ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಪ್ರತಿಯೊಬ್ಬರ ಜೀವನ ಸುಧಾರಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಮಾದರಿ ಸಮಾಜ ರೂಪಿಸುವುದು ಇವತ್ತಿನ ಎಂಜಿನಿಯರ್ ಪದವೀಧರರ ಜವಾಬ್ದಾರಿಯಾಗಿದೆ ಎಂದು ಕನ್ಯಾಕುಮಾರಿಯ ನೂರುಲ್ ಇಸ್ಲಾಂ ಸೆಂಟರ್ ಫಾರ್ ಹೈಯರ್ ಎಜುಕೇಶನ್ ಕುಲಪತಿ ಡಾ.ಟೆಸ್ಸಿ ಥಾಮಸ್ ಹೇಳಿದರು.ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 24ನೇ ವಾರ್ಷಿಕ ಘಟಿಕೋತ್ಸವದ ಭಾಗ-2 ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಾವಲಂಬಿ, ಸುಸ್ಥಿರ ಭಾರತಕ್ಕೆ ತಾಂತ್ರಿಕ ನೈಪುಣ್ಯತೆ ಜೊತೆಗೆ ನೈತಿಕ ಹಾಗೂ ಸಾಮಾಜಿಕ ಜವಾಬ್ದಾರಿ ಅವಶ್ಯಕವಾಗಿದೆ. ನಾವು ಇಂದು ಅತಿ ವೇಗದ ತಾಂತ್ರಿಕ ಪ್ರಗತಿ ಯುಗದಲ್ಲಿ ಬದುಕುತ್ತಿದ್ದೇವೆ. ಕೃತಕ ಬುದ್ಧಿಮತ್ತೆ, ರೊಬೊಟಿಕ್ಸ್, ಬ್ಲಾಕ್‌ಚೈನ್, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಬಾಹ್ಯಾಕಾಶ ಪರಿಶೋಧನೆಗಳು ಜಗತ್ತನ್ನು ಮರುರೂಪಿಸುತ್ತಿವೆ. ನಾಲ್ಕನೇ ಕೈಗಾರಿಕಾ ಕ್ರಾಂತಿ ಅಥವಾ ಉದ್ಯಮ 4.0, ಇವುಗಳು ಒಂದು ದಶಕದ ಹಿಂದೆ ಊಹಿಸಲೂ ಸಾಧ್ಯವಾಗದ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸುತ್ತಿದೆ. ಆದ್ದರಿಂದ ಇವತ್ತಿನ ಪದವೀಧರರು ಈ ಕ್ರಿಯಾತ್ಮಕ ಹಾಗೂ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ಜಗತ್ತಿಗೆ ಕಾಲಿಡುತ್ತಿದ್ದಂತೆ ಅದಕ್ಕೆ ತಕ್ಕಂತೆ ಹೊಂದಿಕೊಳ್ಳಲು, ಕಲಿಯಲು ಮತ್ತು ನಾವೀನ್ಯತೆ ಸಾಧಿಸಲು ಸಿದ್ಧರಾಗಿರಬೇಕು ಎಂದು ಹೇಳಿದರು.
ವಿಕಸಿತ ಭಾರತ್ 2047, ಡಿಜಿಟಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾದಂತಹ ಯೋಜನೆಗಳು ನಮ್ಮ ದೇಶವು ತಂತ್ರಜ್ಞಾನ, ಉತ್ಪಾದನೆ ಮತ್ತು ನಾವೀನ್ಯತೆಯಲ್ಲಿ ಜಾಗತಿಕವಾಗಿ ನಾಯಕನಾಗಲು ಸಜ್ಜಾಗಿದೆ. ಈ ಸಮಯದಲ್ಲಿ ಇವತ್ತಿನ ಎಂಜಿನಿಯರ್ ಪದವೀಧರರಾದ ನೀವು ಹವಾಮಾನ ಬದಲಾವಣೆ, ಸಂಪನ್ಮೂಲ ಕೊರತೆ, ಅಸಮಾನತೆ ಮತ್ತು ಜಾಗತಿಕ ಆರೋಗ್ಯ ಬಿಕ್ಕಟ್ಟುಗಳಂತಹ ಸವಾಲುಗಳಿಗೆ ಸುಸ್ಥಿರ ಪರಿಣಾಮಕಾರಿ ಪರಿಹಾರ ಕಂಡುಕೊಂಡು ಮಾದರಿ ಸಮಾಜದ ವಾಸ್ತುಶಿಲ್ಪಿಗಳಂತೆ ಕೆಲಸಮಾಡಬೇಕಿದೆ ಎಂದು ಹೇಳಿದರು.ಭವಿಷ್ಯ ಕೇವಲ ತಾಂತ್ರಿಕ ನೈಪುಣತೆ ಮೇಲೆ ಅವಲಂಬಿತವಾಗದೆ ತಾಂತ್ರಿಕ ನೈಪುಣ್ಯತೆಯು ಕ್ರಿಯಾಶೀಲ, ವಿಮರ್ಶಾತ್ಮಕ ಚಿಂತನೆ, ನೈತಿಕ ಮತ್ತು ಸಾಮಾಜಿಕ ಪ್ರಜ್ಞೆ ಹಾಗೂ ಜವಾಬ್ದಾರಿ ಒಳಗೊಂಡಿರಬೇಕು. ಇವುಗಳ ಸಂಯೋಜನೆಯಿಂದಲೇ ಸುಸ್ಥಿರ ರಾಷ್ಟ್ರ ಕಟ್ಟಲು ಸಾಧ್ಯ. ತಂತ್ರಜ್ಞಾನವು ಉಚಿತ ಅಥವಾ ಸುಲಭವಾಗಿ ಸಿಗುವ ವಸ್ತುವಲ್ಲ. ಅದನ್ನು ಪಡೆಯಲು ನಾವು ಔಟ್ ಆಫ್ ದಿ ಬಾಕ್ಸ್ ಚಿಂತನೆಯೊಂದಿಗೆ ಸೃಜಶೀಲರಾಗಿ ನಮ್ಮ ರಾಷ್ಟ್ರಕ್ಕನುಗುಣವಾಗಿ ತಂತ್ರಜ್ಞಾನ ವಿನ್ಯಾಸಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಮಾತನಾಡಿ, ಒಂದು ರಾಷ್ಟ್ರದ ಅಭಿವೃದ್ಧಿ ಅದರ ತಂತ್ರಜ್ಞಾನ ಪ್ರಗತಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಇಂದಿನ ಪದವೀಧರರು ಸಾಮಾಜಿಕ ಪ್ರಜ್ಞೆಯೊಂದಿಗೆ ಹೊಸ ಕನಸಗಳನ್ನು ಕಾಣುವುದಲ್ಲದೆ ಅವುಗಳನ್ನು ನನಸಾಗುವತ್ತ ದೃಷ್ಟಿಹರಿಸಿ ವಿಕಸಿತ ಮತ್ತು ಆತ್ಮ ನಿರ್ಭರ ಭಾರತ ನಿರ್ಮಾಣದಲ್ಲಿ ತಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.ಇಂದಿನ ಪದವೀಧರರು ಪರಿಸರ ಸಂರಕ್ಷಣೆಯತ್ತ ಗಮನ ಹರಿಸಬೇಕು. ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣವನ್ನು ನೀಡುವ ಚಿಂತನೆ ಮಾಡಿ ಅನುಷ್ಠಾನಗೊಂಡಿದ್ದು ಇದು ಕ್ರಾಂತಿಕಾರಿ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದರು. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಕರ್ನಾಟಕವನ್ನು ಜಾಗತಿಕ ತಾಂತ್ರಿಕ ಶಿಕ್ಷಣ ಕೇಂದ್ರವನ್ನಾಗಿಸಲು ಅನುಷ್ಠಾನ ಮಾಡಿದ ಕಾರ್ಯಕ್ರಮಗಳನ್ನು ಶ್ಲಾಘಿಸಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿ ಇವತ್ತಿನ ಪದವೀಧರರು ರಾಷ್ಟ್ರದಲ್ಲಿ ಮತ್ತೆ ಸ್ವರ್ಣಯುಗ ಸ್ಥಾಪಿಸಿ ವಿಶ್ವಗುರವನ್ನಾಗಿ ಮಾಡಲು ಶ್ರಮಿಸಬೇಕು ಎಂದು ಹೇಳಿದರು.
ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ ಸ್ವಾಗತಿಸಿದರು. ವಿಟಿಯು ಕುಲಸಚಿವ ಪ್ರೊ.ಟಿ.ಎನ್.ಶ್ರೀನಿವಾಸ, ಪ್ರೊ.ಬಿ.ಈ.ರಂಗಸ್ವಾಮಿ, ಡೀನ್ ಪ್ರೊ.ಸದಾಶಿವೆಗೌಡ, ಹಣಕಾಸು ಅಧಿಕಾರಿ ಡಾ.ಪ್ರಶಾಂತ ನಾಯಕ, ಕಾರ್ಯಕಾರಿ ಪರಿಷತ್ ಹಾಗೂ ವಿದ್ಯಾ ವಿಧಾನ ಮಂಡಲ ಸದಸ್ಯರು, ಪೋಷಕರು ವಿಟಿಯು ಸಿಬ್ಬಂದಿ ಹಾಜರಿದ್ದರು.24ನೇ ವಾರ್ಷಿಕ ಘಟಿಕೋತ್ಸವ(ಭಾಗ -2)ದಲ್ಲಿ, ಎಂಬಿಎ 7194, ಎಂಸಿಎ -3784, ಎಂಟೆಕ್ -1313, ಎಂಆರ್ಕ್ -83 ಹಾಗೂ ಸಂಶೋಧನಾ ಪದವಿಗಳಾದ ಪಿಎಚ್‌ಡಿ -423 , ಎಂಎಸ್ಸಿ ಎಂಜನಿಯರಿಂಗ್ ಬೈ ರಿಸರ್ಚ್ 3 ಪದವಿಗಳನ್ನು ಪ್ರದಾನ ಮಾಡಲಾಯಿತು.
;Resize=(128,128))
;Resize=(128,128))