ಕೌಶಲ್ಯ ಕಲಿಯುವುದರಿಂದ ಉದ್ಯೋಗ ಕ್ಷೇತ್ರದಲ್ಲಿ ನೈಪುಣ್ಯತೆ ಹೆಚ್ಚಿಸಿಕೊಳ್ಳುವುದರ ಜತೆಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಾಧ್ಯ
ಬಳ್ಳಾರಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಜನರು ಉದ್ಯೋಗ ಪಡೆಯಲು ಶೈಕ್ಷಣಿಕ ಅರ್ಹತೆಯ ಜತೆಗೆ ಕೌಶಲ್ಯ ಬೆಳೆಸಿಕೊಳ್ಳುವುದು ಅಗತ್ಯ ಎಂದು ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತರೆಡ್ಡಿ ಹೇಳಿದರು.
ನಗರದಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕೌಶಲ್ಯಾಭಿವೃದ್ಧಿ ಕೇಂದ್ರದಿಂದ ಮಂಗಳವಾರ ಆಯೋಜಿಸಿದ್ದ ಕೌಶಲ್ಯ ತರಬೇತಿ ಪ್ರಮಾಣಪತ್ರ ವಿತರಣೆ ಹಾಗೂ ಉದ್ಯೋಗ ಅವಕಾಶಗಳ ಮಾಹಿತಿಗಾಗಿ ರೂಪಿಸಿರುವ ಜಾಬ್ ಪೋರ್ಟಲ್ ಗೆ ಚಾಲನೆ ನೀಡಿ ಮಾತನಾಡಿದರು.ಕೌಶಲ್ಯ ಕಲಿಯುವುದರಿಂದ ಉದ್ಯೋಗ ಕ್ಷೇತ್ರದಲ್ಲಿ ನೈಪುಣ್ಯತೆ ಹೆಚ್ಚಿಸಿಕೊಳ್ಳುವುದರ ಜತೆಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಾಧ್ಯ. ಯುವಜನರು ಉದ್ಯೋಗದಾತರ ನಿರೀಕ್ಷೆಗಳಿಗೆ ತಕ್ಕಂತೆ ತಾಂತ್ರಿಕ ಹಾಗೂ ವೃತ್ತಿಪರ ಕೌಶಲ್ಯ ಹೊಂದಬೇಕು ಎಂದರು.
ಸಂಜೀವರಾಯನಕೋಟೆ ಸಮೀಪ 600 ಎಕರೆ ಪ್ರದೇಶದಲ್ಲಿ ₹5 ಸಾವಿರ ಕೋಟಿ ಬಂಡವಾಳ ಹೂಡಿಕೆಯೊಂದಿಗೆ ಅಂತಾರಾಷ್ಟ್ರೀಯ ಮಟ್ಟದ ಜೀನ್ಸ್ ಗಾರ್ಮೆಂಟ್ ಪಾರ್ಕ್ ಆರಂಭಿಸುವ ಯೋಜನೆ ಇದ್ದು, ಇದರಿಂದ ಬಳ್ಳಾರಿ ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶ ದೊರೆಯಲಿವೆ. ಸ್ಥಳೀಯರಿಗೆ ಶೇ.80ರಷ್ಟು ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳಿಗೆ ತಮ್ಮ ಟಚ್ ಫಾರ್ ಲೈಫ್ ಫೌಂಡೇಶನ್‌ನಿಂದ ₹10 ಲಕ್ಷಗಳ ನೆರವು ನೀಡುವುದಾಗಿ ನಾರಾ ಭರತರೆಡ್ಡಿ ಘೋಷಿಸಿದರು.
ಸಂಸ್ಥೆಯ ಅಧ್ಯಕ್ಷ ಅವ್ವಾರು ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೌಶಲ್ಯವೇ ಯುವಜನರ ಭವಿಷ್ಯ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಶೈಕ್ಷಣಿಕ ಅರ್ಹತೆ ಹೊಂದಿರುವುದು ಸಾಲದು. ಉದ್ಯೋಗ ಕ್ಷೇತ್ರದ ಅಗತ್ಯಕ್ಕೆ ಅನುಗುಣವಾಗಿ ಪ್ರಾಯೋಗಿಕ ಜ್ಞಾನ, ತಾಂತ್ರಿಕ ಕೌಶಲ್ಯ ಹಾಗೂ ವೃತ್ತಿಪರ ಸಾಮರ್ಥ್ಯ ಹೊಂದಿರುವುದು ಅತ್ಯಂತ ಮುಖ್ಯ. ಸಂಸ್ಥೆಯ ಕೌಶಲ್ಯಾಭಿವೃದ್ಧಿ ಕೇಂದ್ರದ ಮೂಲಕ ವಿವಿಧ ತರಬೇತಿ ಪಡೆದು ಯುವಜನರು ತಮ್ಮ ವೃತ್ತಿ ಜೀವನ ರೂಪಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಮಾತನಾಡಿ, ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ ಸಂಸ್ಥೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಕೌಶಲ್ಯ ತರಬೇತಿ ಕೇಂದ್ರವು ಹಲವು ಯುವಜನರ ಭವಿಷ್ಯ ರೂಪಿಸುವ ವೇದಿಕೆಯಾಗಲಿದೆ ಎಂದು ತಿಳಿಸಿದರು.
ಕೌಶಲ್ಯಾಭಿವೃದ್ಧಿ ಕೇಂದ್ರದ ಸಿಇಒ ಡಾ.ಡಿ.ಎಲ್.ರಮೇಶಗೋಪಾಲ್ ಸ್ವಾಗತಿಸಿ, ಕೇಂದ್ರದ ಚಟುವಟಿಕೆಗಳು, ತರಬೇತಿ ಕಾರ್ಯಕ್ರಮಗಳು ಹಾಗೂ ತರಬೇತಿ ಪಡೆದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.ಐಟಿ ಕಮಿಟಿ ಚೇರ್ಮನ್ ಪಿ.ವೇಣುಗೋಪಾಲ ಗುಪ್ತ, ಜಾಬ್ ಪೋರ್ಟಲ್ ಉದ್ಯೋಗದಾತರು ಮತ್ತು ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿ ಕಾರ್ಯ ನಿರ್ವಹಿಸಲಿದೆ. ವಿವಿಧ ಸಂಸ್ಥೆಗಳು ತಮ್ಮ ಉದ್ಯೋಗದ ಅವಶ್ಯಕತೆ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಉದ್ಯೋಗಾಕಾಂಕ್ಷಿಗಳೂ ತಮ್ಮ ವಿದ್ಯಾರ್ಹತೆ, ಕೌಶಲ್ಯ ಹಾಗೂ ಅನುಭವದ ವಿವರಗಳೊಂದಿಗೆ ನೋಂದಣಿ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಿಸಲಾಯಿತು.ಕಾಳಿದಾಸ ಕಾರ್ಯಕ್ರಮ ನಿರೂಪಿಸಿದರು. ಕೌಶಲ್ಯಾಭಿವೃದ್ಧಿ ಕೇಂದ್ರದ ಚೇರ್ಮನ್ ಗಳ್ಳಿ ರಮೇಶ್ ವಂದಿಸಿದರು.ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಎಸ್.ದೊಡ್ಡನಗೌಡ, ಉಪಾಧ್ಯಕ್ಷ ಸೊಂತ ಗಿರಿಧರ್, ಪಿ.ಪಾಲಣ್ಣ, ಜಂಟಿ ಕಾರ್ಯದರ್ಶಿ ಡಾ.ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ.ರಾಮಚಂದ್ರ ಹಾಗೂ ಖಜಾಂಚಿ ಎಸ್. ಸತ್ಯನಾರಾಯಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.