ಕನ್ನಡಪ್ರಭ ವಾರ್ತೆ ರಾಯಚೂರು
ಡಿ. ದೇವರಾಜ ಅರಸು ಅವರು ಕರ್ನಾಟಕದಲ್ಲಿ ಹಲವಾರು ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ ಅವರೊಬ್ಬ ಕರ್ನಾಟಕ ಕಂಡ ಅಪ್ರತಿಮ ರಾಜಕಾರಣಿಯಾಗಿದ್ದರು ಎಂದು ರಾಯಚೂರು ಮಹಾನಗರ ಪಾಲಿಕೆ ಉಪ ಆಯುಕ್ತ ಡಾ.ಶರಣಪ್ಪ ಹೇಳಿದರು.ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ. ಮಹಾನಗರ ಪಾಲಿಕೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಸಂಯುಕ್ತಾಶ್ರಯದ-ಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಡಿ. ದೇವರಾಜ ಅರಸು ಅವರು ವಿಶೇಷವಾಗಿ ಹಿಂದುಳಿದ, ದೀನ, ದುರ್ಬಲ ವರ್ಗಗಳ ಜನರ ಬಗ್ಗೆ ವಿಶೇಷ ಕಾಳಜಿ ಉಳ್ಳವರಾಗಿದ್ದರು. ಉಳುವವನೇ ಭೂಮಿಯ ಒಡೆಯ, ಭೂ ಸುಧಾರಣೆಯಂತಹ ಹಲವಾರು ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಎಲ್ಲರಿಗೂ ಸಮಾನ ಭೂಮಿ ಹಂಚಿಕೆ ಹಾಗೂ ಅವರಿಗೆ ಸಮಾನ ಹಕ್ಕುಗಳನ್ನು ನೀಡಿದ್ದರು. ಭಾಷಾವಾರು ಪ್ರಾಂತ್ಯಗಳ ಮೇಲೆ ಮೊದಲು ಮೈಸೂರು ರಾಜ್ಯ ಉದಯವಾಯಿತು ಈ ಮೈಸೂರು ರಾಜ್ಯವನ್ನು ದೇವರಾಜ ಅರಸರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 1973 ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು ಎಂದರು.
ಹಿಂದುಳಿದ ಜಾತಿಗಳ ಜಿಲ್ಲಾಧ್ಯಕ್ಷ ಕೆ. ಶಾಂತಪ್ಪ ಮಾತನಾಡಿ, ಜಿಲ್ಲೆಯ 26 ಸಮುದಾಯಗಳ ಪ್ರತಿನಿಧಿಗಳು ಸೇರಿ ಡಿ. ದೇವರಾಜ ಅರಸು ಅವರ ಕಾರ್ಯಕ್ರಮ ಅದ್ಧೂರಿಯಾಗಿ ಮಾಡುತ್ತಿರುವುದು ನೋಡಿ ಸಂತಸವಾಗುತ್ತಿದೆ. ಎಲ್ಲ ಸಮುದಾಯಗಳು ಹೀಗೆ ಒಕ್ಕೂಟ ಮಾಡಿಕೊಂಡು ಕಾರ್ಯಕ್ರಮಗಳು ಮಾಡುವುದರಿಂದ ನಮ್ಮ ಬೇಕು-ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಹಾಯಕವಾಗಲಿದೆ. ಡಿ. ದೇವರಾಜ ಅರಸು ಅವರ ಕನಸು ಹಿಂದುಳಿದ ವರ್ಗಗಳ ಅಭಿವೃದ್ಧಿಯಾಗಬೇಕು ಎಂಬುದಾಗಿತ್ತು ಎಂದರು.ಜೇಗರಕಲ್ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕರಾದ ಮುಕ್ಕನಗೌಡ ಪೊಲೀಸ್ ಪಾಟೀಲ್ ಅವರು ಡಿ. ದೇವರಾಜ ಅರಸು ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ಒಬಿಸಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಬೆಳಗ್ಗೆ ಡಿ. ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆ ಮಹಿಳಾ ಸಮಾಜದಿಂದ ಜಿಲ್ಲಾ ರಂಗ ಮಂದಿರದವರೆಗೆ ನಡೆಯಿತು. ಅಪರ ಜಿಲ್ಲಾಧಿಕಾರಿ ಶಿವಾನಂದ ಸಹಿತ ಇತರ ಗಣ್ಯರಿಂದ ಚಾಲನೆ ದೊರೆಯಿತು.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸುನಿತಾ ಎಂ., ಮುಖಂಡರಾದ ಪವನ ಪಾಟೀಲ್, ಶ್ರೀ ಕಾಂತ ವಕೀಲ್, ಹನುಮಂತ ಯಾದವ್, ಕಡಗೋಲು ಆಂಜನೇಯ, ವಿವಿಧ ಸಮುದಾಯಗಳ ಜನರು, ಮಹಿಳೆಯರು, ಹಿಂದುಳಿದ ವರ್ಗಗಳ ವಸತಿ ನಿಲಯಗಳ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.