ಸಾರಾಂಶ
ಕನ್ನಡ ಪ್ರಭ ವಾರ್ತೆ ತಿಪಟೂರು
ಹಿಂದುಳಿದ ವರ್ಗಗಳ ಹರಿಕಾರ, ದಿವಗಂತ ಡಿ. ದೇವರಾಜ ಅರಸುರವರು ಬಡವರು, ನಿರ್ಗತಿಕರು, ಶೋಷಿತರು, ದೀನ- ದಲಿತರ ಮೇಲೆ ಹೆಚ್ಚು ಕಾಳಜಿ ಹೊಂದಿದ್ದರು ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.ನಗರದ ಹಾಲ್ಕುರಿಕೆ ರಸ್ತೆ ಟಿ.ಎಂ.ಮಂಜುನಾಥನಗರದಲ್ಲಿರುವ ಡಿ. ದೇವರಾಜ ಅರಸು ಭವನದಲ್ಲಿ ಮಂಗಳವಾರ ತಾಲೂಕು ಆಡಳಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ದಿವಗಂತ ಡಿ. ದೇವರಾಜ ಅರಸುರವರ 109ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಚುರುಕಾದ ವ್ಯಕ್ತಿತ್ವ ಹೊಂದಿದ್ದ ಅರಸುರವರು, ೭ ಬಾರಿ ಶಾಸಕರಾಗಿ ಎಲ್ಲಾ ವರ್ಗದ ಜನರ ಏಳಿಗೆಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸಿದ್ದರು. ರಾಜಕೀಯವಾಗಿ ನಿಷ್ಠೆ, ಬದ್ಧತೆ ಹೊಂದಿದ್ದ ಅರಸುರವರು ಮುಖ್ಯಮಂತ್ರಿಗಳಾಗಿದ್ದಾಗ ಜಾರಿಗೆ ತಂದಿದ್ದ ಜನಪರ, ರೈತಪರ ಯೋಜನೆಗಳು ಈಗಲೂ ಉಳಿದುಕೊಂಡಿವೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಹಿಂದುಳಿದ, ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲ್ಪಿಸಿಕೊಟ್ಟಿದ್ದರು. ನಮ್ಮ ಸರ್ಕಾರವೂ ಸಹ ಅವರ ಹಾದಿಯಲ್ಲಿ ನಡೆಯುತ್ತಾ ಜನತೆಯ ಶ್ರೇಯೋಭಿವೃದ್ಧಿಗಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ತಿಪಟೂರಿನಲ್ಲಿಯೂ ಆರು ವಿದ್ಯಾರ್ಥಿ ನಿಲಯಗಳಿಗೆ ನಿವೇಶನ ಕಲ್ಪಿಸಿಕೊಟ್ಟು ಮೂರು ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಎಸ್‌ವಿಪಿ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ಉಪನ್ಯಾಸ ನೀಡಿ, ಅರಸುರವರು ಡಾ.ಬಿ.ಆರ್. ಅಂಬೇಡ್ಕರ್‌ರವರಂತೆ ದಲಿತರ ಏಳಿಗೆಗೆ ಶ್ರಮಿಸಿದ್ದರು. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಶೈಕ್ಷಣಿಕ ಕ್ರಾಂತಿ ಮಾಡಿದ್ದರು ಎಂದರು.ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ ಮಾತನಾಡಿ, ಅರಸುರಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ದೇಶದ ಅಭಿವೃದ್ಧಿಗೆ ತೊಡಗಿಸಿಕೊಳ್ಳಬೇಕೆಂದರು.
ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಜಾಕ್ಷಮ್ಮ ಮಾತನಾಡಿದರು.ಗ್ರೇಡ್-2 ತಹಸೀಲ್ದಾರ್ ಜಗನ್ನಾಥ್, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಬಿಇಒ ಚಂದ್ರಯ್ಯ, ತಾಪಂ ಇಒ ಸುದರ್ಶನ್, ತಾ. ಆರೋಗ್ಯಾಧಿಕಾರಿ ಡಾ. ರಾಧಿಕಾ, ಸಣ್ಣ ನೀರಾವರಿ ಇಲಾಖೆಯ ದೊಡ್ಡಯ್ಯ, ಪಶು ಇಲಾಖೆ ನಂದೀಶ್, ಪ್ರಾಂಶುಪಾಲರಾದ ಎಂ.ಡಿ. ಶಿವಕುಮಾರ್, ತೋಟಗಾರಿಕೆ ಇಲಾಖೆ ಚಂದ್ರಶೇಖರ್, ಮುಖಂಡರಾದ ಪ್ರಕಾಶ್ ಯಾದವ್, ಗೋವಿಂದರಾಜು ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಶೋಭಾ, ಕೆಂಪರಾಜು, ಬಸವರಾಜು ಇತರೆ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.