ಧಾರವಾಡ: ಕನ್ನಡ ಸಾಹಿತ್ಯಕ್ಕೆ ದೇವರ ದಾಸಿಮಯ್ಯರ ಕೊಡುಗೆ ಅಪಾರ. ಅವರು ವಚನ ಸಾಹಿತ್ಯವನ್ನು ರಚಿಸಿ, ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದರು ಎಂದು ಪಾಲಿಕೆ ವ್ಯಾಪ್ತಿಯ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ ಹಳಿಯಾಳ ಹೇಳಿದರು.

ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿದರು.ದಾಸಿಮಯ್ಯ ಅವರ ವಚನಗಳು ಸರಳತೆ, ಸಮಾನತೆ ಹಾಗೂ ಭಕ್ತಿ ತತ್ವಗಳನ್ನು ಸಾರುತ್ತವೆ. ಅವರು ಜಾತಿ ಬೇಧವನ್ನು ವಿರೋಧಿಸಿ, ಮಾನವೀಯ ಮೌಲ್ಯಗಳನ್ನು ಉತ್ತೇಜಿಸಿದ ಮಹಾನ್ ಸಂತರು. ಅವರ ಸಂದೇಶಗಳು ಇಂದಿನ ಸಮಾಜದಲ್ಲಿಯೂ ಪ್ರಸ್ತುತ ಎಂದರು.

ಬೆಂಗಳೂರು ದೇವಾಂಗ ಸಮಾಜದ ಸಂಘಟನಾಕಾರ ರವೀಂದ್ರ ಪಾಟೀಲ ಮಾತನಾಡಿ, ಮಕ್ಕಳನ್ನು ಕೇವಲ ಆಟ-ಪಾಠಗಳಲ್ಲೇ ತೊಡಗಿಸುವುದರಿಂದ ಅವರ ಮನರಂಜನೆ ಮತ್ತು ಮೂಲಭೂತ ಶಿಕ್ಷಣ ಬೆಳೆಯುತ್ತದೆ. ನಮ್ಮ ಪೂರ್ವಜರು ಯಾವ ರೀತಿಯ ವೃತ್ತಿಗಳನ್ನು ಮಾಡುತ್ತಿದ್ದರು. ಅವರು ಎದುರಿಸಿದ ಸವಾಲುಗಳು ಏನು, ಅವರು ಹೇಗೆ ಶ್ರಮಪಟ್ಟು ಜೀವನ ನಡೆಸಿದರು ಎಂಬುದನ್ನು ಮಕ್ಕಳಿಗೆ ವಿವರಿಸಿದರೆ, ಅವರು ಶ್ರಮದ ಮೌಲ್ಯವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಇದರಿಂದ ಮಕ್ಕಳಲ್ಲಿ ಪರಿಶ್ರಮ, ಪ್ರಾಮಾಣಿಕತೆ ಮತ್ತು ಜವಾಬ್ದಾರಿತನದ ಗುಣಗಳು ಬೆಳೆಯುತ್ತವೆ ಎಂದರು.

ದೇವಾಂಗ ಸಂಘ ಅಧ್ಯಕ್ಷ ಡಾ. ಕೆ.ಜಿ. ಬ್ಯಾಕೋಡಿ, ದೇವಾಂಗ ಸಂಘ ಅಧ್ಯಕ್ಷ ಲಕ್ಷ್ಮೀಕಾಂತ ಇಟ್ನಾಳ, ದೇವಾಂಗ ನೇಕಾರ ಅಭಿವೃದ್ದಿ ಸಂಘದ ಅಧ್ಯಕ್ಷ ರವಿ ಲೋಲಿ, ಗರಗ ಹಾಗೂ ಹಂಗರಕಿ ದೇವಾಂಗ ಸಮಾಜದ ಅಧ್ಯಕ್ಷ ಜಗದೀಶ ಜವಳಿ ಮಾತನಾಡಿದರು.

ದೇವಾಂಗ ಶಕ್ತಿ ಮಹಿಳಾ ಮಂಡಳದ ಅಧ್ಯಕ್ಷರಾದ ಡಾ. ರಾಧಾ ಅಶೋಕ ಗೌಡರ, ಬನಶಂಕರಿ ದೇವಾಂಗ ಸಂಘದ ಅಧ್ಯಕ್ಷ ಬಸವರಾಜ ಕುಸುಬಿ, ಸಮಾಜದ ಮುಖಂಡ ರಾಮು ತಾವರೆ ಇದ್ದರು.


ಹಿರೇಮಲ್ಲೂರ ಈಶ್ವರನ ಕಾಲೇಜು ಅಧ್ಯಾಪಕ ಡಾ. ಈರಣ್ಣ ಇಂಜಗನೇರಿ ವಿಶೇಷ ಉಪನ್ಯಾಸ ನೀಡಿದರು. ಕುಮಾರ ಬೆಕ್ಕೇರಿ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು.