ಕನ್ನಡಪ್ರಭ ವಾರ್ತೆ ಹಾಸನ

ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಜನ್ಮದಿನವನ್ನು ಮೇ 18ರಂದು ಹಾಸನ ನಗರದಲ್ಲಿ ಅದ್ಧೂರಿಯಾಗಿ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ ಎಂದು ಕ್ಷೇತ್ರದ ಶಾಸಕ ಎಚ್. ಪಿ. ಸ್ವರೂಪ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ದೇವೇಗೌಡರ ಜನ್ಮದಿನವನ್ನು ಕೇವಲ ರಾಜಕೀಯ ಕಾರ್ಯಕ್ರಮವಾಗಿ ಮಾತ್ರವಲ್ಲದೆ ಸಾಮಾಜಿಕ ಸೇವೆ, ಸರ್ವಧರ್ಮ ಸಾಮರಸ್ಯ ಮತ್ತು ಜನಪರ ಚಟುವಟಿಕೆಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಮೇ 18ರಂದು ಬೆಳಿಗ್ಗೆ ನಗರದ ನೀರುಬಾಗಿಲು ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ದೇವೇಗೌಡರ ಆರೋಗ್ಯ, ದೀರ್ಘಾಯುಷ್ಯ ಹಾಗೂ ರಾಜ್ಯದ ಸುಭೀಕ್ಷತೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ ಎಂದರು. ಬಳಿಕ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ನೆರವೇರಿಸಲಾಗುವುದು. ಧರ್ಮಗಳ ನಡುವೆ ಸಾಮರಸ್ಯ ಹಾಗೂ ಶಾಂತಿಯ ಸಂದೇಶ ಸಾರುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ದೇವೇಗೌಡರು ಸದಾ ಸರ್ವಧರ್ಮ ಸಮಭಾವಕ್ಕೆ ಮಹತ್ವ ನೀಡಿರುವ ನಾಯಕರಾಗಿದ್ದು, ಅವರ ಆದರ್ಶದಂತೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.

ಅನಂತರ ನಗರದ ಎನ್.ಆರ್‌. ವೃತ್ತದಲ್ಲಿ ದೇವೇಗೌಡರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ನೆರವೇರಿಸಲಾಗುವುದು. ಈ ವೇಳೆ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಿದ್ದಾರೆ. ಪಕ್ಷದ ಮುಖಂಡರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.ಸಮಾಜಮುಖಿ ಕಾರ್ಯಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ನಗರದ ಕಾಮಧೇನು ವೃದ್ಧಾಶ್ರಮದಲ್ಲಿ ಹಣ್ಣುಹಂಪಲು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವೃದ್ಧಾಶ್ರಮದಲ್ಲಿರುವ ಹಿರಿಯ ನಾಗರಿಕರೊಂದಿಗೆ ಸಮಯ ಕಳೆಯುವ ಮೂಲಕ ದೇವೇಗೌಡರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಮಾಹಿತಿ ನೀಡಿದರು.

ದೇವೇಗೌಡರು ದೇಶದ ರಾಜಕೀಯ ಇತಿಹಾಸದಲ್ಲಿ ವಿಶಿಷ್ಟ ಛಾಪು ಮೂಡಿಸಿದ ನಾಯಕರಾಗಿದ್ದಾರೆ. ರೈತರ ಸಮಸ್ಯೆ, ಗ್ರಾಮೀಣಾಭಿವೃದ್ಧಿ ಹಾಗೂ ಜನಸಾಮಾನ್ಯರ ಪರ ಹೋರಾಟದ ಮೂಲಕ ಅವರು ಜನಮನ ಗೆದ್ದಿದ್ದಾರೆ. ಅವರ ಸರಳತೆ ಮತ್ತು ಜನಪರ ಆಡಳಿತ ಇಂದಿಗೂ ಅನೇಕರಿಗೆ ಪ್ರೇರಣೆಯಾಗಿದ್ದು, ಅವರ ಜನ್ಮದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸಲು ಅಭಿಮಾನಿಗಳು ಉತ್ಸಾಹದಿಂದ ಸಿದ್ಧತೆ ನಡೆಸಿದ್ದಾರೆ ಎಂದು ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಹಾಸನ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿದರೆಕೆರೆ ಜಯರಾಂ, ಮಾಧ್ಯಮ ವಕ್ತಾರ ಹೊಂಗೆರೆ ರಘು, ಮುಖಂಡರಾದ ಶೇಷಾದ್ರಿ, ಸಮೀರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.