ಇತಿಹಾಸ ಉಳಿಸಲು ಇತಿಹಾಸದ ದಾಖಲೆಗಳು ಬಹಳ ಮುಖ್ಯ. ದಾಖಲೆಗಳು ಇಲ್ಲವಾದರೆ ಇತಿಹಾಸವನ್ನು ತಿಳಿಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಐತಿಹಾಸಿಕ ಇತಿಹಾಸ ತಿಳಿದು ದಾಖಲೆಗಳನ್ನು ಕ್ರೂಢೀಕರಿಸಿ ಮುಂದಿನ ಪೀಳಿಗೆಗೆ ಒದಗಿಸಲು ನೆರವಾಗಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಇತಿಹಾಸ ತಿಳಿದುಕೊಳ್ಳುವ ಜೊತೆಗೆ ವಿದ್ಯಾರ್ಥಿಗಳು ಇತಿಹಾಸದ ದಾಖಲೆಗಳನ್ನು ಕಲೆಹಾಕುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಮಂಡ್ಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಹೇಳಿದರು.ನಗರದ ಮಹಿಳಾ ಸರ್ಕಾರಿ ಕಾಲೇಜಿನ (ಸ್ವಾಯತ್ತ), ಸಭಾಂಗಣದಲ್ಲಿ ರಾಜ್ಯ ಪತ್ರಾಗಾರ ಇಲಾಖೆ, ವಿಭಾಗೀಯ ಪತ್ರಾಗಾರ ಕಚೇರಿ, ಮೈಸೂರು ಹಾಗೂ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಐತಿಹಾಸಿಕ ದಾಖಲೆಗಳ ಮತ್ತು ಛಾಯಾ ಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಇತಿಹಾಸ ಉಳಿಸಲು ಇತಿಹಾಸದ ದಾಖಲೆಗಳು ಬಹಳ ಮುಖ್ಯ. ದಾಖಲೆಗಳು ಇಲ್ಲವಾದರೆ ಇತಿಹಾಸವನ್ನು ತಿಳಿಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಐತಿಹಾಸಿಕ ಇತಿಹಾಸ ತಿಳಿದು ದಾಖಲೆಗಳನ್ನು ಕ್ರೂಢೀಕರಿಸಿ ಮುಂದಿನ ಪೀಳಿಗೆಗೆ ಒದಗಿಸಲು ನೆರವಾಗಬೇಕು ಎಂದರು.ಇತಿಹಾಸಕ್ಕೆ ಸಂಬಂಧಪಟ್ಟ ಪ್ರತಿಯೊಂದು ಕಾರ್ಯಕ್ರಮಗಳು ಅರ್ಥಗರ್ಭಿತವಾಗಿದೆ. ಐತಿಹಾಸಿಕ ದಾಖಲೆಗಳ ಮತ್ತು ಛಾಯಾ ಚಿತ್ರ ಪ್ರದರ್ಶನ ಕಾರ್ಯಕ್ರಮ ಸದುಪಯೋಗ ಪಡೆದುಕೊಂಡು ಮಂಡ್ಯದ ಐತಿಹಾಸಿಕ ಇತಿಹಾಸ, ವಿಶ್ವ ವಿದ್ಯಾಲಯದ ಇತಿಹಾಸ, ಪರಂಪರೆ ಹಾಗೂ ಮೈಸೂರು ಸಂಸ್ಥಾನದ ಇತಿಹಾಸ ತಿಳಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಭಾರತದ ಸಂಸ್ಕೃತಿ, ಇತಿಹಾಸ, ಸಂಪ್ರದಾಯ ಬಹಳ ವಿಶಿಷ್ಟವಾದದ್ದು. ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಮೈಸೂರಿನ ಸಂಸ್ಕೃತಿ ಪ್ರಸಿದ್ಧವಾದದ್ದು. ಆದರೆ, ಪ್ರಸ್ತುತ ಪೀಳಿಗೆಗಳು ತಮ್ಮ ದೇಶದ ಸಂಸ್ಕೃತಿಯನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿ, ಆಚಾರ-ವಿಚಾರದ ಕಡೆಗೆ ಗಮನ ಗಮನ ಹರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಬೇರೆ ದೇಶದ ಪ್ರವಾಸಿಗರು ನಮ್ಮ ದೇಶದ ಸಂಸ್ಕೃತಿಗೆ ಮಾರು ಹೋಗುತ್ತಿರುವಾಗ ಭಾರದ ನಿವಾಸಿಗಳು ನಮ್ಮ ದೇಶದ ಸಂಸ್ಕೃತಿಯನ್ನು ಮರೆಯುತ್ತಿರುವುದು ಸಮಂಜಸವಲ್ಲ. ಪಾಶ್ಚಿಮಾತ್ಯ ಭಾಷೆ ಕಲಿಯಿರಿ. ಆದರೆ, ನಿಮ್ಮ ದೇಶದ ಇತಿಹಾಸ, ಸಂಸ್ಕೃತಿ ಮರೆಯದಿರಿ ಎಂದರು.
ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಇತಿಹಾಸವಿರುತ್ತದೆ. ವಿದ್ಯಾರ್ಥಿಗಳಾಗಿ ಜೀವನ ಮೌಲ್ಯಗಳನ್ನು ತಿಳಿದು ಮುಂದಿನ ನಿಮ್ಮ ಜೀವನದ ಇತಿಹಾಸವನ್ನು ನೀವೇ ಸೃಷ್ಟಿಸಬೇಕು. ಶಿಕ್ಷಣದಿಂದ ಅನೇಕ ವೇದಿಕೆ ಮತ್ತು ಅವಕಾಶಗಳು ದೊರೆಯುತ್ತದೆ. ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನವಹಿಸಿ ಹಾಗೂ ಅಂಕ ಗಳಿಸುವಜತೆಗೆ ಪುಸ್ತಕಗಳನ್ನು ಓದುವ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.ರಾಜ್ಯ ಪತ್ರಾಗಾರ ಇಲಾಖೆ ನಿರ್ದೇಶಕ ಡಾ.ಗವಿಸಿದ್ದಯ್ಯ ಮಾತನಾಡಿ, ದಾಖಲೆಗಳು ಕೇವಲ ಇತಿಹಾಸ ವಿದ್ಯಾರ್ಥಿಗಳಿಗೆ ಸೀಮಿತವಾದದಲ್ಲ. ಪ್ರತಿಯೊಬ್ಬರಿಗೂ ವೈಯಕ್ತಿಕ ಹಾಗೂ ಶಿಕ್ಷಣಕ್ಕಾಗಿ ದಾಖಲೆಗಳ ಅವಶ್ಯಕತೆ ಇದೆ. ದಾಖಲೆ ಕಳೆದುಕೊಂಡರೆ ಇತಿಹಾಸ ಕಳೆದುಕೊಂಡಂತೆ ಹಾಗೂ ದಾಖಲೆಗಳಿಂದ ಕಳೆದು ಹೋದ ಇತಿಹಾಸವನ್ನು ಮರು ಸೃಷ್ಟಿಸಬಹುದು ಎಂದು ಇತಿಹಾಸದ ದಾಖಲೆಗಳ ಮಹತ್ವವನ್ನು ತಿಳಿಸಿದರು.
ಇತಿಹಾಸ ಕೇವಲ ಮರಣ ಹೊಂದಿದವರ ಕಥೆಯೆಂದು ಭಾವಿಸದೆ ಜೀವಂತ ಪ್ರವಾಸ ಎಂದು ತಿಳಿಯಿರಿ. ಇತಿಹಾಸ ಎಷ್ಟು ಓದಿದರೂ ಮುಗಿಯದೆ ಇರುವಂತಹದ್ದು ಹಾಗೂ ಇತಿಹಾಸ ಓದಿದ ಅನೇಕರು ಸರ್ಕಾರಿ ನೌಕರರಾಗಿದ್ದಾರೆ. ಪ್ರತಿಯೊಬ್ಬರೂ ಇತಿಹಾಸವನ್ನು ಅರಿತುಕೊಳ್ಳಬೇಕು ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಇದೇ ವೇಳೆ ಮಹಿಳಾ ಸರ್ಕಾರಿ ಕಾಲೇಜಿನ (ಸ್ವಾಯತ್ತ) ಪ್ರಾಂಶುಪಾಲರಾದ ಪ್ರೊ.ಗುರುರಾಜ್ ಪ್ರಭು ಕೆ, ಮೈಸೂರು ವಿಭಾಗೀಯ ಪತ್ರಾಗಾರ ಕಚೇರಿ ಉಪ ನಿರ್ದೇಶಕ ಮಂಜುನಾಥ ಎಚ್.ಎಲ್, ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣಗೌಡ ಎಚ್, ಸಹ ಪ್ರಾಧ್ಯಾಪಕರಾದ ಡಾ.ಶಿವರಾಮು ಎಸ್.ಡಾ.ಕವಿತ ಹಾಗೂ ಕೆ.ಎಂ.ಶಾಂತರಾಜು ಟಿ.ಎನ್ ಸೇರಿದಂತೆ ಇನ್ನಿತರರು ಹಾಜರಿದ್ದರು.