ಹಿಂದುಳಿದವರ ಪಾಲಿಗೆ ದೇವರಾಜ ಅರಸು ಧ್ರುವತಾರೆಯಂತೆ: ಡಾ.ತಿಮ್ಮನಹಳ್ಳಿ ವೇಣುಗೋಪಾಲ್

| Published : Aug 21 2025, 01:00 AM IST

ಹಿಂದುಳಿದವರ ಪಾಲಿಗೆ ದೇವರಾಜ ಅರಸು ಧ್ರುವತಾರೆಯಂತೆ: ಡಾ.ತಿಮ್ಮನಹಳ್ಳಿ ವೇಣುಗೋಪಾಲ್
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಕಂಡ ಧೀಮಂತ ನಾಯಕ, ಹೆಮ್ಮೆಯ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಯಾವುದೇ ಜಾತಿ, ಧರ್ಮ ಭೇದ ಮಾಡದೇ ಸಮಾಜದ ಎಲ್ಲರ ಏಳಿಗೆಗಾಗಿ ಶ್ರಮಿಸಿದರು.

ಕನ್ನಡಪ್ರಭ ವಾರ್ತೆ ಶಿರಾ

ಕರ್ನಾಟಕದಲ್ಲಿ ಹಿಂದುಳಿದ ವರ್ಗದವರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿಯಾಗಲು ಭದ್ರ ಬುನಾದಿ ಹಾಕಿದ ಡಿ.ದೇವರಾಜ ಅರಸು ಅವರು ಹಿಂದುಳಿದವರ ಪಾಲಿಗೆ ಧ್ರುವತಾರೆಯಾಗಿದ್ದಾರೆ ಎಂದು ನಿವೃತ್ತ ಪ್ರಾಂಶುಪಾಲ ಡಾ.ತಿಮ್ಮನಹಳ್ಳಿ ವೇಣುಗೋಪಾಲ್ ಅಭಿಪ್ರಾಯಪಟ್ಟರು.

ಅವರು ನಗರದ ಡಿ.ದೇವರಾಜ ಅರಸು ಭವನದಲ್ಲಿ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಡಿ.ದೇವರಾಜ ಅರಸು ಅವರ ೧೧೦ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ರಾಜ್ಯದಲ್ಲಿ ಯಾವುದೇ ವರ್ಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ವಸತಿ ಶಾಲೆಗಳನ್ನು ನಿರ್ಮಿಸಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ ಕೀರ್ತಿ ಡಿ. ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಅದೇ ರೀತಿ ಉಳುವವನೆ ಭೂಮಿಯ ಒಡೆಯ ಕಾನೂನು ತಂದು ಜಮೀನು ಇಲ್ಲದವರಿಗೆ ಭೂಮಿ ನೀಡಿದರು. ಸಮಾಜದಲ್ಲಿ ಶೋಷಿತ ವರ್ಗ, ಹಿಂದುಳಿದ ವರ್ಗಗಳ ಆಶಾಕಿರಣವಾಗಿ ಜನರ ಸಬಲೀಕರಣದ ದೃಷ್ಟಿಕೋನ ಇಟ್ಟುಕೊಂಡು ಕೆಲಸ ಮಾಡಿದ್ದಾರೆ ಎಂದರು.

ತಹಸೀಲ್ದಾರ್ ಆನಂದ ಕುಮಾರ್ ಮಾತನಾಡಿ, ರಾಜ್ಯ ಕಂಡ ಧೀಮಂತ ನಾಯಕ, ಹೆಮ್ಮೆಯ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಯಾವುದೇ ಜಾತಿ, ಧರ್ಮ ಭೇದ ಮಾಡದೇ ಸಮಾಜದ ಎಲ್ಲರ ಏಳಿಗೆಗಾಗಿ ಶ್ರಮಿಸಿದರು ಎಂದರು.

ಕಾಂಗ್ರೆಸ್ ಮುಖಂಡ ಸಂಜಯ್ ಜಯಚಂದ್ರ ಮಾತನಾಡಿ, ನಮ್ಮ ತಂದೆ ಟಿ.ಬಿ.ಜಯಚಂದ್ರ ಅವರು ಡಿ.ದೇವರಾಜ ಅರಸು ಅವರ ಒಡನಾಡಿಗಳಾಗಿದ್ದರು. ಅವರ ಸಲಹೆ- ಸೂಚನೆಗಳನ್ನು ಮೈಗೂಡಿಸಿಕೊಂಡು ರಾಜಕಾರಣದಲ್ಲಿ ಮುಂದೆ ಬಂದಿದ್ದಾರೆ ಎಂದರು.

ಮಾಜಿ ತಾಪಂ ಸದಸ್ಯ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ ಮಾತನಾಡಿ, ಶಿರಾ ನಗರದ ಯಾವುದಾದರೂ ರಸ್ತೆಗೆ ಅರಸು ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಕಳೆದ ವರ್ಷವೇ ಮನವಿ ಮಾಡಲಾಗಿತ್ತು, ಆದರೆ ಇದುವರೆಗೂ ಆಗಿಲ್ಲ, ಈ ವರ್ಷವಾದರೂ ಅರಸು ಅವರು ಹೆಸರನ್ನು ರಸ್ತೆಗೆ ನಾಮಕರಣ ಮಾಡಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಹರೀಶ್, ಹಿಂದುಳಿದ ವರ್ಗಗಳ ಕಲ್ಯಾಣಾಕಾರಿ ತ್ಯಾಗರಾಜು.ಜಿಎಸ್., ಕನಕ ಬ್ಯಾಂಕ್ ಮಾಜಿ ಅಧ್ಯಕ್ಷರು ಹಾಗೂ ನಗರಸಭಾ ಸದಸ್ಯರಾದ ಎಸ್.ಎಲ್.ರಂಗನಾಥ್, ಬಿಇಒ ಸಿ.ಎನ್.ಕೃಷ್ಣಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿ.ಕೆ.ಬಡಿಗೇರ, ನಗರಸಭಾ ಸದಸ್ಯರಾದ ಮಹೇಶ್, ಧ್ರುವಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಡಿ.ವೈ.ಗೋಪಾಲ್, ಮುಖಂಡರಾದ ಹಾರೋಗೆರೆ ಮಾರಣ್ಣ, ಹಾರೋಗೆರೆ ಮಹೇಶ್, ವಿಸ್ತರಣಾಧಿಕಾರಿ ಶಶಿಧರ್, ನಿಲಯ ಪಾಲಕರಾದ ಬಿ.ಎಸ್.ವಿನಾಯಕ, ರಾಜಗೋಪಾಲ.ಆರ್., ಕವಿತ ಆರ್., ನೇತ್ರಾವತಿ ಸೇರಿ ಹಲವರು ಹಾಜರಿದ್ದರು.