ಸಾರಾಂಶ
ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗಾಗಿ ಭೂಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ನಡೆಯುತ್ತಿರುವ ರೈತರ ಹೋರಾಟಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ದಳಪತಿಗಳು ಬೆಂಬಲ ನೀಡಲು ಆಗಮಿಸುತ್ತಿದ್ದಾರೆ. ಈ ಮೂಲಕ ಹೋರಾಟದ ಕಿಚ್ಚು ಮತ್ತಷ್ಟು ತೀವ್ರತೆ ಪಡೆದುಕೊಳ್ಳಲಿದೆ.
ಕಳೆದ 13 ದಿನಗಳಿಂದ ಟೌನ್‌ಶಿಪ್ ಯೋಜನೆಗೆ ಭೂಸ್ವಾಧೀನಗೊಳ್ಳಲಿರುವ ಬಿಡದಿ ಹೋಬಳಿ ಕಂಚುಗಾರನಹಳ್ಳಿ ಮತ್ತು ಬೈರಮಂಗಲ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ರೈತರ ಹೋರಾಟಕ್ಕೆ ವಿರೋಧಪಕ್ಷದ ನಾಯಕ ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ, ಸಂಸದ ಡಾ.ಸಿ.ಎನ್. ಮಂಜುನಾಥ್ ಸೇರಿದಂತೆ ಬಿಜೆಪಿ ನಾಯಕರು ಬೆಂಬಲ ನೀಡಿದ್ದು, ಇದೀಗ ಮಾಜಿ ಪ್ರಧಾನಿಗಳು ಆಗಮಿಸುತ್ತಿರುವುದು ಹೋರಾಟದ ಕಾವನ್ನು ಮತ್ತಷ್ಟು ಹೆಚ್ಚಿಸಲಿದೆ.ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಹೋರಾಟಕ್ಕೆ ಕರೆತರುವುದಾಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ, ಮಾಜಿ ಶಾಸಕ ಎ.ಮಂಜುನಾಥ್ ತಿಳಿಸಿದ್ದರು. ಅದರಂತೆ ದೇವೇಗೌಡರು ರೈತರ ಹೋರಾಟದಲ್ಲಿ ಭಾಗಿಯಾಗುವ ಮುಹೂರ್ತ ನಿಗದಿಯಾಗಿದೆ. ಇನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ದೆಹಲಿಯಿಂದಲೇ ವರ್ಚುವಲ್ ಮೂಲಕ ರೈತರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ರೈತರ ಶಕ್ತಿ ಪ್ರದರ್ಶನಕ್ಕೆ ಸಿದ್ದತೆ:ಮಾಜಿಪ್ರಧಾನಿಗಳು ಹೋರಾಟಕ್ಕೆ ಎಂಟ್ರಿ ನೀಡುತ್ತಿರುವ ಸಮಯದಲ್ಲಿ ಶಕ್ತಿಪ್ರದರ್ಶನ ನಡೆಸಲು ಸಿದ್ದತೆ ಮಾಡಲಾಗಿದೆ. ಮಾಜಿ ಪ್ರಧಾನಿ ದೇವೇಗೌಡರನ್ನು ಬೃಹತ್ ಮೆರವಣಿಗೆ ಮೂಲಕ ಹೋರಾಟಕ್ಕೆ ಕರೆತಂದು, ಬೈರಮಂಗಲದ ಪ್ರಮುಖ ವೃತ್ತದಲ್ಲಿ ಬೃಹತ್ ವೇದಿಕೆಯನ್ನು ಸಿದ್ದಪಡಿಸಿ, ಬೈರಮಂಗಲ ಮತ್ತು ಕಂಚುಗಾರನಹಳ್ಳಿ ವ್ಯಾಪ್ತಿಯ 24 ಗ್ರಾಮಗಳಿಂದ ಹೆಚ್ಚು ರೈತರನ್ನು ಸೇರಿಸಲು ಸಿದ್ದತೆ ನಡೆಸಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಖಂಡನಾ ನಿರ್ಣಯಕ್ಕೆ ಕರೆ:ಭೂಸ್ವಾಧೀನದ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ತಮ್ಮ ಹೋರಾಟವನ್ನು ತೀವ್ರಗೊಳಿಸಲು ಸಿದ್ದವಾಗಿದ್ದು, ಸರ್ಕಾರದ ಗಮನಸೆಳೆಯುವ ಉದ್ದೇಶದಿಂದ ಭೂಸ್ವಾಧೀನ ಪ್ರಕ್ರಿಯೆಯ ವಿರುದ್ಧ ಸ್ಥಳೀಯ ಚುನಾಯಿತ ಸಭೆಗಳಲ್ಲಿ ನಿರ್ಣಯ ಕೈಗೊಳ್ಳಲು ತೀರ್ಮಾನಿಸಿದ್ದಾರೆ.
ಈ ಸಂಬಂಧ ಎರಡೂ ಗ್ರಾಪಂ ಚುನಾಯಿತ ಪ್ರತಿನಿಧಿಗಳಿಗೆ, ರೈತರ ಪ್ರಾತಿನಿಧಿಕ ಸಂಸ್ಥೆಗಳಾದ ಹಾಲು ಉತ್ಪಾದಕರ ಸಹಕಾರ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಭೂಸ್ವಾಧಿನದ ವಿರುದ್ಧ ನಿರ್ಣಯ ಕೈಗೊಂಡು ಸರ್ಕಾರಕ್ಕೆ ರವಾನಿಸಲು ಹೋರಾಟ ಸಮಿತಿ ಕರೆನೀಡಿದೆ.ಇನ್ನು ಹೋರಾಟಕ್ಕೆ ರಾಜ್ಯದ ವಿವಿಧ ರೈತನಾಯಕರು, ಭೂಸ್ವಾಧೀನ ನೀತಿಗೆ ವಿರುದ್ಧವಾಗಿರುವ ಚಿಂತಕರು, ಸಾಹಿತಿಗಳು, ಚಿತ್ರನಟರನ್ನು ಆಹ್ವಾನಿಸುವುದು. ಸೇರಿದಂತೆ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಚಳವಳಿಯನ್ನು ತೀವ್ರಗೊಳಿಸಲು ಹೋರಾಟ ಸಮಿತಿ ಸಿದ್ದತೆ ಮಾಡಿಕೊಂಡಿದೆ.
ಪೂಜೆ ಸಲ್ಲಿಸಿ ಪ್ರತಿಜ್ಞೆ :ಭೂಸ್ವಾಧೀನ ಪ್ರಕ್ರಿಯೆಗಾಗಿ ನಡೆಯುತ್ತಿರುವ ಸರ್ವೆ ಕಾರ್ಯಕ್ಕೆ ರೈತರು ಅಡ್ಡಿ ಪಡಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ರೈತರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಈಡು ಗಾಯಿ ಹೊಡೆದು ಭೂಮಿ ನೀಡುವುದಿಲ್ಲ ಎಂದು ಪ್ರತಿಜ್ಞೆ ಕೂಡ ಮಾಡುತ್ತಿದ್ದಾರೆ.
ಕೋಟ್ ...............ಮಾಜಿ ಪ್ರಧಾನಿದೇವೇಗೌಡರ ನೇತೃತ್ವದಲ್ಲಿ ನಿಖಿಲ್ ಕುಮಾರಸ್ವಾಮಿ, ಸುರೇಶ್ ಬಾಬು ಜೆಡಿಎಸ್ ನ ಎಲ್ಲಾ ಹಾಲಿ ಮತ್ತು ಮಾಜಿ ಶಾಸಕರು ಸೆ.28ರಂದು ಬೈರಮಂಗಲಕ್ಕೆ ರೈತರಿಗೆ ಬೆಂಬಲ ಸೂಚಿಸಲು ಬರುತ್ತಿದ್ದಾರೆ.
ಬಿಜೆಪಿ ಹಾಗೂ ಅನೇಕ ಸಂಘಟನೆಗಳು ಬೆಂಬಲ ನೀಡಿವೆ. ಶಾಸಕ ಬಾಲಕೃಷ್ಣರವರು ಜನಪ್ರತಿನಿಧಿಯಾಗಿ ರೈತರನ್ನು ಮಾತನಾಡಿಸಿಲ್ಲ, ಈ ಭಾಗದ ಜನರು ಲೀಡ್ ಕೊಟ್ಟು ಗೆಲ್ಲಿಸಿದ್ದಾರೆ. ಅವರಿಗೆ ಜನರ ಕಷ್ಟ ಕೇಳುವ ಸೌಜನ್ಯ ಇಲ್ಲದ ನಾಲಾಯಕ್ ಪ್ರತಿನಿಧಿ.- ಎ.ಮಂಜುನಾಥ್, ಜಿಲ್ಲಾಧ್ಯಕ್ಷರು, ಜೆಡಿಎಸ್, ಬೆಂ.ದಕ್ಷಿಣ ಜಿಲ್ಲೆ
ಕೋಟ್..............ಭೂಸ್ವಾಧೀನ ಕೈಬಿಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ದೇವೇಗೌಡರು ಹೋರಾಟಕ್ಕೆ ಬರುವುದಾಗಿ ಮಾಜಿ ಶಾಸಕ ಎ.ಮಂಜುನಾಥ್ ನಮಗೆ ತಿಳಿಸಿದ್ದಾರೆ. ಶಾಸಕರು ಯಾವದಿನ ಸಭೆ ಕರೆಯುತ್ತಾರೋ ಅಂದು ಹೋರಾಟ ಸಮಿತಿಯ ಪ್ರಮುಖರು ಹೋಗಿ ನಮ್ಮ ಅಹವಾಲನ್ನು ಸ್ಪಷ್ಟವಾಗಿ ಅವರಿಗೆ ತಿಳಿಸಲು ಸಿದ್ದರಿದ್ದೇವೆ.
- ಪ್ರಕಾಶ್, ಕಾರ್ಯದರ್ಶಿ, ಬೈರಮಂಗಲ-ಕಂಚುಗಾರನಹಳ್ಳಿ ಗ್ರಾಪಂ ರೈತರ ಭೂಹಿತರಕ್ಷಣಾ ಸಂಘ.26ಕೆಆರ್ ಎಂಎನ್ 4.ಜೆಪಿಜಿ
ಬೈರಮಂಗಲ ಗ್ರಾಮದಲ್ಲಿ ರೈತರು ಅಹೋರಾತ್ರಿ ಧರಣಿ ನಡೆಸುತ್ತಿರುವುದು.