ಆಲಿಸುವ, ಚರ್ಚಿಸುವ ಮನೋಭಾವ ಬೆಳೆಸಿಕೊಳ್ಳಿ: ಡಾ.ಎನ್.ಪಿ. ನಾರಾಯಣ ಶೆಟ್ಟಿ

| Published : Dec 05 2024, 12:33 AM IST

ಸಾರಾಂಶ

ಪತ್ರಿಕೋದ್ಯಮದಲ್ಲಿ ಯಶಸ್ಸು ಕಾಣಲು ಸಂಯಮದಿಂದ ಆಲಿಸುವ ಮನೋಭಾವ ಬಹುಮುಖ್ಯ. ಯಾವುದೇ ಕಾರ್ಯಕ್ರಮ ಯೋಜಿಸುವ ಮೊದಲು ಸಾಕಷ್ಟು ಚರ್ಚೆ ನಡೆಸಬೇಕು. ಹಿರಿಯರು- ಕಿರಿಯರು ಎನ್ನದೆ ಸಲಹೆ ಸೂಚನೆಗಳನ್ನು ಸ್ವೀಕರಿಸಿಕೊಂಡು ನಿರ್ಧಾರಕ್ಕೆ ಬರಬೇಕು ಎಂದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಆಲಿಸುವ ಹಾಗೂ ಚರ್ಚಿಸಿ ನಿರ್ಧರಿಸುವ ಮನೋಭಾವವೇ ಯಶಸ್ಸು ಕಾಣುವ ಮಾರ್ಗ ಎಂದು ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುಲಸಚಿವ (ಮೌಲ್ಯಮಾಪನ) ಡಾ.ಎನ್.ಪಿ. ನಾರಾಯಣ ಶೆಟ್ಟಿ ಹೇಳಿದರು.

ಆಳ್ವಾಸ್ (ಸ್ವಾಯತ್ತ) ಕಾಲೇಜಿನಲ್ಲಿ ಮಂಗಳವಾರ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ‘ಅಭಿವ್ಯಕ್ತಿ’ ವಿದ್ಯಾರ್ಥಿ ವೇದಿಕೆಯ ಶೈಕ್ಷಣಿಕ ವರ್ಷದ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪತ್ರಿಕೋದ್ಯಮದಲ್ಲಿ ಯಶಸ್ಸು ಕಾಣಲು ಸಂಯಮದಿಂದ ಆಲಿಸುವ ಮನೋಭಾವ ಬಹುಮುಖ್ಯ. ಯಾವುದೇ ಕಾರ್ಯಕ್ರಮ ಯೋಜಿಸುವ ಮೊದಲು ಸಾಕಷ್ಟು ಚರ್ಚೆ ನಡೆಸಬೇಕು. ಹಿರಿಯರು- ಕಿರಿಯರು ಎನ್ನದೆ ಸಲಹೆ ಸೂಚನೆಗಳನ್ನು ಸ್ವೀಕರಿಸಿಕೊಂಡು ನಿರ್ಧಾರಕ್ಕೆ ಬರಬೇಕು ಎಂದರು. ಭಾಷೆಯ ಮೇಲಿನ ಹಿಡಿತ ಹಾಗೂ ತಂತ್ರಜ್ಞಾನದ ಸ್ಪರ್ಶ ಇಂದಿನ ಮಾಧ್ಯಮ ಜಗತ್ತಿಗೆ ಅನಿವಾರ್ಯ ಎಂದ ಅವರು, ಜ್ಞಾನ ಮತ್ತು ಅಭಿವ್ಯಕ್ತಿ ಪತ್ರಿಕೋದ್ಯಮದ ಎರಡು ಕಣ್ಣುಗಳು ಎಂದರು.

ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿದರು. ವಿಭಾಗ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ವಿದ್ಯಾರ್ಥಿ ಸಂಯೋಜಕ ರುಧೀರ್ ವಾರ್ಷಿಕ ವರದಿ ವಾಚಿಸಿದರು. ವಿನೀತ್ ಮುಂದಿನ ಕಾರ್ಯ ಯೋಜನೆಗಳನ್ನು ತಿಳಿಸಿದರು. ನೂತನ ವರ್ಷದ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ವೇದಿಕೆ ಖಜಾಂಚಿ ವೀಕ್ಷಿತಾ ವಿ. ನಿರೂಪಿಸಿದರು. ಉಪ ಸಂಯೋಜಕಿ ಪ್ರೇರಣಾ ಇದ್ದರು.