ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗರ್ವಭಂಗ ಮಾಡಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕರೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಪಕ್ಷಗಳ ಸಮನ್ವಯ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯಂಥ ಜಗಮೆಚ್ಚಿದ ನಾಯಕರ ಬಗ್ಗೆ ಸಿದ್ದರಾಮಯ್ಯ ಲಘುವಾಗಿ ಮಾತನಾಡಿದ್ದಾರೆ.
ಅವರಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕು. ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರಗಳನ್ನು ಗೆಲ್ಲಿಸುವ ಸಾಮರ್ಥ್ಯ ಶಾಸಕ ಜಿ.ಟಿ.ದೇವೇಗೌಡ ಅವರಿಗಿದೆ. ಎರಡು ಕ್ಷೇತ್ರಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ಸಿದ್ದರಾಮಯ್ಯ ಗರ್ವಭಂಗ ಮಾಡಬೇಕು ಎಂದು ಸೂಚಿಸಿದರು.
ಸಿದ್ದರಾಮಯ್ಯ ಅವರ ಗರ್ವಭಂಗ ಆಗಲೇಬೇಕು. ಅವರ ಗರ್ವಭಂಗ ಆಗಬೇಕಾದರೆ ನಾವೆಲ್ಲರೂ ಛಲದಿಂದ ಒಟ್ಟಾಗಿ ಹೋಗಬೇಕು. ಮೈತ್ರಿಯಲ್ಲಿ ಎಲ್ಲಿಯೂ ಒಂದು ಸಣ್ಣ ಸಮಸ್ಯೆಯೂ ಕಾಣಿಸಿಕೊಳ್ಳಬಾರದು.
ದೇಶದ ಪ್ರಧಾನಿ ಬಹಳ ದುರ್ಬಲ ಎಂದು ಭಾವಿಸಿದ್ದಾರೆ. ಪ್ರಧಾನಿ ವಿರುದ್ಧವೇ ನ್ಯಾಯಾಲಯಕ್ಕೆ ಹೋಗಿದ್ದಾರೆ. ಎಂಥ ಜನ ಇವರು ಎಂದು ಕಿಡಿಕಾರಿದರು.
ರೈತರ ಸಾಲದ ಮೇಲೆ ಬಡ್ಡಿ ಮನ್ನ ಮಾಡಿ ಎಂದು ಕೇಳಿದರೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನೋ ಎಂದರು. ಇದೆಲ್ಲಾ ಗೊತ್ತಿದ್ದರೂ ಸಿದ್ದರಾಮಯ್ಯ ಅವರೇ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ. ಆ ಮಹಾನುಭಾವರಿಗೆ ನಮೋ ನಮಃ ಎಂದು ಲೇವಡಿ ಮಾಡಿದರು.
ನನ್ನ ತಲೆ ಎನ್ಸೈಕ್ಲೋಪೀಡಿಯಾ ಇದ್ದಂತೆ. ಯಾವಾಗ, ಏನೆಲ್ಲಾ ಘಟನೆ ನಡೆದಿದೆ ಎಲ್ಲವನ್ನೂ ಹೇಳಬಲ್ಲೆ. ಯಡಿಯೂರಪ್ಪ ಅವರೇ, ನನಗೆ ಎಲ್ಲಾ ಗೊತ್ತು. ತುಮಕೂರಿಗೆ ಕಳುಹಿಸಿ ನನ್ನನ್ನೇ ಸೋಲಿಸಿದರು. ಕಾಂಗ್ರೆಸ್‌ನವರು ಏನು ಮಾಡಿದರು ಎನ್ನುವುದು ಗೊತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಳೆಯದನ್ನು ಮರೆತು ಒಟ್ಟಾಗಿ ಕೆಲಸ: ಈ ಹೊಸ ಮೈತ್ರಿಗೆ ತನ್ನದೇ ಆದ ಸಾಮರ್ಥ್ಯ ಇದೆ. ಪ್ರತಿ ಕ್ಷೇತ್ರಗಳಲ್ಲೂ ಸ್ವಂತ ಬಲ ಇದೆ. ದೇಶದಲ್ಲಿ ಮೋದಿ ಅವರಂತಹ ನಾಯಕ ಮತ್ತೊಬ್ಬರು ಇಲ್ಲ.
ಹೀಗಾಗಿ ನಮ್ಮ ಕಾರ್ಯಕರ್ತರು ಹಳೆಯ ಘಟನೆಗಳನ್ನು ಮರೆತು ಒಟ್ಟಾಗಿ ಕೆಲಸ ಮಾಡಬೇಕು. ಹಲವು ಕ್ಷೇತ್ರಗಳಲ್ಲಿ ನಮ್ಮ ಪರ ವಾತಾವರಣ ಇದೆ. ಸಮಯ ಕಡಿಮೆ ಇದೆ. ಚೆನ್ನಾಗಿ ಕೆಲಸ ಮಾಡಿ ಎಲ್ಲ ಕ್ಷೇತ್ರಗಳನ್ನೂ ಗೆಲ್ಲಿಸಬೇಕು. ಹಳೆಯದನ್ನು ಮರೆತು ಕೆಲಸ ಮಾಡಬೇಕು ಎಂದು ತಿಳಿಸಿದರು.
ಎಐಸಿಸಿಗೆ ರಾಜ್ಯದಿಂದ ಹಣ ಆರೋಪ:ಕಾಂಗ್ರೆಸ್ ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿದೆ. 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಹಣ ಬಲವನ್ನು ನಾವು ಎದುರಿಸಬೇಕಿದೆ. ಹೊರ ರಾಜ್ಯಗಳಿಗೂ ಕಾಂಗ್ರೆಸ್‌ನವರು ಹಣ ಸರಬರಾಜು ಮಾಡುತ್ತಿದ್ದಾರೆ.
ರಾಜಸ್ಥಾನ, ತೆಲಂಗಾಣ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಅಲ್ಲಿಗೆ ರಾಜ್ಯದ ಹಣ ಹೋಗುತ್ತಿದೆ. ಕರ್ನಾಟಕದಿಂದ ಎಐಸಿಸಿಗೆ ಹಣ ಸಂದಾಯವಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಸಿದ್ದರಾಮಯ್ಯ ಅವರು ಜೆಡಿಎಸ್ ಎಲ್ಲಿದೆ ಎನ್ನುತ್ತಾರೆ. ಅವರಿಗೆ ಅಧಿಕಾರದ ಮದ. ಆ ಮದ ಇಳಿಸುವ ಸಾಮರ್ಥ್ಯ 91 ವರ್ಷದ ಈ ದೇವೇಗೌಡನಿಗಿದೆ. ಯಾರ ಭಯಕ್ಕೂ ನಾನು ಅಂಜುವವನಲ್ಲ.- ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ
ಮೈತ್ರಿಯಿಂದ ಕಾಂಗ್ರೆಸ್‌ಗೆ ನಡುಕ: ಎಚ್‌ಡಿಕೆ
ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಆಡಳಿತಾರೂಢ ಕಾಂಗ್ರೆಸ್‌ಗೆ ನಡುಕ ಉಂಟಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇದೇ ವೇಳೆ, ನಾವೂ ಎಲ್ಲಿಯೂ ಮೈಮರೆಯಬಾರದು ಮತ್ತು ಮೈತ್ರಿಗೆ ಧಕ್ಕೆಯಾಗದಂತೆ ಎರಡೂ ಪಕ್ಷಗಳ ಕಾರ್ಯಕರ್ತರು ಒಮ್ಮತವಾಗಿ ಕೆಲಸ ಮಾಡಬೇಕು ಎಂದೂ ಅವರು ಕಿವಿಮಾತು ಹೇಳಿದ್ದಾರೆ.
ಶುಕ್ರವಾರ ನಡೆದ ಬಿಜೆಪಿ-ಜೆಡಿಎಸ್ ಪಕ್ಷಗಳ ಸಮನ್ವಯ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸಚಿವ ಅಮಿತ್ ಶಾ ಅವರ ಮಧ್ಯಸ್ಥಿಕೆಯಿಂದ ಈ ಮೈತ್ರಿಯಾಗಿದೆ.
ಅಭ್ಯರ್ಥಿ ಆಯ್ಕೆಯಲ್ಲಿ ಒಡಕು ಬಂದಿರಬಹುದು. ಅದರಿಂದ ನಾವು ನಿರಾಸೆಗೆ ಒಳಗಾದರೆ ಪಕ್ಷಕ್ಕೆ ಹಿನ್ನಡೆಯಾಗಲಿದೆ. ಕೆಲವೊಂದು ಕ್ಷೇತ್ರಗಳಲ್ಲಿ ಭಿನ್ನಾಭಿಪ್ರಾಯ ಇವೆ. ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.ಹಿಂದೆ ಬಿಎಸ್‌ವೈ ಜತೆ ಉತ್ತಮ ಕೆಲಸ:
ಹಿಂದೆ 2006ರಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ವೇಳೆ ದೇಶಕ್ಕೆ ಮಾದರಿಯಾಗುವ ಆಡಳಿತ ಮಾಡಿದ್ದೇವೆ. ಬಿಜೆಪಿಯ ಅನೇಕ ನಾಯಕರು ನನ್ನ ಮೇಲೆ ಅಪಾರವಾದ ಪ್ರೀತಿ ವಿಶ್ವಾಸ ಇಟ್ಟುಕೊಂಡಿದ್ದಾರೆ.
ಮೈತ್ರಿ ಸಂದರ್ಭದಲ್ಲಿ ದೇವೇಗೌಡರಿಗೆ ಕೆಲವರು ತಪ್ಪು ಮಾಹಿತಿ ನೀಡಿದ್ದರಿಂದ ಸಮಸ್ಯೆಗಳಾದವು. ಆಗಲೇ ನನಗೆ ಬಿಜೆಪಿಯ ಜತೆ ದೀರ್ಘಾವಧಿ ಮೈತ್ರಿಯ ಉದ್ದೇಶ ಇತ್ತು.
ಕಾರಣಾಂತರಗಳಿಂದ ಅದು ಸಾಧ್ಯವಾಗದಿರುವ ಬಗ್ಗೆ ನನಗೆ ಬೇಸರವಿದೆ ಎಂದರು.ಕಳೆದ 2018ರ ಚುನಾವಣೆ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಆಗಬೇಕಿತ್ತು.
ಆಗ ಮೈತ್ರಿ ಆಗಿದ್ದಿದ್ದರೆ ಬಹುಶಃ ಇಂದಿಗೂ ರಾಜ್ಯದಲ್ಲಿ ನಮ್ಮ ಮೈತ್ರಿ ಸರ್ಕಾರವೇ ಇರುತ್ತಿತ್ತು. ವಿಧಿಯಾಟ, ಅಂದು ಏನೋ ನಡೆದು ಹೋಗಿದೆ. ನಮ್ಮಲ್ಲಿದ್ದ ಒಡಕುಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಹೇಳಿದರು.
ಉಭಯ ಪಕ್ಷಗಳ ಸಮನ್ವಯತೆಯನ್ನು ಬೂತ್ ಮಟ್ಟದಿಂದ ಬಲಪಡಿಸಿಕೊಳ್ಳಬೇಕು. ಇವತ್ತಿನ ಮೈತ್ರಿಗೆ ಈ ಚುನಾವಣೆ ಮೂಲಕ ಭದ್ರ ಬುನಾದಿ ಹಾಕಿದರೆ ಭವಿಷ್ಯದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಇಲ್ಲದಂತೆ ಮಾಡಬಹುದು.
ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದಾಗಿ ಎಲ್ಲರೂ ಭಾವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮಲ್ಲಿನ ವಿಶ್ವಾಸಕ್ಕೆ ಕಿಂಚಿತ್ತೂ ವ್ಯತ್ಯಾಸವಾಗಬಾರದು.
ಏನೇ ಸಮಸ್ಯೆಗಳಿದ್ದರೂ ನಮ್ಮ ಗಮನಕ್ಕೆ ತರಬೇಕು. ಯಾರೂ ವೈಯಕ್ತಿಕ ಪ್ರತಿಷ್ಠೆಗೆ ಬೀಳುವುದು ಬೇಡ. ಈ ಮೈತ್ರಿ ನಾವು ಅಧಿಕಾರಕ್ಕಾಗಿ ಅಲ್ಲ, ರಾಜ್ಯದ ಅಭಿವೃದ್ಧಿಗಾಗಿ ಎಂದರು.