಷ ರಾಘವೇಂದ್ರ ಕೊಪ್ಪಳ ಹೇಳಿದರು. ಅವರು ಶನಿವಾರ ಪಟ್ಟಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕ ಮುಂಡರಗಿ, ಶ್ರೀ ಬನಶಂಕರಿ ದೇವಸ್ಥಾನ ಟ್ರಸ್ಟ್ ಸಮಿತಿ ದೇವಾಂಗ ಸಮಾಜ ಮುಂಡರಗಿ, ಜಿಲ್ಲಾ ದೇವಾಂಗ ನೌಕರರ ಸಂಘ ಗದಗ-ಬೆಟಗೇರಿ ಸಹಯೋಗದಲ್ಲಿ ಮಾಸಿಕ ಶರಣರ ಚಿಂತನ ಕಾರ್ಯಕ್ರಮದಲ್ಲಿ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜೀವನ ದರ್ಶನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಈ ನಾಡಿನಲ್ಲಿ ಆಗಿ ಹೋಗಿದ್ದ ಶರಣರಲ್ಲಿ ದೇವರ ದಾಸಿಮಯ್ಯನವರೂ ಒಬ್ಬರು. ಬಸವಣ್ಣನವರ ಪೂರ್ವದಲ್ಲಿಯೇ ದಾಸಿಮಯ್ಯನವರು ಆಗಿ ಹೋಗಿದ್ದರು. ಅವರು ಜೀವನಕ್ಕಾಗಿ ನೇಕಾರಿಕೆ ವೃತ್ತಿಯನ್ನು ಆಯ್ದುಕೊಂಡಿದ್ದರು. ಇವರು ಶ್ರೀಶೈಲದಲ್ಲಿ ತಮ್ಮ ವಿದ್ಯಾಭ್ಯಾಸ ಮಾಡಿದ್ದರು. ದರೋಡೆಕೋರರಿಗೆ ತಿಳುವಳಿಕೆ ನೀಡುವ ಮೂಲಕ ಅವರನ್ನು ಆಧ್ಯಾತ್ಮದ ಕಡೆಗೆ ತರುವ ಕಾರ್ಯವನ್ನು ದಾಸಿಮಯ್ಯನವರು ಮಾಡಿದ್ದರು. ದುಗ್ಗಳೆಯಂಬ ಶರಣೆಯನ್ನು ಮದುವೆಯಾಗಿದ್ದ ಇವರು ಶೈವಸಂಪ್ರದಾಯದವರಾಗಿದ್ದರು. ರಾಮನಾಥ ಅವರ ವಚನದ ಅಂಕಿತವಾಗಿತ್ತು. ಆಗಿನ ಕಾಲದಲ್ಲಿ ಅವರ ಬಗ್ಗೆ ಹೆಚ್ಚು ಪ್ರಚಾರ ಇರಲಿಲ್ಲ. 1990ರಿಂದಿಚೆಗೆ ಎಲ್ಲರಿಗೂ ಗೊತ್ತಾಗುತ್ತಿದೆ. ಪ್ರತಿಯೊಬ್ಬರ ದೇವರ ದಾಸಿಮಯ್ಯನವರ ಬಗ್ಗೆ ತಿಳಿದುಕೊಳ್ಳುವುದು ಅವಶ್ಯವಾಗಿದೆ. ನಮ್ಮ ಮಕ್ಕಳಿಗೆ ಅವರ ವಚನಗಳನ್ನು ಕಲಿಸಿ ಅದರ ಅರ್ಥವನ್ನು ಹೇಳಬೇಕಿದೆ ಎಂದರು.ದೇವಾಂಗ ಸಮಾಜದ ಹಿರಿಯರಾದ ಅವಿನಾಶ ಗೋಡಕಿಂಡಿ ಮಾತನಾಡಿ, ದೇವರ ದಾಸಿಮಯ್ಯನವರ ವಚನಗಳು ಸುಲಿದ ಬಾಳೆ ಹಣ್ಣಿನಂತೆ. ಅವು ಎಲ್ಲರಿಗೂ ಇಷ್ಯವಾಗುತ್ತವೆ. ಸರ್ಕಾರ ದಾಸೀಮಯ್ಯನವರ ಹೆಸರಿನಲ್ಲಿ ಜಯಂತಿ ಪ್ರಾರಂಭಿಸಿತು. ಜತೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅವರ ಹೆಸರಿನಲ್ಲಿ ಅಧ್ಯಯನಪೀಠವೊಂದನ್ನು ಪ್ರಾರಂಭಿಸಿತು. ಹೀಗಾಗಿ ಅವರ ವಚನಗಳ ಬಗ್ಗೆ, ಅವರ ಸಾಧನೆ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಅನುಕೂಲವಾಗಿದೆ. ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು. ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಪ್ರೊ.ಎ.ವೈ. ನವಲಗುಂದ ಅಧ್ಯಕ್ಷತೆವಹಿಸಿ ಮಾತನಾಡಿದರು. ಬನಶಂಕರಿ ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಗುಬ್ಬಿ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಅನೇಕ ಮಕ್ಕಳು ದೇವರ ದಾಸಿಮಯ್ಯನವರ ವಚನಗಳನ್ನು ಹೇಳಿದರು. ರಾಜೇಂದ್ರ ಬಾರದ್ವಾಡ, ದಶರಥ ಕೊಳ್ಳಿ, ಅಶ್ವತ್ಥ ಹೊನ್ನಳ್ಳಿ, ಪ್ರಭು ನೀಲಗುಂದ, ಮಲ್ಲಪ್ಪ ಧೋತರಗಾವಿ, ನಾರಾಯಣಪ್ಪ ಗುಬ್ಬಿ, ಬಸವರಾಜ ರಾಮೇನಹಳ್ಳಿ, ಸಂಗಮೇಶ ನಿಡಗುಂದಿ, ಮಂಜುನಾಥ ಗುಗ್ಗರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪಿ.ಆರ್. ಕಳ್ಳಿ ನಿರೂಪಿಸಿ, ಶಿವಯೋಗಿ ಕೊಪ್ಪಳ ವಂದಿಸಿದರು.