ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಪ್ರತ್ಯೇಕ ಪಾಲಿಕೆ ರಚಿಸುವ ಬದಲು, ಎರಡೂ ನಗರಗಳನ್ನು ಒಗ್ಗೂಡಿಸಿ ಮೆಟ್ರೋಪಾಲಿಟನ್ ನಗರವಾಗಿ ಅಭಿವೃದ್ಧಿ ಪಡಿಸಬೇಕು ಎಂದು ಹು-ಧಾ ಮೆಟ್ರೋಪಾಲಿಟನ್ ಸಿಟಿ ವೇದಿಕೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಮುಖ್ಯ ವಕ್ತಾರ ಸಂತೋಷ ನರಗುಂದ, ವೇದಿಕೆಯ ಸಂಯೋಜಕ ಹಾಗೂ ವಕೀಲ ಅರುಣ ಚರಂತಿಮಠ ಮಾತನಾಡಿ, ಪ್ರತ್ಯೇಕ ಪಾಲಿಕೆ ಕುರಿತ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ರಾಜ್ಯ ಸರ್ಕಾರ ತಜ್ಞರ ಸಮಿತಿ ರಚಿಸಿ ಸಮಗ್ರ ಅಧ್ಯಯನ ನಡೆಸಬೇಕು ಎಂದು ಆಗ್ರಹಿಸಿದರು.ವಿಭಜನೆಯಿಂದ ಹಿನ್ನೆಡೆ:
ಹು-ಧಾ ಕಳೆದ 6 ದಶಕಗಳಿಂದ ಒಂದೇ ಮಹಾನಗರವಾಗಿ ಬೆಳೆದು ಕರ್ನಾಟಕದ 2ನೇ ಅತಿ ದೊಡ್ಡ ನಗರ ಎಂಬ ಹೆಗ್ಗಳಿಕೆ ಪಡೆದಿದೆ. ಇಂತಹ ಸಂದರ್ಭದಲ್ಲಿ ವಿಭಜನೆ ಮಾಡುವುದರಿಂದ ಭವಿಷ್ಯದಲ್ಲಿ ನಗರಕ್ಕೆ ಸಿಗಬಹುದಾದ ಮೆಟ್ರೋಪಾಲಿಟನ್ ಸ್ಥಾನಮಾನ ಹಾಗೂ ಅದರೊಂದಿಗೆ ದೊರೆಯುವ ಕೇಂದ್ರ ಸರ್ಕಾರದ ವಿಶೇಷ ಅನುದಾನ, ಮೂಲಸೌಕರ್ಯ ಅಭಿವೃದ್ಧಿ, ಕೈಗಾರಿಕಾ ಹೂಡಿಕೆ ಮತ್ತು ಉದ್ಯೋಗಾವಕಾಶಗಳಿಗೆ ಹಿನ್ನಡೆಯಾಗಲಿದೆ ಎಂದು ಎಚ್ಚರಿಸಿದರು.ಅವಕಾಶ ವಂಚಿತ
2021ರ ಜನಗಣತಿ ವಿಳಂಬವಾದ ಕಾರಣ ಮೆಟ್ರೋಪಾಲಿಟನ್ ಸ್ಥಾನಮಾನ ಪ್ರಕ್ರಿಯೆ ಮುಂದೂಡಿಕೆಯಾಗಿದೆ. 2027ರ ಜನಗಣತಿ ಫಲಿತಾಂಶದ ಬಳಿಕ ಹು-ಧಾ "ಮಿಲಿಯನ್ ಪ್ಲಸ್ ಸಿಟಿ " ಆಗುವ ಅವಕಾಶವಿದ್ದು, ಈ ಸಂದರ್ಭದಲ್ಲಿ ನಗರವನ್ನು ವಿಭಜಿಸುವುದು ಅಭಿವೃದ್ಧಿಯ ಅವಕಾಶ ಕಳೆದುಕೊಳ್ಳುವಂತಾಗಲಿದೆ ಎಂದರು.
ಜಾಗೃತಿ ಕಾರ್ಯ
ಪ್ರತ್ಯೇಕ ಪಾಲಿಕೆ ಬೇಡಿಕೆ ಕುರಿತು ಜನರಲ್ಲಿ ಸರಿಯಾದ ಮಾಹಿತಿ ಇಲ್ಲ. ಆದ್ದರಿಂದ ಧಾರವಾಡದ ಸುಭಾಷ್ ರಸ್ತೆ, ಗಾಂಧಿ ಚೌಕ್, ಮಾರುಕಟ್ಟೆ, ಕಾಲೇಜುಗಳು, ಬಡಾವಣೆಗಳು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕರಪತ್ರಗಳನ್ನು ಹಂಚಿ ಜನಜಾಗೃತಿ ಅಭಿಯಾನ ನಡೆಸಲಾಗುವುದು. ಮನೆ ಮನೆಗೆ ತೆರಳಿ ವ್ಯಾಪಾರಸ್ಥರು, ನಾಗರಿಕರು ಹಾಗೂ ವಿವಿಧ ಸಂಘಟನೆಗಳಿಗೆ ಮೆಟ್ರೋಪಾಲಿಟನ್ ನಗರದ ಪ್ರಯೋಜನಗಳನ್ನು ವಿವರಿಸಲಾಗುವುದು ಎಂದು ಸಂತೋಷ ನರಗುಂದ ತಿಳಿಸಿದರು.ಪ್ರತ್ಯೇಕ ಪಾಲಿಕೆಯಿಂದ ಸರ್ಕಾರಿ, ಅರೆ ಸರ್ಕಾರಿ, ಬ್ಯಾಂಕ್ ಹಾಗೂ ಶಿಕ್ಷಣ ಇಲಾಖೆಯ ನೌಕರರ ಮನೆಬಾಡಿಗೆ ಭತ್ಯೆ (ಎಚ್‌ಆರ್‌ಎ) ಕಡಿಮೆಯಾಗುವ ಸಾಧ್ಯತೆ ಇದ್ದು, ಅದರ ಪರಿಣಾಮ ಧಾರವಾಡದ ಆರ್ಥಿಕ ಚಟುವಟಿಕೆ ಮತ್ತು ವ್ಯಾಪಾರ ವಹಿವಾಟಿನ ಮೇಲೂ ಬೀಳಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ವಿಭಜಿಸಬೇಡಿಅರುಣ ಚರಂತಿಮಠ ಮಾತನಾಡಿ, ಬೆಂಗಳೂರು ಹೊರತಾಗಿ ಮತ್ತಷ್ಟು ಬೆಂಗಳೂರುಗಳನ್ನು ನಿರ್ಮಿಸುತ್ತೇವೆ ಎಂಬ ರಾಜ್ಯ ಸರ್ಕಾರದ ಘೋಷಣೆಯ ಮೊದಲ ಆದ್ಯತೆ ಹುಬ್ಬಳ್ಳಿ-ಧಾರವಾಡಕ್ಕೆ ಸಿಗಬೇಕು. ಶಿಕ್ಷಣ, ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಈಗಾಗಲೇ ಬ್ರ್ಯಾಂಡ್ ಆಗಿರುವ ಈ ನಗರವನ್ನು ವಿಭಜಿಸುವ ಬದಲು ಉತ್ತರ ಕರ್ನಾಟಕದ ಅಭಿವೃದ್ಧಿಯ ಕೇಂದ್ರವಾಗಿ ರೂಪಿಸಬೇಕು ಎಂದರು.
ತಜ್ಞರ ಸಮಿತಿ ರಚಿಸಿನಗರಾಭಿವೃದ್ಧಿ ಇಲಾಖೆ, ನಿವೃತ್ತ ಐಎಎಸ್ ಅಧಿಕಾರಿಗಳು, ನಗರ ಯೋಜನಾ ತಜ್ಞರು ಹಾಗೂ ಅರ್ಥಶಾಸ್ತ್ರಜ್ಞರನ್ನು ಒಳಗೊಂಡ ತಜ್ಞರ ಸಮಿತಿ ರಚಿಸಿ, ಆರ್ಥಿಕ, ಸಾಮಾಜಿಕ ಹಾಗೂ ಆಡಳಿತಾತ್ಮಕ ಅಂಶಗಳ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಿದ ಬಳಿಕವೇ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ವೇದಿಕೆ ಆಗ್ರಹಿಸಿತು.
ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಸಮೃದ್ಧಿಯ ಕನಸು ಅಭಿವೃದ್ಧಿಯ ಸುವರ್ಣ ಅಧ್ಯಾಯ ಕರಪತ್ರ ಬಿಡುಗಡೆಗೊಳಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಮಾಜಿ ಮೇಯರ್ ಹನುಮಂತ ಡಂಬಳ, ಕೈಗಾರಿಕೋದ್ಯಮಿ ಮನೋಹರ ಕೊಟ್ಟೂರಶೆಟ್ಟರ, ಕಿರಣ್ ಸಾಂಬ್ರಾಣಿ, ಲಿಂಗರಾಜ ಧಾರವಾಡಶೆಟ್ಟರ, ವಿಜಯ ಗುಂಟ್ರಾಳ, ಜಗದೀಶ ಹಿರೇಮಠ, ವಿಕಾಸ ಸೊಪ್ಪಿನ, ಟಿ.ಎಸ್. ಪಾಟೀಲ ಸೇರಿದಂತೆ ಹಲವರಿದ್ದರು.