ಸಮಾಜದಲ್ಲಿ ದೇಣಿಗೆ ನೀಡುವ ಮನೋಭಾವ ಹೊಂದಿರುವವರು ಸಾಕಷ್ಟು ಮಂದಿ ಇದ್ದಾರೆ

ಕುಷ್ಟಗಿ: ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಸೌಹಾರ್ದತೆ ಹಾಗೂ ಸಹಬಾಳ್ವೆ ಮತ್ತಷ್ಟು ಗಟ್ಟಿಯಾಗಬೇಕು. ಸಮಾಜಮುಖಿ ಕಾರ್ಯಗಳಲ್ಲಿ ಯುವಕರು ಸಕ್ರಿಯವಾಗಿ ತೊಡಗಿಸಿಕೊಂಡು ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದು ತುಂಗಭದ್ರಾ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ ಕರೆ ನೀಡಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಸಮೀಪದ ವಣಗೇರಿ ಹಳೆ ರಸ್ತೆಯಲ್ಲಿರುವ ಖಬರಸ್ತಾನದಲ್ಲಿ ನೂತನ ನಾಮಫಲಕ ಹಾಗೂ ಮೇನ್ ಗೇಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಮಾಜದಲ್ಲಿ ದೇಣಿಗೆ ನೀಡುವ ಮನೋಭಾವ ಹೊಂದಿರುವವರು ಸಾಕಷ್ಟು ಮಂದಿ ಇದ್ದಾರೆ. ಅಂತಹ ದಾನಿಗಳನ್ನು ಗುರುತಿಸಿ, ಅವರ ಸಹಕಾರ ಸಮಾಜದ ಅಭಿವೃದ್ಧಿ ಹಾಗೂ ಅಗತ್ಯ ಕಾರ್ಯಗಳಿಗೆ ಬಳಸಿಕೊಳ್ಳುತ್ತಿರುವುದು ಸಂತಸದ ಸಂಗತಿ. ಖಬರಸ್ತಾನದ ಅಭಿವೃದ್ಧಿಗೆ ದಾನಿಗಳು ಹಾಗೂ ಸಮಾಜದ ಮುಖಂಡರು ನೀಡಿದ ಸಹಕಾರ ಶ್ಲಾಘನೀಯ ಎಂದರು.

ಖಬರಸ್ತಾನವು ಸಮುದಾಯದ ಭಾವನೆ, ನಂಬಿಕೆ ಹಾಗೂ ಗೌರವಕ್ಕೆ ಸಂಬಂಧಿಸಿದ ಪವಿತ್ರ ಸ್ಥಳವಾಗಿದೆ. ಇಂತಹ ಸ್ಥಳಗಳ ಅಭಿವೃದ್ಧಿಗೆ ಎಲ್ಲರೂ ತಮ್ಮ ಕೈಲಾದಷ್ಟು ಸಹಕಾರ ನೀಡಬೇಕು. ನಾಮಫಲಕ ಹಾಗೂ ಸುಸಜ್ಜಿತ ಮೇನ್ ಗೇಟ್ ನಿರ್ಮಾಣದಿಂದ ಖಬರಸ್ತಾನದ ಪ್ರವೇಶಕ್ಕೆ ಉತ್ತಮ ರೂಪ ದೊರೆತಿದ್ದು, ಇದು ಒಗ್ಗಟ್ಟಿನ ಕಾರ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಇಂದಿನ ಸಮಾಜದಲ್ಲಿ ಪರಸ್ಪರ ಪ್ರೀತಿ, ಗೌರವ ಮತ್ತು ವಿಶ್ವಾಸ ಬೆಳೆಸಿಕೊಳ್ಳುವುದು ಅಗತ್ಯ. ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಸ್ಪಂದಿಸುವ ಮನೋಭಾವ ಬೆಳೆಸಿಕೊಂಡಾಗ ಸಮಾಜ ಮತ್ತಷ್ಟು ಬಲಿಷ್ಠವಾಗುತ್ತದೆ. ಯುವಕರು ವೈಯಕ್ತಿಕ ಬೆಳವಣಿಗೆಯ ಜತೆಗೆ ಸಮಾಜದ ಅಭಿವೃದ್ಧಿಗೂ ತಮ್ಮ ಸಮಯ ಮತ್ತು ಶ್ರಮ ಮೀಸಲಿಡಬೇಕು ಎಂದು ಹೇಳಿದರು.

ಸಿಪಿಐ ವಿಶ್ವನಾಥ ಹಿರೇಗೌಡರ್ ಮಾತನಾಡಿ, ಯುವಕರು ಸಮಾಜದಲ್ಲಿ ಉತ್ತಮ ಕಾರ್ಯ ಕೈಗೊಳ್ಳಲು ಮುಂದೆ ಬರಬೇಕು. ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆ ಕಾಪಾಡುವಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ನಮ್ಮ ಹಿರಿಯರು ಪರಸ್ಪರ ಪ್ರೀತಿ, ಗೌರವ ಮತ್ತು ಸೌಹಾರ್ದದಿಂದ ಬದುಕುತ್ತಿದ್ದರು. ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಸ್ಪಂದಿಸುವ ಉತ್ತಮ ಪರಂಪರೆ ನಮ್ಮಲ್ಲಿದೆ. ಅದನ್ನು ಇಂದಿನ ಪೀಳಿಗೆ ಮುಂದುವರಿಸಬೇಕು. ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿದಾಗ ಮಾತ್ರ ಉತ್ತಮ ಬದಲಾವಣೆ ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುರ್ತುಜಾ ಸಾಬ್ ಅತ್ತಾರ್, ನಜೀರ್ ಸಾಬ್ ಮೂಲಿಮನಿ, ಸೈಯದ್ ಮುರ್ತುಜಾ, ನಿಜಾಮ ಕಪಾಲಿ, ಜಮೀರ್ ಟಕ್ಕಳಕಿ, ಸೈಯದ್ ಆಟೋ, ಆಲಂ ಕಲಬುರಗಿ, ರಹೀಂ ಚೌದ್ರಿ, ತಾಹಿರ್ ಕಪಾಲಿ, ಆಸಿಫ್, ಮೊಹಮ್ಮದ್, ಹಿಜಾಜ್ ಕಪಾಲಿ ಸೇರಿದಂತೆ ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಖಬರಸ್ತಾನದ ಅಭಿವೃದ್ಧಿಗೆ ದೇಣಿಗೆ ನೀಡಿದ ಕನಕಪುರ ಕುಟುಂಬದ ಸೇವೆ ಸ್ಮರಿಸಿ, ಕುಟುಂಬದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.