ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ

| Published : Jul 15 2024, 01:52 AM IST

ಸಾರಾಂಶ

ಜ್ಞಾನ ಸಂಪತ್ತು ಬಹು ಶ್ರೇಷ್ಠವಾದದ್ದು. ಸತತ ಓದು, ನಿರಂತರ ಅಧ್ಯಯನದಿಂದ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಜ್ಞಾನ ಸಂಪತ್ತು ಬಹು ಶ್ರೇಷ್ಠವಾದದ್ದು. ಸತತ ಓದು, ನಿರಂತರ ಅಧ್ಯಯನದಿಂದ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟೆ, ತಾಲೂಕು ಘಟಕ ರಬಕವಿ-ಬನಹಟ್ಟಿ, ಬಾಲಿಕಿಯರ ಪ್ರೌಢಶಾಲೆಯ ಕುವೆಂಪು ಸಾಹಿತ್ಯ ಸಂಘ ರಬಕವಿ ಇವರ ಸಂಯುಕ್ತಾಶ್ರಯದಲ್ಲಿ ಶಾಲೆಗಳೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಆಲಸ್ಯತನ ಬಿಟ್ಟು ಶ್ರದ್ಧೆ ಭಕ್ತಿಯಿಂದ ಓದಿದರೆ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಬೆಳೆಯುವುದು ಎಂದರು. ಬಾಲಿಕೆಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಪಿ.ಎಚ್. ಪ್ರತಾಪ ಅಧ್ಯಕ್ಷತೆ ವಹಿಸಿ ಸಮೃದ್ಧ ಸಾಹಿತ್ಯ ಕನ್ನಡದಲ್ಲಿದೆ. ಓದುವುದರ ಮೂಲಕ ಶಾಲಾ ಮಕ್ಕಳು ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದರು.

ಕನ್ನಡ ಸಾಹಿತ್ಯದಲ್ಲಿ ಕುಮಾರವ್ಯಾಸನ ಕಾವ್ಯ ಕರ್ಣಾಟಕ ಭಾರತ ಕಥಾ ಮಂಜರಿ ಕುರಿತು ಸರ್ಕಾರಿ ಪದವಿ ಪೂರ್ವಕಾಲೇಜು, ಪ್ರೌಢ ವಿಭಾಗ ಬನಹಟ್ಟಿಯ ಸುರೇಶ ಘಡಾಲೋಟಿ ಗಮಕ ವಾಚನದೊಂದಿಗೆ ಉಪನ್ಯಾಸ ನೀಡಿ ಕನ್ನಡ ಸಾಹಿತ್ಯ ಅದ್ಭುತವಾದದ್ದು. ರಾಮಾಯಣ ನಾವು ಹೇಗಿರಬೇಕು ಎಂದು ಹೇಳಿದರೆ, ಮಹಾಭಾರತ ನಾವು ಹೇಗಿದ್ದೇವೆ ಎಂದು ಹೇಳುತ್ತದೆ. ಸರ್ವಕಾಲದಲ್ಲಿ ಸರ್ವರಿಗೂ ಹಿತವನ್ನು ಉಂಟು ಮಾಡುವುದೇ ಸಾಹಿತ್ಯ. ಅಂತಹ ಸಾಹಿತ್ಯವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾದ ಮ.ಕೃ.ಮೇಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನಾದ್ಯಂತ ಸಾಹಿತ್ಯದ ಚಟುವಟಿಕೆಗಳು ನಿರಂತರ ಹಮ್ಮಿಕೊಳ್ಳಲಾಗುತ್ತಿದೆ. ವೈವಿದ್ಯಮಯ ಕಾರ್ಯಕ್ರಮಗಳ ಆಯೋಜನೆಗೆ ಕಸಾಪ ತಾಲೂಕು ಘಟಕ ಬದ್ಧವಾಗಿದೆ. ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುಲು ಈ ವಿನೂತನ ಕಾರ್ಯಕ್ರಮ ಗಮನ ಸೆಳೆಯುತ್ತಿದೆ ಎಂದರು.

ಹಿರಿಯ ಸಾಹಿತಿ ಮೃತ್ಯುಂಜಯ ರಾಮದುರ್ಗ, ಪತ್ರಕರ್ತ ಬಸಯ್ಯ ವಸ್ತ್ರದ, ಕಸಾಪ ಗೌರವ ಕಾರ್ಯದರ್ಶಿ, ಶಿಕ್ಷಣ ಸಂಯೋಜಕ ಶ್ರೀಶೈಲ ಬುರ್ಲಿ ವೇದಿಕೆಯಲ್ಲಿದ್ದರು. ವೈಷ್ಣವಿ ಸಣಕಲ್ ಪ್ರಾರ್ಥಿಸಿದರು. ಶಿಕ್ಷಕ ಶಿವಶರಣಪ್ಪ ಸ್ವಾಗತಿಸಿದರು. ಕನ್ನಡ ಭಾಷಾ ಶಿಕ್ಷಕ ವಿಜಯಕುಮಾರ.ಪಿ. ಮಾಳಿ ನಿರೂಪಿಸಿದರು. ತಾಲೂಕಾ ಕಸಾಪ ಪದಾಧಿಕಾರಿ ಯಶವಂತ ವಾಘ್ಮೋರೆ ವಂದಿಸಿದರು.

ರಬಕವಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಬಾಬು ಡಿ.ಎನ್., ನಿಂಗಪ್ಪ ಪೂಜಾರಿ, ಬಿದರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.