ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಸಮಾನತೆಯ ಸಮಾಜವನ್ನು ರೂಪಿಸುವ ನಿಟ್ಟಿನಲ್ಲಿ ಶೋಷಿತ ವರ್ಗದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಸಿಕೊಟ್ಟು ಪ್ರಜಾಪ್ರಭುತ್ವದ ಧ್ವನಿಯಾದವರು ದೇವರಾಜ ಅರಸು ಎಂದು ಕುವೆಂಪು ವಿವಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಜೆ.ಎಸ್. ಸದಾನಂದ ತಿಳಿಸಿದರು.ತುಮಕೂರು ವಿವಿಯ ಡಿ. ದೇವರಾಜ ಅರಸು ಅಧ್ಯಯನ ಪೀಠವು ಮಂಗಳವಾರ ಆಯೋಜಿಸಿದ್ದ ‘ಸಾಮಾಜಿಕ ಮತ್ತು ಆರ್ಥಿಕ ಒಳಿತಿಗಾಗಿ ರಾಜಕೀಯ- ದೇವರಾಜ ಅರಸು ಅವರ ಒಂದು ಪ್ರಯೋಗ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ ಪಡೆಯಲು ಮೇಲು-ಕೀಳು ಪದ್ಧತಿಯನ್ನು ನಿಷೇಧಿಸಿ, ಬಡವರಿಗಾಗಿ ಮೀಸಲಾತಿ ಜಾರಿಗೊಳಿಸಿದರು. ಮಲ ಹೊರುವ ಹಾಗೂ ಜೀತದಾಳು ಪದ್ಧತಿಗಳನ್ನು ಸಹ ಸಂಪೂರ್ಣವಾಗಿ ನಿಷೇಧಿಸಿದರು. ರೈತರ ಮಕ್ಕಳು ಭೂಮಿತಾಯಿಯ ಮಕ್ಕಳೆಂದು ಘೋಷಿಸಿ, ಕನಿಷ್ಠ ಕೂಲಿಯನ್ನು ಜಾರಿಗೊಳಿಸಿದರು ಎಂದು ತಿಳಿಸಿದರು.ಸಾಮಾನ್ಯ ವರ್ಗದವರಿಗೆ ನ್ಯಾಯಬೆಲೆ ಅಂಗಡಿಗಳು, ವಿದ್ಯಾರ್ಥಿಗಳಿಗೆ ಬಸ್‌ಪಾಸ್ ವ್ಯವಸ್ಥೆ, ಹಳ್ಳಿಗಳಿಗೆ ಕುಡಿಯುವ ನೀರಿನ ಸೌಲಭ್ಯ, ಕಾರ್ಮಿಕ ವರ್ಗಕ್ಕೆಆರ್ಥಿಕ ಭದ್ರತೆ ತಂದ ಅರಸು ಅವರ ಅಭಿವೃದ್ಧಿಯ ಪಥವನ್ನು ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದರು.
ಸೂರಿಲ್ಲದ ಹಿಂದುಳಿದ ವರ್ಗದಜನರಿಗೆ ಮನೆ ಕಟ್ಟಿಸಿಕೊಡುವ ಯೋಜನೆಯನ್ನುಜಾರಿಗೆ ತಂದ ಮೊದಲ ಮುಖ್ಯಮಂತ್ರಿ ಅರಸು ಎಂದರು.ಅಧ್ಯಕ್ಷೀಯ ನುಡಿಗಳನ್ನಾಡಿದ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು, ದೇವರಾಜ ಅರಸು ಅವರು ಸಂವಿಧಾನದ, ಪ್ರಜಾಪ್ರಭುತ್ವದ ಶಕ್ತಿಯಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಅನುಭವಿ ಪ್ರಾಧ್ಯಾಪಕರನ್ನೊಳಗೊಂಡ ವಿಶ್ವವಿದ್ಯಾನಿಲಯಗಳು ಸೌಕರ್ಯಗಳಿಲ್ಲದಿದ್ದರೂ ಸೊನ್ನೆಯಿಂದ ಮೇಲಕ್ಕೇರುತ್ತವೆ. ವಿವಿಗಳಲ್ಲಿರುವ ಅಧ್ಯಯನ ಪೀಠಗಳು ವಿದ್ಯಾರ್ಥಿಗಳನ್ನು ಮಹನೀಯರ ಸಾಧನೆಗಳ ಮೂಲಕ, ಅಧ್ಯಯನ ಸಂಶೋಧನೆಗಳಿಂದ ಉನ್ನತಶ್ರೇಣಿಗೇರಿಸುವ ಪ್ರಯತ್ನ ಮಾಡಬೇಕು ಎಂದರು.
ವಿವಿ ಕುಲಸಚಿವೆ ನಾಹಿದಾ ಜಮ್‌ಜಮ್ ಮಾತನಾಡಿ, ದೇವರಾಜು ಅರಸು ಅವರ ರಾಜಕೀಯ ಯುಗವನ್ನು ಸುವರ್ಣ ಯುಗವೆಂದು ಹೇಳಬಹುದು. ರಾಜಕೀಯ ಮಾರಟಕ್ಕಿಲ್ಲ ಎಂಬುದನ್ನು ಅರಿತು, ಸಂವಿಧಾನ-ಪ್ರಜಾಪ್ರಭುತ್ವದ ಅಡಿಯಲ್ಲಿ ಯಾವ ವರ್ಗದವರು ಕೂಡ ನಾಯಕರಾಗಬಹುದು ಎಂದು ಹೇಳಿದರು.ತುಮಕೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ., ಡಿ. ದೇವರಾಜ ಅರಸು ಅಧ್ಯಯನ ಪೀಠದ ಸಂಯೋಜಕ ಡಾ. ಗುಂಡೇಗೌಡ ಉಪಸ್ಥಿತರಿದ್ದರು.