ಬಾರೋ ಬಾರೋ ಮಳೆರಾಯ, ಹೂವಿನ ತೋಟಕ್ಕೆ ನೀರಿಲ್ಲ ಎಂಬ ಜನಪದ ಹಾಡು ಹೇಳುತ್ತ ಮುಗಿಲತ್ತ ಮುಖ ಮಾಡಿ ನೋಡುವ ಸ್ಥಿತಿ ತಾಲೂಕಿನ ಖುಷ್ಕಿ ಪ್ರದೇಶದ ರೈತರಲ್ಲಿ ಸೃಷ್ಟಿಯಾಗಿದೆ. ತಾಲೂಕಿನಲ್ಲಿ ಬಿತ್ತನೆ ಮಾಡಿ ಎರಡೂವರೆ ತಿಂಗಳು ಕಳೆದರೂ ಸಮರ್ಪಕ ಮಳೆಯಾಗದೇ ತೇವಾಂಶ ಕೊರತೆಯಿಂದ ಬೆಳೆಗಳು ಬಾಡುತ್ತಿವೆ.

ಮಲ್ಲಿಕಾರ್ಜುನ ಪಟ್ಟಣಶೆಟ್ಟಿ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಬಾರೋ ಬಾರೋ ಮಳೆರಾಯ, ಹೂವಿನ ತೋಟಕ್ಕೆ ನೀರಿಲ್ಲ ಎಂಬ ಜನಪದ ಹಾಡು ಹೇಳುತ್ತ ಮುಗಿಲತ್ತ ಮುಖ ಮಾಡಿ ನೋಡುವ ಸ್ಥಿತಿ ತಾಲೂಕಿನ ಖುಷ್ಕಿ ಪ್ರದೇಶದ ರೈತರಲ್ಲಿ ಸೃಷ್ಟಿಯಾಗಿದೆ. ತಾಲೂಕಿನಲ್ಲಿ ಬಿತ್ತನೆ ಮಾಡಿ ಎರಡೂವರೆ ತಿಂಗಳು ಕಳೆದರೂ ಸಮರ್ಪಕ ಮಳೆಯಾಗದೇ ತೇವಾಂಶ ಕೊರತೆಯಿಂದ ಬೆಳೆಗಳು ಬಾಡುತ್ತಿವೆ. ಹೀಗಾಗಿ ರೈತರ ಹೊಲದಲ್ಲಿ ಈಗ ಬರದ ಛಾಯೆ ಆವರಿಸಿದೆ. ಆದರೂ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿರುವುದು ರೈತರಲ್ಲಿ ಆಕ್ರೋಶ ಹೆಚ್ಚಿಸಿದೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಜುಲೈ ತಿಂಗಳಲ್ಲಿ ಶೇ.20 ಹಾಗೂ ಆಗಸ್ಟ್‌ನಲ್ಲಿ ಶೇ.59 ಮಿಮೀ ಕಡಿಮೆ ಮಳೆಯಾಗಿದ್ದು, ನಿರೀಕ್ಷೆಯಷ್ಟು ಬಿತ್ತನೆಯೂ ಆಗಿಲ್ಲ, ಬಿತ್ತನೆ ಮಾಡಿದ ಬೆಳೆಗಳು ಬಾಡುತ್ತಿವೆ. ಇಷ್ಟೊತ್ತಿಗಾಗಲೇ ಹಸಿರಿನಿಂದ ನಳನಳಿಸಬೇಕಿದ್ದ ಗದ್ದೆಗಳಲ್ಲಿ ಮಳೆ ಕೊರತೆಯಿಂದ ಬೆಳವಣಿಗೆ ಕುಂಠಿತವಾಗಿದ್ದು, ಈಗ ಮಳೆಯಾದರೂ ಫಸಲು ಕೈಗೆಟುಕುವ ನಿರೀಕ್ಷೆ ಮಾಯವಾಗಿದೆ.

ಮಳೆ ಕೊರತೆ:ಮುಂಗಾರಿನ ಬೆಳೆ ಬಿತ್ತನೆಗೆ ಸಾಧಾರಣ (ವಾಡಿಕೆ) ಮಳೆಗಿಂತ ಕಡಿಮೆಯಾಗಿದೆ. ಜೂನ್‌ ತಿಂಗಳ ಮೊದಲ ವಾರದಿಂದ ಆಗಸ್ಟ್ ಮೂರನೇ ವಾರದವರೆಗೆ ತಾಲೂಕಿನಲ್ಲಿ ವಾಡಿಕೆ ಮಳೆ 218.5 ಮಿಮೀ ಮಳೆಯಾಗಬೇಕಿತ್ತು. ಪ್ರಸ್ತುತ 175.5 ಮಿಮೀ ಮಳೆಯಾಗಿದ್ದು, 20 ಮಿಮೀ ಮಳೆ ಕೊರತೆ ಉಂಟಾಗಿದೆ.

ಬಿತ್ತನೆಯ ಕ್ಷೇತ್ರ:ತಾಲೂಕಿನಲ್ಲಿ 19540 ಹೆಕ್ಟೇರ್‌ ಪ್ರದೇಶ ನೀರಾವರಿ ಹಾಗೂ 38052 ಹೆಕ್ಟೇರ್‌ ಖುಸ್ಕಿ ಬೇಸಾಯದ ಬಿತ್ತನೆ ಕ್ಷೇತ್ರದಲ್ಲಿ ಆಗಸ್ಟ್ 3ನೇ ವಾರದವರೆಗೂ 10163 ಹೆಕ್ಟೇರ್‌ ನೀರಾವರಿ ಹಾಗೂ 36549 ಹೆಕ್ಟೇರ್‌ ಖುಷ್ಕಿ ಜಮೀನಿನಲ್ಲಿ ಬಿತ್ತನೆಯಾಗಿದೆ. ಶೇ.81ರಷ್ಟು ಬಿತ್ತನೆಯಾಗಿದ್ದು, ಶೇ.19ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ.

ಮಳೆ ಕೊರತೆಯಿಂದ ಬೆಳೆಗಳು ಬಾಡುತ್ತಿದ್ದು, ಸಂಪೂರ್ಣ ಕೈಕೊಡುವ ಭೀತಿ ಆವರಿಸಿದೆ. ಮಳೆಯಾಗದ ಕಾರಣ ಕೃಷಿ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಸರ್ಕಾರವೂ ಬರಗಾಲ ಎಂದು ಘೋಷಣೆ ಮಾಡಿ ಬರ ಕಾಮಗಾರಿ ಆರಂಭಿಸದ ಕಾರಣ ರೈತರು, ಕೃಷಿ ಕಾರ್ಮಿಕರಿಗೆ ಕೆಲಸವಿಲ್ಲದೆ ಜೀವನೋಪಾಯಕ್ಕಾಗಿ ಕೆಲಸ ಅರಸಿ ನಗರಗಳತ್ತ ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಬೆಳೆಹಾನಿ ಪರಿಹಾರಕ್ಕೆ ಆಗ್ರಹ:ಕಳೆದ ಹಲವು ದಿನಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಜಮೀನುಗಳಲ್ಲಿ ತೇವಾಂಶ ಕಡಿಮೆಯಾಗಿದ್ದು, ಬೆಳೆಗಳು ಒಣಗುತ್ತಿದ್ದು, ಬರದ ಛಾಯೆ ಆವರಿಸಿದೆ. ಈಗಾಗಲೇ ಬಿತ್ತನೆ ಹಾಗೂ ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ಹಣ ಖರ್ಚು ಮಾಡಿರುವ ರೈತರು ಬೆಳೆ ಕೈಕೊಡುವ ಆತಂಕದಲ್ಲಿದ್ದಾರೆ. ಇಷ್ಟೊತ್ತಿಗಾಗಲೇ ಸರ್ಕಾರ ಬರ ಘೋಷಣೆ ಮಾಡಿ ರೈತರ ನೆರವಿಗೆ ಧಾವಿಸಬೇಕಿತ್ತು. ವಿಪಕ್ಷಗಳಾದ ಬಿಜೆಪಿ, ಜೆಡಿಎಸ್‌ ಪಕ್ಷಗಳು ನೇಪತ್ಯಕ್ಕೆ ಎಂಬಂತೆ ಬರ ವೀಕ್ಷಣೆ ಮಾಡಿ ಹೋದರೆ ಹೊರತು ಸರ್ಕಾರದ ಮೇಲೆ ಒತ್ತಡ ಹಾಕುತ್ತಿಲ್ಲ. ಹೀಗಾಗಿ ರೈತರ ಸಂಕಷ್ಟ ಆಲಿಸುವವರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರ ಕೂಡಲೇ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕು. ಬೆಳೆ ಹಾನಿ ಸಮೀಕ್ಷೆ ನಡೆಸಿ ಅರ್ಹ ರೈತರಿಗೆ ಪರಿಹಾರ, ಬೆಳೆ ವಿಮೆ ಹಾಗೂ ಅಗತ್ಯ ನೆರವು ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ತಾಲೂಕಿನಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದೆ ಕೃಷಿ ಚಟುವಟಿಕೆ ಕುಂಠಿತಗೊಂಡಿದ್ದು, ಬಿತ್ತನೆ ಮಾಡಿದ ಬೆಳೆಗಳು ಒಣಗುತ್ತಿವೆ. ಎಲ್ಲೆಡೆ ಬರದ ಛಾಯೆ ಆವರಿಸಿದ್ದು, ಕುಡಿವ ನೀರಿನ ಸಮಸ್ಯೆಯೂ ತೀವ್ರಗೊಂಡಿದೆ. ಕೂಡಲೇ ಸರ್ಕಾರ ಬರ ಘೋಷಿಸಿ ಬೆಳೆಹಾನಿ ಪರಿಹಾರ ಸೇರಿ ಬರ ಕಾಮಗಾರಿ ಆರಂಭಿಸಬೇಕು.

- ಈರಪ್ಪ ಕುಳೆಕುಮಟಗಿ ರೈತ ಸಂಘದ ತಾಲೂಕು ಅಧ್ಯಕ್ಷ ದೇವರಹಿಪ್ಪರಗಿ

ಮಳೆ ಇಲ್ಲದೆ ರೈತರಲ್ಲಿ ಬೆಳೆ ನಷ್ಟ ಭಿತಿ ಆವರಿಸಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ನೋವಿಗೆ ಸ್ವಂದಿಸುವುದು ಸರ್ಕಾರದ ಕರ್ತವ್ಯ. ದೇವರಹಿಪ್ಪರಗಿ ಬರಪೀಡಿತ ತಾಲೂಕು ಎಂದು ಘೋಷಿಸಲು ಸರ್ಕಾರಕ್ಕೆ ಒತ್ತಾಯಿಸಿದ್ದೇನೆ. ರೈತರಿಗೆ ಬೆಳೆಹಾನಿ ಪರಿಹಾರ ನೀಡಬೇಕು. ಅಧಿಕಾರಿಗಳು ಕಚೇರಿಗೆ ಸೀಮಿತವಾಗದೆ ಪರಿಸ್ಥಿತಿಯ ನೈಜ ಚಿತ್ರಣ ನೋಡಿ ಸಮಗ್ರ ಮಾಹಿತಿ ಸಂಗ್ರಹಿಸಿ, ವರದಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

- ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಶಾಸಕರು ದೇವರಹಿಪ್ಪರಗಿ