ಕೊಪ್ಪಳ: ಮಾಜಿ ಸಿಎಂ ದೇವರಾಜ ಅರಸು ರಾಜ್ಯದಲ್ಲಿ ಐತಿಹಾಸಿಕ ಸುಧಾರಣೆ ತಂದ ಹರಿಕಾರ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ದಿ.ಡಿ.ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಪರಿವರ್ತನೆಯ ಹರಿಕಾರ ದಿ.ಡಿ.ದೇವರಾಜ ಅರಸು ಆಗಿದ್ದಾರೆ. ರಾಜ್ಯದ ಶೋಷಿತರ, ದೀನದಲಿತರ ಮತ್ತು ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಭದ್ರ ಬುನಾದಿ ಹಾಕಿದ ಧೀಮಂತ ನಾಯಕರಾಗಿದ್ದಾರೆ. ಸುದೀರ್ಘ ವರ್ಷಗಳ ಕಾಲ ಆಡಳಿತ ನಡೆಸಿದ ಅರಸು ಐತಿಹಾಸಿಕ ಸುಧಾರಣೆ ತಂದರು. ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಶಕ್ತಿ ತುಂಬಿದರು.`ಉಳುವವನೇ ಭೂಮಿಯ ಒಡೆಯ ಕಾಯ್ದೆಯ ಮೂಲಕ ಸುಮಾರು 21 ಲಕ್ಷಕ್ಕೂ ಹೆಚ್ಚು ಎಕರೆ ಭೂಮಿ ಬಡವರಿಗೆ ಹಂಚಿದ ಕೀರ್ತಿ ಅವರದ್ದಾಗಿದೆ. ರಾಜ್ಯದಲ್ಲಿ ಹಿಂದುಳಿದ ವರ್ಗಗಳ ವಸತಿ ನಿಲಯ ಪ್ರಾರಂಭಿಸಿದ ಹೆಗ್ಗಳಿಕೆ ಸಲ್ಲುತ್ತದೆ. ರಾಜ್ಯದ ಅನೇಕ ಯುವ ನಾಯಕರನ್ನು ಗುರುತಿಸಿ ಮುಖ್ಯವಾಹಿನಿಗೆ ತರುವಲ್ಲಿ ಅರಸು ಪ್ರಮುಖ ಪಾತ್ರ ವಹಿಸಿದ್ದರು ಎಂದರು.

ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಸೌಲಭ್ಯ ಪಡೆದ ವಿದ್ಯಾರ್ಥಿಗಳು ಉತ್ತಮ ಅಂಕ ಹಾಗೂ ಸಾಧನೆಯೊಂದಿಗೆ ತಮ್ಮ ವೃತ್ತಿಜೀವನ ರೂಪಿಸಿಕೊಳ್ಳುವ ಮೂಲಕ ಸಾಮಾಜಿಕ ಪರಿವರ್ತನೆಯ ಹರಿಕಾರ ದಿವಂಗತ ಡಿ. ದೇವರಾಜ ಅರಸು ಅವರಿಗೆ ಗೌರವ ಸಲ್ಲಿಸಬೇಕು. ಹಾಸ್ಟೆಲ್ ಸೌಲಭ್ಯ ಪಡೆದ ವಿದ್ಯಾರ್ಥಿಗಳು ಕೇವಲ ಉತ್ತೀರ್ಣರಾಗುವುದಷ್ಟೇ ಅಲ್ಲದೆ ಸರಾಸರಿಗಿಂತ ಹೆಚ್ಚಿನ ಸಾಧನೆ ಮಾಡಬೇಕು. ಸೌಲಭ್ಯ ಬಳಸಿಕೊಂಡು ಸರಿಯಾಗಿ ಓದದೆ ಹೋದರೆ ಅದು ತಮಗೆ, ಕುಟುಂಬಕ್ಕೆ ಹಾಗೂ ಇಲಾಖೆಗೆ ಮಾಡುವ ಅನ್ಯಾಯವಾಗುತ್ತದೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಜಾರಿಗೆ ತಂದ ಭಾರತ್ ಜೋಡೋ ಯುವಕ ಸಂಘಕ್ಕೆ 16 ರಿಂದ 35 ವರ್ಷದೊಳಗಿನ ಎಲ್ಲ ಯುವಕ-ಯುವತಿಯರು ಕಡ್ಡಾಯವಾಗಿ ಸೇರ್ಪಡೆಗೊಳ್ಳಬೇಕು. ಕೇವಲ ₹10 ನೋಂದಣಿ ಶುಲ್ಕ ಹಾಗೂ ಆಧಾರ್ ಕಾರ್ಡ್ ವಿವರ ನೀಡಿ ಮೊಬೈಲ್ ಆ್ಯಪ್ ಮೂಲಕ ಸುಲಭವಾಗಿ ನೋಂದಣಿ ಮಾಡಿಕೊಳ್ಳಬಹುದು. ಹಾಸ್ಟೆಲ್ ವಾರ್ಡನ್‌ಗಳ ಮೂಲಕ ಎಲ್ಲರೂ ತಪ್ಪದೇ ನೋಂದಣಿ ಮಾಡಿಸಿಕೊಳ್ಳುವಂತೆ ಮತ್ತು ತಮ್ಮ ಸ್ನೇಹಿತರು ಹಾಗೂ ಕುಟುಂಬದ ಯುವಕರನ್ನೂ ಪ್ರೇರೇಪಿಸುವಂತೆ ತಿಳಿಸಿದರು.

ಯಲಬುರ್ಗಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಂಕ್ರಯ್ಯ ಅಬ್ಬಿಗೇರಿಮಠ ಡಿ.ದೇವರಾಜ ಅರಸು ಕುರಿತು ವಿಶೇಷ ಉಪನ್ಯಾಸ ನೀಡಿ, ರಾಜ್ಯದ ದೀನದಲಿತರು, ಹಿಂದುಳಿದ ವರ್ಗಗಳು ಹಾಗೂ ಶೋಷಿತರ ಬದುಕಿನಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಸಿಎಂ ದಿ. ಡಿ. ದೇವರಾಜ ಅರಸು ಚಿಂತನೆಗಳು ಸದಾ ಪ್ರಸ್ತುತವಾಗಿವೆ. ಅವರು 1974ರಲ್ಲಿ ಜಾರಿಗೆ ತಂದ ಭೂಸುಧಾರಣಾ ಕಾಯ್ದೆಯ ಮೂಲಕ ಉಳುವವನೇ ಭೂಮಿಯ ಒಡೆಯ ಪರಿಕಲ್ಪನೆ ಸಾಕಾರಗೊಳಿಸಿ ಲಕ್ಷಾಂತರ ಕೃಷಿ ಕಾರ್ಮಿಕರು ಹಾಗೂ ಗೇಣಿದಾರರಿಗೆ ಭೂಮಿಯ ಹಕ್ಕು ಕೊಡಿಸಿದ್ದರು. ರಾಜ್ಯದಲ್ಲಿ ಜೀತ ಪದ್ಧತಿ ನಿಷೇಧ, ಮಲ ಹೊರುವ ಅನಿಷ್ಟ ಪದ್ಧತಿ ರದ್ಧತಿ, ಬಡವರ ಸಾಲಮನ್ನಾ (ಋಣಮುಕ್ತ ಕಾಯ್ದೆ) ಹಾಗೂ ಬಡ ಕುಟುಂಬಗಳಿಗೆ ಭಾಗ್ಯಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡುವ ಐತಿಹಾಸಿಕ ಕಾರ್ಯಕ್ರಮ ಅರಸು ಜಾರಿಗೆ ತಂದರು ಎಂದರು.


ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ನಾಗಮಣಿ ಹೊಸಮನಿ ಮಾತನಾಡಿ, ಡಿ.ದೇವರಾಜ ಅರಸು 1977 ಹಿಂದುಳಿದ ವರ್ಗಗಳ ಹಾಗೂ ದೀನದಲಿತರ ಅಭಿವೃದ್ಧಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ್ಥಾಪಿಸಿದ್ದು, ಇಂದು ಹೆಮ್ಮರವಾಗಿ ಬೆಳೆದು ಲಕ್ಷಾಂತರ ವಿದ್ಯಾರ್ಥಿಗಳಿಗೆ ವರದಾನವಾಗಿದೆ ಎಂದರು.

ಸಾಧಕರಿಗೆ ಸನ್ಮಾನ: ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಹಾಗೂ ಪದವಿ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದು ಹಿಂದುಳಿದ ವರ್ಗದ ಇಲಾಖೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ, ಉತ್ತಮವಾಗಿ ಕಾರ್ಯ ನಿರ್ವಹಿಸಿದ ವಸತಿ ಶಾಲೆಗಳ/ ವಸತಿ ನಿಲಯಗಳ ಮೇಲ್ವಿಚಾರಕರಿಗೆ ಮತ್ತು ಅಡುಗೆ ಸಿಬ್ಬಂದಿಗಳಿಗೆ ಹಾಗೂ ಡಿ.ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮತ್ತು ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕರಿಗೆ ಸನ್ಮಾನಿಸಲಾಯಿತು.

ನಗರಸಭೆಯ ಮಾಜಿ ಅಧ್ಯಕ್ಷ ಅಮಜ್‌ದ್ ಪಟೇಲ್, ಜಿಪಂ ಯೋಜನಾಧಿಕಾರಿ ಎಸ್.ಎಂ ಕಾಂಬ್ಳೆ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜಪ್ಪ ಸೊಗಲದ, ತಾಪಂ ಇಓ ದುಂಡಪ್ಪ ತುರಾದಿ, ಬಿಇಓ ಹೊರಪೇಟಿ, ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಕೆ.ಎಚ್.ಭೋವಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕಾಧಿಕಾರಿ ನಾಗರತ್ನ ಹಾಗೂ ಶಿವಶಂಕರ ಕರಡಕಲ್, ತಾಲೂಕು ವಿಸ್ತರಣಾಧಿಕಾರಿ ಅಮರೇಶ ಹುಬ್ಬಳ್ಳಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಕಚೇರಿಯ ಮೇಲ್ವಿಚಾರಕಿ ಸುಧಾ ಮುದುಕಣ್ಣನವರ್, ಪತ್ರಾಂಕಿತ ವ್ಯವಸ್ಥಾಪಕಿ ಉಷಾ ಮುಜುಮದಾರ, ಲೆಕ್ಕ ಅಧೀಕ್ಷಕ ರೋಹಿತ್ ಪಾಟೀಲ್, ಪ್ರದಸ ಮನೋಜ್ ಕುಮಾರ್ ಮತ್ತು ವಿರೂಪನಗೌಡ ಇತರರಿದ್ದರು.