ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಎಚ್.ಡಿ.ದೇವೇಗೌಡ ಪಿಎಂ, ಎಚ್.ಡಿ.ಕುಮಾರಸ್ವಾಮಿ ಅವರು ಲಾಟರಿ ಸಿಎಂ ಆಗಿದ್ದಾರೆ ಹೊರತು ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ಶಾಸಕರಲ್ಲ ಎಂದು ಶಾಸಕ ಕೆ.ಎಂ.ಉದಯ್ ನಿಖಿಲ್ ಕುಮಾರಸ್ವಾಮಿಗೆ ತಿರುಗೇಟು ನೀಡಿದರು.ಮಠದ ಹೊನ್ನಾಯಕನಹಳ್ಳಿಯಲ್ಲಿ ಕಾವೇರಿ ನೀರಾವರಿ ನಿಗಮದಿಂದ ಸುಮಾರು 75 ಲಕ್ಷ ರು. ವೆಚ್ಚದಲ್ಲಿ ಹೊನ್ನಾಯಕನಹಳ್ಳಿ- ಹೊಸಹಳ್ಳಿ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಜೆಡಿಎಸ್ ಬಹುಮತ ಪಡೆದು ಅವರು ಪಿಎಂ, ಸಿಎಂ ಹುದ್ದೆ ಅಲಂಕರಿಸಲಿಲ್ಲ. ಕಾಂಗ್ರೆಸ್ ಸಹಾಯ ಪಡೆದು ಆಕಸ್ಮಿಕವಾಗಿ ಲಾಟರಿಯಂತೆ ಪ್ರಧಾನಿ ಹಾಗೂ ಮುಖ್ಯಮಂತ್ರಿಯಾಗಿದ್ದಾರೆ ಎಂದು ಟೀಕಿಸಿದರು.
ಮದ್ದೂರು ಕ್ಷೇತ್ರದಲ್ಲಿ 1300 ಕೋಟಿಗೂ ಅಧಿಕ ಅನುದಾನ ತಂದು ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ತಾಲೂಕಿನ ನೀರಾವರಿ ಯೋಜನೆಗೆ ಸುಮಾರು 600 ಕೋಟಿಗೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ರೈತರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದೇನೆ. ನನ್ನ ಅಭಿವೃದ್ಧಿ ಸಹಿಸದೆ ಕೆಲವರು ಟೀಕೆ ಮಾಡುತ್ತಿದ್ದಾರೆ. ಆದರೆ, ಯಾವುದೇ ಟೀಕೆಗಳಿಗೆ ನಾನು ಹೆದರುವುದಿಲ್ಲ ಎಂದರು.ಸರ್ಕಾರಿ ಶಾಲಾ ಮಕ್ಕಳು ಆಂಗ್ಲ ಭಾಷೆ ಕಲಿಯಬೇಕು. ಇದು ಕೇವಲ ಖಾಸಗಿ ಶಾಲೆಗಳ ಮಕ್ಕಳಿಗೆ ಸೀಮಿತವಾಗಬಾರದು. ಇಂಗ್ಲಿಷ್ ಕಲಿತು ಸರ್ಕಾರಿ ಶಾಲೆ ಮಕ್ಕಳು ಪ್ರಗತಿ ಸಾಧಿಸಲಿ ಎಂದು ಆಶಿಸಿದರು.
ತಾಲೂಕಿನ ಶೈಕ್ಷಣಿಕ ಪ್ರಗತಿ, ಸರ್ಕಾರಿ ಶಾಲೆಗಳ ಉಳಿವಿಗಾಗಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್‌ನಿಂದ ಕಳೆದ 4 ವರ್ಷಗಳಿಂದ ಉಚಿತ ಪಠ್ಯ ಪರಿಕರಗಳು ಬ್ಯಾಗ್ ನೀಡುತ್ತಾ ಬಂದಿದ್ದೇನೆ ಎಂದರು.ಈ ವೇಳೆ ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಮನ್ಮುಲ್ ನಿರ್ದೇಶಕ ಹರೀಶ್‌ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಜಾಪ್ರಿಯ ವೆಂಕಟೇಶ್, ಕಾವೇರಿ ನೀರಾವರಿ ನಿಗಮದ ಎಇಇ ಪ್ರಶಾಂತ್, ಮುಖಂಡರಾದ ಹೊನ್ನಾಯಕನಹಳ್ಳಿ ಮಹೇಂದ್ರ, ವಿಜಯ್ ಕುಮಾರ್, ಪುನೀತ್, ಯೋಗಾನಂದ, ರಾಜಣ್ಣ ,ಅಶೋಕ್, ರಾಮಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.