ಕನ್ನಡಪ್ರಭ ವಾರ್ತೆ ಹಾಸನ
ಮಾಜಿ ಪ್ರಧಾನಮಂತ್ರಿ, ಹಾಲಿ ರಾಜ್ಯಸಭಾ ಸದಸ್ಯರು ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ. ದೇವೇಗೌಡಅವರ 94ನೇ ವರ್ಷದ ಹುಟ್ಟುಹಬ್ಬವನ್ನು ಹಾಸನ ನಗರದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಭಕ್ತಿ, ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ನಗರದ ವಿವಿಧ ಭಾಗಗಳಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಶುಭಾಶಯ ಕೋರಿದರು. ಹುಟ್ಟುಹಬ್ಬದ ಅಂಗವಾಗಿ ಬೆಳಗ್ಗಿನಿಂದಲೇ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ನಗರದ ವಿವಿಧ ಭಾಗಗಳಲ್ಲಿ ಜಮಾಯಿಸಿ ಸಂಭ್ರಮಾಚರಣೆ ನಡೆಸಿದರು. ಮೊದಲಿಗೆ ನೀರುಬಾಗಿಲಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅರ್ಚನೆ ನೆರವೇರಿಸಲಾಯಿತು. ದೇವೇಗೌಡರ ಆರೋಗ್ಯ, ಆಯುಷ್ಯ ಹಾಗೂ ಇನ್ನಷ್ಟು ಜನಸೇವೆಗೆ ಶಕ್ತಿ ದೊರಕಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ದೇವಸ್ಥಾನದಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಬಳಿಕ ಆಜಾದ್ ರಸ್ತೆಯಲ್ಲಿರುವ ಹಜರತ್ ಗುಜರಾತಿ ಬಾದ್ ಷಾ (ರ.ಅ) ದರ್ಗಾಕ್ಕೆ ಭೇಟಿ ನೀಡಿದ ಜೆಡಿಎಸ್ ನಾಯಕರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸುವ ದೇವೇಗೌಡರ ವ್ಯಕ್ತಿತ್ವವನ್ನು ಸ್ಮರಿಸಿದ ಮುಖಂಡರು, ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಅವರು ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.ನಂತರ ನಗರದ ಪ್ರಮುಖ ಕೇಂದ್ರವಾದ ಎನ್.ಆರ್ ವೃತ್ತದಲ್ಲಿ ಅಳವಡಿಸಲಾಗಿದ್ದ ಹೆಚ್.ಡಿ. ದೇವೇಗೌಡ ಅವರ 30 ಅಡಿ ಎತ್ತರದ ಭವ್ಯ ಕಟೌಟ್‌ಗೆ ಕ್ಷೀರಾಭಿಷೇಕ ಹಾಗೂ ಪುಷ್ಪಾಭಿಷೇಕ ನೆರವೇರಿಸಲಾಯಿತು. ಶಾಸಕ ಹೆಚ್.ಪಿ. ಸ್ವರೂಪ್, ಮಾಜಿ ಸಚಿವ ಹೆಚ್.ಕೆ. ಕುಮಾರಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್, ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ ಸೇರಿದಂತೆ ಪಕ್ಷದ ಹಲವು ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಕಟೌಟ್‌ಗೆ ಹಾಲಿನ ಅಭಿಷೇಕ ಮಾಡುವ ವೇಳೆ ಕಾರ್ಯಕರ್ತರು `ದೇವೇಗೌಡರಿಗೆ ಜಯವಾಗಲಿ `ರೈತರ ನಾಯಕ ದೇವೇಗೌಡ ಎಂಬ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಪುಷ್ಪಾರ್ಚನೆ, ಸಿಹಿ ವಿತರಣೆ ಹಾಗೂ ಪಟಾಕಿ ಸಿಡಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಬಳಿಕ ಜೆಡಿಎಸ್ ಮುಖಂಡರು ನಗರದ ಗವೇನಹಳ್ಳಿ ಸಮೀಪದ ಕಾಮಧೇನು ಸಹಕಾರಿ ವಿದ್ಯಾಶ್ರಮಕ್ಕೆ ಭೇಟಿ ನೀಡಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದರು. ವೃದ್ಧಾಶ್ರಮದಲ್ಲಿದ್ದ ಹಿರಿಯ ನಾಗರಿಕರಿಗೆ ಹಣ್ಣು ಹಂಪಲು ಹಾಗೂ ಸಿಹಿ ವಿತರಿಸಿ ಆಶೀರ್ವಾದ ಪಡೆದುಕೊಂಡರು. ಹಿರಿಯರೊಂದಿಗೆ ಕೆಲಕಾಲ ಮಾತುಕತೆ ನಡೆಸಿದ ಮುಖಂಡರು, ದೇವೇಗೌಡರು ಸದಾ ಸಮಾಜದ ಬಡವರು, ರೈತರು ಹಾಗೂ ಹಿರಿಯ ನಾಗರಿಕರ ಪರ ಕೆಲಸ ಮಾಡಿದ ನಾಯಕ ಎಂದು ಸ್ಮರಿಸಿದರು.ಈ ಸಂದರ್ಭದಲ್ಲಿ ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಎಂಬ ಸಣ್ಣ ಗ್ರಾಮದಲ್ಲಿ ರೈತ ಕುಟುಂಬದಲ್ಲಿ ಜನಿಸಿದ ಹಯೆಚ್.ಡಿ. ದೇವೇಗೌಡರ ಅವರು ತಮ್ಮ ಪರಿಶ್ರಮ, ರಾಜಕೀಯ ದೂರದೃಷ್ಟಿ ಹಾಗೂ ಜನಪರ ಚಿಂತನೆಯ ಮೂಲಕ ದೇಶದ ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಿದ ಅಪರೂಪದ ಕನ್ನಡಿಗ ಎಂದು ಹೇಳಿದರು. ಪ್ರಾದೇಶಿಕ ಪಕ್ಷ ಕಟ್ಟಿಕೊಂಡು ರಾಜ್ಯ ರಾಜಕೀಯದಿಂದ ರಾಷ್ಟ್ರ ರಾಜಕೀಯದವರೆಗೆ ಬೆಳೆದ ದೇವೇಗೌಡರು ರೈತರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಸಚಿವರಾಗಿ, ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಮಂತ್ರಿಯಾಗಿ ಅವರು ಮಾಡಿದ ಸೇವೆ ಇಂದಿಗೂ ಜನರ ಮನಸ್ಸಿನಲ್ಲಿ ಉಳಿದಿದೆ. ನೀರಾವರಿ ಯೋಜನೆಗಳು, ರೈತರ ಪರ ಯೋಜನೆಗಳು ಹಾಗೂ ಗ್ರಾಮೀಣಾಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದೆ ಎಂದು ಮುಖಂಡರು ಸ್ಮರಿಸಿದರು.ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ರಾಜಕೀಯದಲ್ಲಿ ಸರಳತೆ, ಸೌಜನ್ಯ ಹಾಗೂ ಪ್ರಾಮಾಣಿಕತೆಯನ್ನು ಉಳಿಸಿಕೊಂಡ ಕೆಲವೇ ನಾಯಕರಲ್ಲಿ ದೇವೇಗೌಡರು ಒಬ್ಬರು. ಎಲ್ಲಾ ವರ್ಗದ ಜನರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಅವರು ಸದಾ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ದೇವರು ಇನ್ನಷ್ಟು ಆಯುಷ್ಯ, ಆರೋಗ್ಯ ಹಾಗೂ ಜನಸೇವೆ ಮಾಡುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್ ಮಾತನಾಡಿ, ಕರ್ನಾಟಕದ ವರಪುತ್ರ ಹರದನಹಳ್ಳಿ ದೇವೇಗೌಡರು ಕನ್ನಡಿಗರಾಗಿ ಮೊಟ್ಟ ಮೊದಲ ಬಾರಿಗಹೆ ಕೆಂಪುಕೋಟೆಯಲ್ಲಿ ಕನ್ನಡದ ಬಾವುಟ ಹಾರಿಸಿದರು.ಶತಯುತರಾಗಿ ಅವರ ಮಾರ್ಗದರ್ಶನ ದೇಶಕ್ಕೆ ಲಭಿಸಲಿ ಎಂದರು.ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ ಮಾತನಾಡಿ ,ನಮ್ಮೆಲ್ಲರ ನಾಯಕರಾದ ಎಚ್. ಡಿ. ದೇವೇಗೌಡರು 94ನೇ ಜನ್ಮದಿನವನ್ನು ನಮ್ಮ ಪಕ್ಷದ ಹಾಗೂ ಸಾರ್ವಜನಿಕರು ಸೇರಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಭಗವಂತ ಅವರಿಗೆ ಹೆಚ್ಚಿನ ಆರೋಗ್ಯ, ಆಯಸ್ಸು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ಆಲೂರು ತಾಲೂಕು ಜೆಡಿಎಸ್ ಅಧ್ಯಕ್ಷ ಮಂಜೇಗೌಡ, ಬಿ. ಆರ್. ಸತ್ಯನಾರಾಯಣ್, ವಕೀಲರಾದ ಕೆ. ಆರ್. ಇಂದ್ರಕುಮಾರ್, ಶೇಷಾದ್ರಿ, ಪೂರ್ಣಚಂದ್ರ, ಸುಬ್ಬೇಗೌಡ, ಧರಣಿ, ಯತೀಶ್, ಲೋಕೇಶ್, ಬಿ.ಕೆ. ರುದ್ರಪ್ಪ, ಗೋಪಾಲೇಗೌಡ, ಮಾಧ್ಯಮ ವಕ್ತಾರ ಹೊಂಗೆರೆ ರಘು, ನಗರಸಭೆ ಮಾಜಿ ಅಧ್ಯಕ್ಷ ಸಿ. ಆರ್. ಶಂಕರ್, ಗಿರೀಶ್ ಚನ್ನವೀರಪ್ಪ, ಬಿದರಿಕೆರೆ ಜಯರಾಂ, ಮಹಂತೇಶ್, ಅಕ್ಮಲ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ನಾಗರಾಜು, ದುದ್ದ ಲಕ್ಷ್ಮಣ್, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಸತೀಶ್, ಸ್ವಾಮಿಗೌಡ, ಸಮೀರ್ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.