ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಸಮಾಜದಲ್ಲಿ ಕಿತ್ತು ತಿನ್ನುವುದನ್ನು ಬಿಟ್ಟು ಹಂಚಿ ತಿನ್ನುವ ಮನೋಭಾವ ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಾ.ಸಿ.ಎನ್.ಮಂಜುನಾಥ್ ಸೋಮವಾರ ಹೇಳಿದರು.ಪಟ್ಟಣದ ಶಿವಪುರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಅಂತಾರಾಷ್ಟ್ರೀಯ ಅಲೈಯನ್ಸ್ ಸಂಸ್ಥೆ ಜಿಲ್ಲೆ 268 ಎಸ್, ನೂತನ ಸಂಪುಟ ಸದಸ್ಯರ ದಾಯತ್ವ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮನುಷ್ಯನಲ್ಲಿ ಸ್ವಾರ್ಥ ಮನೋಭಾವ ಹೆಚ್ಚಾಗುತ್ತಿದೆ. ಸಂಪತ್ತೆಲ್ಲ ಒಂದೆಡೆ ಕೇಂದ್ರೀಕೃತವಾಗುತ್ತಿದೆ. ಅದು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾದಾಗ ಮಾತ್ರ ಎಲ್ಲರೂ ಸಾಮರಸ್ಯದಿಂದ ಸಹ ಬಾಳ್ವೆ ನಡೆಸಲು ಸಾಧ್ಯ ಎಂದರು.
ದೇಶದಲ್ಲಿ ಜನಸಂಖ್ಯೆ ಹೆಚ್ಚಳವಾದರೆ ಪ್ರಯೋಜನವಿಲ್ಲ. ಮನುಷ್ಯ ಮತ್ತು ಮನುಷ್ಯ ನಡುವೆ ಸಹಕಾರ ಮನೋಭಾವ ಹೆಚ್ಚಳವಾಗಬೇಕು. ಆಗ ಮಾತ್ರ ಸ್ವಾರ್ಥ ಕಡಿಮೆಯಾಗುತ್ತದೆ ಎಂದರು.ಆಧುನಿಕತೆ ಮತ್ತು ಗಣಕೀಕೃತ ಕಾಲಘಟ್ಟದಿಂದ ಇಂದು ಅವಿಭಾಜ್ಯ ಕುಟುಂಬಗಳು ಒಡೆದು ಹೋಗುತ್ತಿವೆ. ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ಇದ್ದು ಜೀವನ ಕಳೆಯಬೇಕಾದ ವೃದ್ಧ ತಂದೆ ತಾಯಿಗಳ ಪರಿಸ್ಥಿತಿ ವಿಷಮ ಸ್ಥಿತಿಗೆ ಬಂದು ನಿಂತಿದ್ದು, ವೃದ್ಧಾಶ್ರಮದತ್ತ ಮುಖ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.
ಭಾರತದಲ್ಲಿ ಶೇ.60ರಷ್ಟು ಸಾವುಗಳು ಬದಲಾದ ಜೀವನ ಶೈಲಿಯಿಂದ ಸಂಭವಿಸುತ್ತಿವೆ. ದೇಹವನ್ನು ದಂಡಿಸುವರ ಸಂಖ್ಯೆ ಕಡಿಮೆಯಾಗಿ ಮೊಬೈಲ್ ಫೋನ್ ಬಳಕೆ ಹೆಚ್ಚಳದಿಂದ ತಮಗೆ ಅರಿವಿಲ್ಲದಂತೆ ಒಂಟಿತನಕ್ಕೆ ಮಾರು ಹೋಗಿ ಹೃದಯಾಘಾತ, ಅತಿಯಾದ ರಕ್ತದೊತ್ತಡ, ಮಧುಮೇಹ ಮತ್ತು ಕ್ಯಾನ್ಸರ್ ನಂತಹ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ಅಲಯನ್ಸ್ ನಂತಹ ಸಮಾಜ ಸೇವಾ ಸಂಸ್ಥೆಗಳು ಪರಿಸರದ ಅಭಿವೃದ್ಧಿ ಜೊತೆಗೆ ವೃದ್ಧರು, ಆರ್ಥಿಕವಾಗಿ ಹಿಂದುಳಿದವರ ನೆರವಿಗೆ ಧಾವಿಸುವುದರ ಜೊತೆಗೆ ಯುವಕರಿಗೆ ಆರೋಗ್ಯ ಶಿಕ್ಷಣ ನೀಡಲು ಚಿಂತನೆ ನಡೆಸಬೇಕು ಅವರುಗಳು ದುಶ್ಚಟಗಳಿಂದ ದೂರ ಇರುವಂತಹ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲು ಹೆಚ್ಚು ಒತ್ತು ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಅಲೈ ಅಂತಾರಾಷ್ಟ್ರೀಯ ಅಧ್ಯಕ್ಷ ರಾಜಕುಮಾರ್ ಸಕ್ಸೆನಾ ನೂತನ ಸಂಪುಟ ಸದಸ್ಯರ ದಾಯತ್ವ ನೆರವೇರಿಸಿದರು. ಚಲನಚಿತ್ರ ಸಂಗೀತ ನಿರ್ದೇಶಕ ವಿ.ಮನೋಹರ್, ಅಲಯನ್ಸ್ ಸಂಸ್ಥೆ ಅಂತಾರಾಷ್ಟ್ರೀಯ ನಿರ್ದೇಶಕ ಡಾ.ನಾಗರಾಜ ಬೈರಿ, ನಿಕಟ ಪೂರ್ವ ನಿರ್ದೇಶಕ ಜಿ.ಪಿ.ದಿವಾಕರ್, ಜಂಟಿ ಖಜಾಂಚಿ ಅಜಂತಾ ರಂಗಸ್ವಾಮಿ, ಸಮಿತಿ ಅಧ್ಯಕ್ಷ ಕೆ.ಎಂ.ಮುನಿಯಪ್ಪ, ಸಂಸ್ಥೆ ಜಿಲ್ಲಾ ರಾಜ್ಯಪಾಲ ಎಚ್.ಮಾದೇಗೌಡ, ಕೆ.ಟಿ.ಹನುಮಂತು, ಕೆ.ಆರ್.ಶಶಿಧರ ಈಚೆಗೆರೆ, ಕೆ.ಎಸ್. ಚಂದ್ರಶೇಖರ, ವಿ.ಎಸ್.ನಾಗರಾಜು , ಆರ್.ಮಹೇಶ್, ವೈ.ಹೆಚ್.ರತ್ನಮ್ಮ, ಅಪ್ಪಾಜಿ, ಎಂ.ಎನ್.ಶಿವಣ್ಣ, ಎಂ.ಮಹೇಶ. ಡಿ.ಕೆ.ಪ್ರಭಾಕರ್, ರಕ್ಷಿತ್ ರಾಜು, ಸಂಸ್ಥೆ ಪದಾಧಿಕಾರಿಗಳು ಭಾಗವಹಿಸಿದ್ದರು.ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವಿಗೆ ಧಾವಿಸಿ: ವಿ.ಮನೋಹರ್ಕನ್ನಡಪ್ರಭ ವಾರ್ತೆ ಮದ್ದೂರು
ಚಿತ್ರ ನಿರ್ಮಾಪಕರುಗಳು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರ ನೆರವಿಗೆ ಧಾವಿಸಬೇಕು ಎಂದು ಸಂಗೀತ ನಿರ್ದೇಶಕ ಚಲನಚಿತ್ರ ವಿ.ಮನೋಹರ್ ಮನವಿ ಮಾಡಿದರು.ಪಟ್ಟಣದ ಶಿವಪುರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಅಲೆಯನ್ಸ್ ಸಂಸ್ಥೆ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದ ಬ್ಯಾಂಕ್ ಜನಾರ್ಧನ್ ನಿಧನಕ್ಕೆ ಕಂಬನಿ ಮಿಡಿದರು.
ಕಲಾವಿದರು ತಮ್ಮ ದುಡಿಮೆಯಲ್ಲಿ ಗಳಿಸಿದ ಸ್ವಲ್ಪ ಹಣವನ್ನು ಕೂಡಿಡುವ ಕೆಲಸ ಮಾಡಬೇಕು. ಇದು ಅವರ ಸಂಕಷ್ಟ ಕಾಲದಲ್ಲಿ ನೆರವಾಗುತ್ತದೆ. ದೊಡ್ಡ ಕಲಾವಿದರುಗಳು ಮತ್ತು ನಿರ್ಮಾಪಕರು ಅನಾರೋಗ್ಯ ಅಥವಾ ಆರ್ಥಿಕ ಸಂಕಷ್ಟದಲ್ಲಿ ಇರುವ ಕಲಾವಿದರ ನೆರವಿಗೆ ದಾವಿಸಬೇಕು ಎಂದು ಸಲಹೆ ನೀಡಿದರು.ಹಾಸ್ಯವನ್ನೇ ತನ್ನ ಉಸಿರಾಗಿಸಿಕೊಂಡಿದ್ದ ಬ್ಯಾಂಕ್ ಜನಾರ್ಧನ್ ಕನ್ನಡ ಚಲನಚಿತ್ರರಂಗದಲ್ಲಿ ತಮ್ಮ ಅದ್ಭುತ ಹಾಸ್ಯದ ಮೂಲಕ ಖ್ಯಾತಿಗಳಿಸಿದ್ದರು. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))